ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ತೊಕ್ಕೊಟ್ಟು ಫ್ಲೈ ಓವರ್ ಪಕ್ಕದ ಉಳ್ಳಾಲ ಕ್ರಾಸ್ ದಾಟಲು, ಪ್ರತಿನಿತ್ಯ ವಾಹನ ಚಾಲಕರು ಪಡುವ ಹರಸಾಹಸ ಬೇರೆಲ್ಲೂ ಕಾಣಸಿಗದು. ವಿಶೇಷವಾಗಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಂತೂ ಜೀವವನ್ನು ಕೈಯಲ್ಲಿ ಹಿಡಿದು ಕ್ರಾಸ್ ದಾಟಬೇಕಾಗಿದೆ. ಈ ಮಧ್ಯೆ ಅಪಘಾತಗಳು ಸಂಭವಿಸಿ, ಜೀವಗಳು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಕೊನೆಯುಸಿರೆಳೆದ ಘಟನೆಗಳೂ ಇವೆ.
ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ವಾಹನಗಳು ಪರಸ್ಪರ ಅಪಘಾತಕ್ಕೊಳಗಾಗುತ್ತಲೇ ಇವೆ. ಬಿದ್ದು ಮೈಕೈ ಗಾಯ ಮಾಡಿಕೊಂಡವರೂ ಹಲವರು. ತೊಕ್ಕೊಟ್ಟು ಫ್ಲೈಓವರ್ ಸೇತುವೆ ನಿರ್ಮಾಣದ ಆರಂಭದಲ್ಲೇ ಬಹಳಷ್ಟು ಟೀಕೆ, ಅಪಸ್ವರಗಳು ಕೇಳಿ ಬಂದಿತ್ತು. ದೂರಾಲೋಚನೆಗಳಿಲ್ಲದ ಅವೈಜ್ಞಾನಿಕ ಯೋಜನೆಯೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯೂ ನಡೆದಿತ್ತು. ಹಾಗೆಯೇ ಕೆಲಸ ಫಿನಿಷಿಂಗ್ ಆಗುವ ಮೊದಲೇ ತರಾತುರಿಯಲ್ಲಿ ಮೇಲ್ಸೇತುವೆಯ ಉದ್ಘಾಟನೆಯೂ ನಡೆಯಿತು. ನಮ್ಮಲ್ಲಿ ಹಾಗೆ ತಾನೆ. ನಮ್ಮ ಜನಪ್ರತಿನಿಧಿಗಳು ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಬಹಳ ಆವೇಶ, ಅದ್ದೂರಿಯಿಂದ ಬಹುಬೇಗನೆ ನಡೆಸಿ ಮುಗಿಸುತ್ತಾರೆ.
ಸಾರ್ವಜನಿಕರ ಹಿತಸಕ್ತಿಗಳಿಗಿಂತಲೂ ರಾಜಕೀಯ ಲಾಭದ ಲೆಕ್ಕಾಚಾರವೇ ಅವರ ಕಾಳಜಿ. ಆ ಬಳಿಕದ ಸಮಸ್ಯೆ, ಗೊಂದಲಗಳೇನಿದ್ದರೂ ಓಟು ಹಾಕಿದ ಸಾರ್ವಜನಿಕರೇ ಅನುಭವಿಸಬೇಕು.
ಇಂದು ಅಲ್ಲಲ್ಲಿ ತಲೆಯೆತ್ತಿರುವ ಹೆಚ್ಚಿನ ಕಾಂಕ್ರೀಟ್ ರಸ್ತೆಯ ಇಕ್ಕೆಲಗಳಲ್ಲಿ ನಡೆದಾಡಲೂ ಸಾಧ್ಯವಿಲ್ಲ. ಎದುರಿಗೆ ಬಂದ ವಾಹನಕ್ಕೆ ದಾರಿಕೊಡಲು ವಾಹನ ಬದಿಗೆ ಸರಿದರೆ, ಅಪೂರ್ಣಗೊಂಡ ಚರಂಡಿಗಳ ಹೊಂಡಕ್ಕೆ ಬೀಳುವುದಂತೂ ಖಚಿತ. ಅಷ್ಟಕ್ಕೂ ಫಿನಿಷಿಂಗ್ ಇಲ್ಲದ ರಸ್ತೆಗಳು. ಚರಂಡಿಯ ವ್ಯವಸ್ಥೆಯನ್ನೂ ಪೂರ್ತೀಕರಿಸದೆ ಅರ್ಧಂಬರ್ಧದಲ್ಲೇ ಬಿಟ್ಟುಬಿಡಲಾಗುತ್ತದೆ.
ಈ ಕುರಿತು ಜನರು ಪ್ರಶ್ನಿಸಿದರೆ ಸರಕಾರದಿಂದ ಅನುದಾನ ಬಂದದ್ದು ಇಷ್ಟೇ ಎನ್ನುತ್ತಾರೆ. ಸರಿ, ಪಕ್ಷದ ಕಾರ್ಯಕರ್ತರನ್ನು ಮತ್ತು ಊರವರನ್ನು ಜೊತೆಗೂಡಿಸಿ ಬಾಕಿ ಕೆಲಸಗಳನ್ನು ಶ್ರಮದಾನದ ಮೂಲಕ ಪೂರ್ತೀಕರಿಸಬಹುದಲ್ಲವೇ? ವಾರ್ಡ್ ಪ್ರತಿನಿಧಿ ಮತ್ತು ಮತದಾರರಿಗೆ ಚುನಾವಣಾ ಸಮಯದ ಹೊರತು ಬೇರೆ ಯಾವ ಸಂಬಂಧ, ಸಂಪರ್ಕಗಳಿವೆ? ವಾರ್ಡ್ ಕಮಿಟಿ ರಚಿಸಬೇಕೆಂದು ನ್ಯಾಯಾಲಯದ ಆದೇಶವಿದ್ದರೂ ಜನಪ್ರತಿನಿಧಿಗಳು ಯಾಕೆ ಹಿಂದೇಟು ಹಾಕುವುದು? ಹಾಗೆಯೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾರ್ಡ್ನ ಜನರೊಂದಿಗೆ ಸಮಾಲೋಚನೆ ನಡೆಸದೆ, ಅಭಿಪ್ರಾಯ ಕೇಳದೆ ಏಕಾಏಕಿ ಯಾವುದೇ ಕೆಲಸಕ್ಕೆ ಧುಮುಕುವಂತಿಲ್ಲ ತಾನೆ?
ಬೇಜಾರಿನ ಸಂಗತಿಯೇನೆಂದರೆ, ಈಗ ಉಳ್ಳಾಲಕ್ಕೆ ಹೋಗುವವರು ತೊಕ್ಕೊಟ್ಟು ಜಂಕ್ಷನ್ನಿಂದ ಮೇಲ್ಸೇತುವೆಯ ಅಡಿಯಲ್ಲಿ ಎಡಕ್ಕೆ ತೆಗೆದು ಉಲ್ಟ ಹೋಗಿ, ಮುಂದೆ ಬಲಕ್ಕೆ ಕ್ರಾಸಿಂಗ್ ಮಾಡಬೇಕಾಗುತ್ತದೆ. ಹಾಗೆ ಕ್ರಾಸಿಂಗ್ ಮಾಡುವಾಗ ಉಳ್ಳಾಲ ಮತ್ತು ತಲಪಾಡಿ ಕಡೆಯಿಂದ ಬರುವ ವಾಹನಗಳು ತೊಕ್ಕೊಟ್ಟು ಜಂಕ್ಷನ್ಗೆ ಹೋಗುವುದೋ ಅಥವಾ ಮೇಲ್ಸೇತುವೆಯನ್ನು ಏರುವುದೋ ಎಂಬುವುದರ ಕಡೆ ವಿಶೇಷ ದೃಷ್ಟಿ ಹಾಯಿಸದೆ ಹೋದರೆ, ಅಪಘಾತವಾಗುವ ಸಾಧ್ಯತೆಯೇ ಅಧಿಕ. ಈಗಾಗಲೇ ತಿಳಿಸಿದಂತೆ ದ್ವಿಚಕ್ರ ವಾಹನ ಚಾಲಕರಂತೂ ಜೀವವನ್ನು ಕೈಯಲ್ಲಿಟ್ಟೇ ದಾಟಬೇಕಾಗುತ್ತದೆ. ತೊಕ್ಕೊಟ್ಟು ಜಂಕ್ಷನ್ನ ಕ್ರಾಸಿಂಗ್ ಕೂಡಾ ಅಷ್ಟೇ ತ್ರಾಸದಾಯಕವಾದುದು. ಕೆಲವೊಮ್ಮೆ ಪೋಲೀಸರು ಅಲ್ಲೇ ಪಕ್ಕದಲ್ಲಿ ನಿಂತು ವಾಹನ ಚಾಲಕರನ್ನು ನಿಲ್ಲಿಸಿ ಕೇಸು ದಾಖಲಿಸುವುದೂ ಇದೆ.
ನಿಜವಾಗಿ ಈ ಹಿಂದೆ ಹೆಚ್ಚಾಗಿ ತೊಕ್ಕೊಟ್ಟು ಒಳಪೇಟೆಯ ಮೂಲಕ ಕೃಷ್ಣನಗರ, ಸೆಬಾಸ್ಟಿಯನ್ ಚರ್ಚ್ ರೋಡ್, ಟಿ.ಸಿ. ರೋಡ್, ಹಳೇಕೋಟೆ, ಅಕ್ಕರೆಕೆರೆ, ಮಂಚಿಲ, ಭಟ್ರಗುಡ್ಡೆ, ರೈಲ್ವೆ ಸ್ಟೇಷನ್, ಅಳೇಕಲ, ಮಾರ್ಗತಲೆ… ಮುಂತಾದ ಪ್ರದೇಶಗಳಿಗೆ ಹೋಗಬೇಕಾದವರು ಶ್ರೀರತ್ನಮ್ ಹೋಟೆಲ್ನ ಹಿಂದುಗಡೆಯ, ಹುದಾ ಮಸೀದಿ ಮತ್ತು ಶ್ರೀ ಮಹಾ ಮಾರಿಯಮ್ಮ ದೇವಸ್ಥಾನದ ಪಕ್ಕದ ರೈಲ್ವೆ ಹಳಿಯ ಅಡಿಯ ಕಿರು ರಸ್ತೆಯನ್ನು ಬಳಸುತ್ತಿದ್ದರು. ದ್ವಿಚಕ್ರ ವಾಹನ ಚಾಲಕರಿಗಂತೂ ಇದು ಉಳ್ಳಾಲ ರಸ್ತೆಯ ಹಳೆಯ ಓವರ್ ಬ್ರಿಜ್ಗೆ ಸುತ್ತು ಬರುವುದಕ್ಕಿಂತ ದೊಡ್ಡ ಉಪಕಾರವಾಗುತ್ತಿತ್ತು. ಅಟೋ ಚಾಲಕರೂ ಇದೇ ರಸ್ತೆಯನ್ನು ಬಳಸುತ್ತಿದ್ದರು.
ಆದರೆ, ಇತ್ತೀಚೆಗೆ ಈ ರಸ್ತೆಯನ್ನು ಮುಚ್ಚಲಾಗಿದ್ದು, ರೈಲ್ವೆ ಇಲಾಖೆಯ ಕಾರಣಗಳನ್ನು ಹೇಳಲಾಗುತ್ತದೆ. ಆದರೆ ಕನಿಷ್ಠ ದ್ವಿಚಕ್ರ ವಾಹನಗಳಿಗಾದರೂ ಬಹುಕಾಲದ ಈ ರಸ್ತೆಯನ್ನು ಒಂದಷ್ಟು ಸರಿಪಡಿಸಿಯೇ ಬಳಸಲು ಅನುವು ಮಾಡಿಕೊಟ್ಟರೆ, ತೊಕ್ಕೊಟ್ಟಿನ ಹೊಸ ಮೇಲ್ಸೇತುವೆಯ ಕ್ರಾಸಿಂಗ್ನಲ್ಲಾಗುವ ಅನೇಕ ಅಪಘಾತಗಳನ್ನು ತಪ್ಪಿಸಬಹುದು. ದ್ವಿಚಕ್ರ ವಾಹನ ಚಾಲಕರಿಗಂತೂ ಒಂದಷ್ಟು ನೆಮ್ಮದಿ ದೊರೆತೀತು. ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ವಿಶೇಷ ಗಮನಹರಿಸಿದರೆ ಸಾರ್ವಜನಿಕರಿಗೆ ದೊಡ್ಡ ಉಪಕಾರವಾಗಬಹುದು.













