ಮ್ಯಾನ್ಮಾರ್: ಸೇನೆಯ ವಿರುದ್ಧ ಬೀದಿಗಿಳಿದ 38 ಮಂದಿಯ ಹತ್ಯೆ

0
733

ಸನ್ಮಾರ್ಗ ವಾರ್ತೆ

ಮ್ಯಾನ್ಮಾರ್: ಸೇನೆಯ ವಿರುದ್ಧ ಬೀದಿಗಿಳಿದ ಪ್ರತಿಭಟನಾಕಾರರ ಮೇಲೆ ಮ್ಯಾನ್ಮಾರಿನ ಸೇನೆ ಗುಂಡು ಹಾರಿಸಿದ ಪರಿಣಾಮ ಮೂವತ್ತೆಂಟು ಮಂದಿ ಸಾವಿಗೀಡಾಗಿದ್ದಾರೆ. ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾಯಿತ ಸರಕಾರವನ್ನು ಬುಡಮೇಲುಗೊಳಿಸಿ ಆಂಗ್ ಸಾನ್ ಸೂಕಿ ಸಹಿತ ನಾಯಕರನ್ನು ಬಂಧಿಸಿದ ಕ್ರಮವನ್ನು ಪ್ರತಿಭಟಿಸಿ ನಗರದುದ್ದಕ್ಕೂ ಪ್ರತಿಭಟನೆ ನಡೆಯಿತು. ಊರವರು ಮತ್ತು ಸೇನೆಯ ನಡುವೆ ಘರ್ಷಣೆಯಾಗಿ ಸೈನ್ಯ ಗುಂಡು ಹಾರಿಸಿ 38 ಮಂದಿಯನ್ನು ಬೇರೆ ಬೇರೆ ನಗರಗಳಲ್ಲಿ ಕೊಂದು ಹಾಕಿದೆ ಎಂದು ವರದಿಯಾಗಿದೆ.

ಫೆಬ್ರುವರಿ ಒಂದಕ್ಕೆ ಸ್ವಲ್ಪ ಸಮಯದ ವಿರಾಮದ ಬಳಿಕ ಪುನಃ ಸೈನಿಕ ಬುಡಮೇಲಿನಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಸರಕಾರವನ್ನು ವಜಾಗೊಳಿಸಲಾಗಿತ್ತು. ಸೂಕಿ ಮತ್ತು ಇತರ ಸರಕಾರದ ಪ್ರಮುಖರನ್ನು ಸೈನ್ಯ ಜೈಲಿನಲ್ಲಿರಿಸಿದೆ. ಸರಕಾರದ ವಿರುದ್ಧ ಸೇನೆಯ ಕ್ರಮವನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟಿಸಿದ ಜನರ ಮೇಲೆ ಬುಧವಾರ ಸೈನ್ಯ ಗುಂಡಿಕ್ಕಿದೆ. ಹತ್ತೊಂಬತ್ತು ವರ್ಷದ ಯುವತಿ ಕೂಡ ಹತ್ಯೆಯಾಗಿದ್ದು, ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಮ್ಯಾನ್ಮಾರಿನ ಸೈನಿಕ ಹಸ್ತಕ್ಷೇಪಕ್ಕೆ ವಿಶ್ವದ ದೇಶಗಳು ವಿರೋಧ ವ್ಯಕ್ತಪಡಿಸಿವೆ. ಆದರೆ, ಒಂದು ವರ್ಷದ ವರೆಗೆ ಸೈನಿಕ ಸರಕಾರ ಇರುತ್ತದೆ ಎಂದು ಸೈನ್ಯ ಹೇಳುತ್ತಿದೆ. ಪ್ರತಿಭಟನಕಾರರು ತಮ್ಮ ಪ್ರತಿರೋಧವನ್ನು ಹೆಚ್ಚಿಸಿದ್ದು ಮ್ಯಾನ್ಮಾರಿನ ಪ್ರಮುಖ ನಗರಗಳಾದ ಯಾಂಗೋನ್, ಮಂದಾಲಯ ಮುಂತಾದ ಕಡೆ ಮತ್ತು ಸಣ್ಣ ನಗರಗಳಲ್ಲಿ ಪುನಃ ಹೋರಾಟ ಸಕ್ರಿಯವಾಗಿದೆ.