ಸನ್ಮಾರ್ಗ ವಾರ್ತೆ
ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರ 3ನೇ ಬಜೆಟ್ ಮಂಡನೆಯು ದೇಶದ ಸಾರ್ವತ್ರಿಕ ವಲಯಗಳನ್ನು ಮುಕ್ತ ಮಾರುಕಟ್ಟೆಗೆ ತೆರದಿಟ್ಟ ಬಜೆಟ್ ಆಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ಟೀಕಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿದ ಅವರು, ರೈತ-ಕಾರ್ಮಿಕ, ವಿದ್ಯಾರ್ಥಿ-ಯುವಜನ, ಮಹಿಳೆಯರ ಪಾಲಿಗೆ ಮರಣ ಶಾಸನ ಬರೆದು ಕಾರ್ಪೊರೇಟ್ ಕಂಪನಿಗಳಿಗೆ ವರವಾಗುವಂತಹ ಲೆಕ್ಕಚಾರ ಈ ಬಜೆಟ್ನದ್ದಾಗಿದೆ.
ರೈತರಿಗೆ ಈ ಬಜೆಟ್ನಲ್ಲಿ ಏನು ಇಲ್ಲ. ಕಾರ್ಮಿಕರಿಗೆ ಮತ್ತು ನಿರುದ್ಯೋಗಿ ಯುವಕರನ್ನು ಕಡೆಗಣಿಸಿದ ಬಜೆಟ್. ಏರ್ ಇಂಡಿಯಾ ಹಾಗೂ ರೈಲ್ವೆ ಮತ್ತು ಎಲ್ಐಸಿ ಸೇರಿದಂತೆ ಇತರೆ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಲಾಗಿದೆ. ಜಾಗತೀಕರಣ, ಉದಾರೀಕರಣ ನೀತಿಗಳನ್ನು ಜಾರಿ ಮಾಡುವ ನಿಯತ್ತಿನ ಬಜೆಟ್ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್-ಡೀಸೆಲ್ ಬೆಲೆ ಏರಿಸಲಾಗಿದೆ. ಇತಿಹಾಸದಲ್ಲಿ ಕಂಡು ಕೇಳರಿಯದಂತ ಜನ ವಿರೋಧಿ ನೀತಿಗಳಿಗೆ ಮಣೆ ಹಾಕುವ, ಕಾರ್ಪೊರೇಟ್ ಕಂಪನಿಗಳನ್ನು ಕಾಪಾಡುವ ಬಜೆಟ್ ಇದಾಗಿದೆ.
ಇದು ಆತ್ಮ ನಿರ್ಭರ್ ಬಜೆಟ್ ಅಲ್ಲ; ಬದಲಾಗಿ ದೇಶದ ಸಮಸ್ತ ದುಡಿಯುವ ವರ್ಗದ ವಿರೋಧಿಯಾಗಿರುವ ಬಜೆಟ್ ಇದಾಗಿದೆ ಎಂದು ಹೇಳಿದರು.












