ಯಾರು ಈ ಜೈಲು ಪಾಲಾದ ನವ್‍ದೀಪ್ ಕೌರ್?: ಮೀನಾ ಹ್ಯಾರಿಸ್‍ರ ಟ್ವೀಟ್ ಇಡೀ ಜಗತ್ತೇ ಅವರತ್ತ ನೋಡುವಂತೆ ಮಾಡಿತೇ!

0
1214

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪಾಪ್ ಗಾಯಕಿ ರಿಹಾನ್ನರ ಟ್ವೀಟ್‍ನ ಬೆನ್ನಿಗೆ ದಿಲ್ಲಿಯ ರೈತ ಹೋರಾಟ ಜಾಗತಿಕ ಗಮನ ಸೆಳೆಯಿತು. ಸೆಲಬ್ರಿಟಿಗಳ ಸಹಿತ ನೂರಾರು ಮಂದಿ ರೈತರಿಗೆ ಬೆಂಬಲವನ್ನು ಘೋಷಿಸಿದರು. ರೈತರ ಹೋರಾಟದೊಂದಿಗೆ ಜಗತ್ತು ಅತ್ತ ತಿರುಗಿ ನೋಡುವ ಇನ್ನೊಂದು ಹೆಸರು ನವ್‍ದೀಪ್ ಕೌರ್. ಪಂಜಾಬಿ ಕಾರ್ಮಿಕ ಹಕ್ಕು ಕಾರ್ಯಕರ್ತೆ ನವ್‍ದೀಪ್ ಕೌರ್ ಕಳೆದ 25 ದಿವಸಗಳಿಂದ ಜೈಲಿನೊಳಗಿದ್ದಾರೆ.

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‍ರ ಸೊಸೆ, ಸಾಮಾಜಿಕ ಕಾರ್ಯಕರ್ತೆ ಮೀನಾ ಹ್ಯಾರಿಸ್‍ರ ಟ್ವೀಟ್‍ನ ನಂತರ ನವ್‍ದೀಪ್ ಕೌರ್ ಬಂಧನದಲ್ಲಿ ಜೈಲಿನಲ್ಲಿ ಅನುಭವಿಸುತ್ತಿರುವ ಕಠಿಣ ಹಿಂಸೆ ಚರ್ಚೆಯಾಗುತ್ತಿದೆ. ತನ್ನ ವಿರುದ್ಧ ಸೈಬರ್ ದಾಳಿ, ಪ್ರತಿಭಟನೆ ತೀವ್ರಗೊಂಡ ನಂತರ ಮೀನಾ ಹ್ಯಾರಿಸ್ ನವ್‍ದೀಪ್ ಕೌರ್‌ರ ವಿಚಾರವನ್ನು ಟ್ವೀಟ್ ಮಾಡಿದ್ದರು. 23 ವರ್ಷದ ನವ್‍ದೀಪ್ ಕ್ರೂರ ಹಿಂಸೆ, ಲೈಂಗಿಕ ಅತ್ಯಚಾರಕ್ಕೆ ಒಳಗಾಗಿದ್ದಾರೆ ಎಂದು ಮೀನಾ ಹೇಳುತ್ತಿದ್ದಾರೆ.

ನವ್‍ದೀಪ್ ಕೌರ್ ಪಂಜಾಬಿನ ದಲಿತ ಹೋರಾಟಗಾರ್ತಿ ಕೂಡ ಆಗಿದ್ದಾರೆ. ಅವರು ಕುಂಡ್ಲಿ ಮೆಟಲ್ ಕಟ್ಟಿಂಗ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಮಝ್ದೂರ್ ಅಧಿಕಾರ್ ಸಂಘಟನ್ ಎಂಬ ಸಂಘಟನೆಯ ಸದಸ್ಯೆಯಾಗಿದ್ದಾರೆ. ಸಿಂಘು ಗಡಿಯಲ್ಲಿ ರೈತರು ಪ್ರತಿಭಟನೆ ಆರಂಭಿಸಿದ ವೇಳೆ ಡಿಸೆಂಬರ್‌ನಲ್ಲಿ ನವ್‍ದೀಪ್ ಕೌರ್ ಪ್ರತಿಭಟನೆಗೆ ದುಮುಕಿದರು. ಪ್ರತಿಭಟನೆ ಸೇರಿದ ಕೂಡಲೇ ನವ್‍ದೀಪ್‌‌ಗೆ ಸಂಬಳವನ್ನು ನೀಡದೆ ಕೆಲಸದಿಂದ ತೆಗೆದು ಹಾಕಲಾಯಿತೆಂದು ವರದಿಯಾಗಿತ್ತು.

ಜನವರಿ 12ಕ್ಕೆ ಸಿಂಘು ಗಡಿಯಲ್ಲಿ ನವ್‍ದೀಪ್ ಕೌರ್‌ರನ್ನು ಬಂಧಿಸಲಾಗಿತ್ತು. ನವ್‍ದೀಪ್ ಹರಿಯಾಣ ಪೊಲೀಸ್ ಎತ್ತ ಕರೆದುಕೊಂಡು ಹೋಗಿದ್ದಾರೆ ಎಂದು ಮನೆಯವರಿಗೂ ಗೊತ್ತಿರಲಿಲ್ಲ. ನಂತರ ಇವರು ಕರ್ನಾಲ್ ಜೈಲಿನಲ್ಲಿದ್ದಾರೆ ಎಂದು ತಿಳಿದು ಬಂದಿತ್ತು. ಕೊಲೆ ಯತ್ನ ಮುಂತಾದ ಆರೋಪವನ್ನು ನವ್‍ದೀಪ್ ಕೌರ್ ವಿರುದ್ಧ ಪೊಲೀಸರು ಹೊರಿಸಿದ್ದಾರೆ. ಕೊಳ್ಳೆ ಹೊಡೆಯುವಿಕೆ, ಮಾರಕಾಯುಧಗಳೊಂದಿಗೆ ಗಲಾಟೆ ಮಾಡುವಿಕೆ. ಕ್ರಿಮಿನಲ್ ಸಂಚು ಪೊಲೀಸರ ಮೇಲೆ ದಾಳಿ ಮುಂತಾದ ಆರೋಪಗಳನ್ನು ಕೌರ್‌ರ ಮೇಲೆ ಹೊರಿಸಲಾಗಿದೆ.

ಸಹೋದರಿ ರಜ್‍ವೀರ ಕೌರ್ ಕರ್ನಾಲ್ ಜೈಲಿಗೆ ಹೋಗಿ ನವದೀಪ್‍ರನ್ನು ಭೇಟಿಯಾಗಿದ್ದರು. ಇದರ ನಂತರ ಜೈಲಿನಲ್ಲಿ ನವ್‍ದೀಪ್ ಎದುರಿಸಿದ ಹಿಂಸೆಗಳು ಬಯಲಿಗೆ ಬಂತು. ಪುರುಷ ಪೊಲೀಸರು ನವ್‍ದೀಪ್‍ರನ್ನು ಕ್ರೂರವಾಗಿ ಹೊಡೆದಿದ್ದಾರೆ. ಲೈಂಗಿಕ ದಾಳಿಯನ್ನು ಪೊಲೀಸರಿಂದ ನವ್‍ದೀಪ್ ಕೌರ್ ಎದುರಿಸಿದರು. ಖಾಸಗಿ ಭಾಗಗಳಿಗೆ ಗಾಯಗಳಾಗಿವೆ ಎಂದು ಸಹೋದರಿ ಹೇಳಿದ್ದಾರೆ. ವೈದ್ಯಕೀಯ ವರದಿಯಲ್ಲಿ ಲೈಂಗಿಕ ದಾಳಿ ನಡೆದಿರುವುದು ದೃಢಪಟ್ಟಿದೆ ಎಂದು ಇವರ ವಕೀಲರು ಹೇಳಿದರು.

ಮನೆಯ ಆರ್ಥಿಕ ಸ್ಥಿತಿ ಉತ್ತಮ ಪಡಿಸುವುದು ಅದರ ಜೊತೆಗೆ ಶಿಕ್ಷಣ ಮುಂದುವರಿಸುವ ಉದ್ದೇಶದಿಂದ ನವ್‍ದೀಪ್ ಕೆಲಸಕ್ಕೆ ಸೇರಿದ್ದರು. ಕೆಲಸದ ಸ್ಥಳದಲ್ಲಿ ತಾರತಮ್ಯ, ಹಿಂಸೆ, ಕಡಿಮೆ ವೇತನದ ವಿರುದ್ಧ ನವ್‍ದೀಪ್ ನಿರಂತರ ಧ್ವನಿ ಎತ್ತುತ್ತಿದ್ದರು.
ಸಿಂಘು ಗಡಿಯ ಹೋರಾಟ ಕೇಂದ್ರದಿಂದ ನವ್‍ದೀಪ್ ಮಾತಾಡುವ ವೀಡಿಯೊ ದೃಶ್ಯಗಳು ಹೊರಬಂದಿವೆ. ರೈತರ ಹೋರಾಟದ ಜೊತೆಗೆ ಕಾರ್ಮಿಕರು ಹೋರಾಟದಲ್ಲಿ ಸೇರಿಕೊಳ್ಳುವ ಅಗತ್ಯದ ಕುರಿತು ಅವರು ಮಾತಾಡಿದ್ದರು. ಎಲ್ಲ ಕ್ಷೇತ್ರದಲ್ಲಿಯೂ ಖಾಸಗೀಕರಣ ಮಾಡುತ್ತಿದೆ ಎಂದು ಅವರು ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸಿದ್ದರು.

ಫೆಬ್ರುವರಿ ಎರಡಕ್ಕೆ ನವ್‍ದೀಪ್‍ರಿಗೆ ಜಾಮೀನಿಗಾಗಿ ಕೋರ್ಟಿಗೆ ಹೋದರು ಪ್ರಯೋಜನವಾಗಿಲ್ಲ. ಮೀನಾ ಹ್ಯಾರಿಸ್‍ರ ಟ್ವೀಟ್‍ನ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ನವ್‍ದೀಪ್ ಬಿಡುಗಡೆಯ ಬೇಡಿಕೆಯೊಂದಿಗೆ ರಿಲೀಸ್ ನವ್‍ದೀಪ್ ಕೌರ್ ಎಂಬ ಹ್ಯಾಶ್ ಟ್ಯಾಗ್ ಆರಂಭವಾಗಿದೆ.