ಚುನಾವಣಾ ಪ್ರಚಾರದ ವೇಳೆ ಹೃದಯಾಘಾತ: ಎಐಎಡಿಎಂಕೆ ರಾಜ್ಯಸಭಾ ಸದಸ್ಯ ಮುಹಮ್ಮದ್ ಜಾನ್ ನಿಧನ

0
682

ಸನ್ಮಾರ್ಗ ವಾರ್ತೆ

ಚೆನ್ನೈ: ಮುಂಬರಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದ ಸಮಯದಲ್ಲಿ ಹೃದಯಾಘಾತಕ್ಕೊಳಗಾಗಿ ಅಣ್ಣಾಡಿಎಂಕೆ ರಾಜ್ಯಸಭಾ ಸದಸ್ಯ ಎ. ಮುಹಮ್ಮದ್ ಜಾನ್(72) ನಿಧನರಾದ ಘಟನೆ ನಡೆದಿದೆ.

ಮಂಗಳವಾರ ಸಂಜೆ ವೆಲ್ಲೂರು ಜಿಲ್ಲೆಯ ರಾನ್ನಿಪೇಟ ವಾಲಾಜಾ ಸಮೀಪದಲ್ಲಿ ಚುನಾವಣಾ ಪ್ರಚಾರದ ನಡುವೆ ಎದೆನೋವು ಕಾಣಸಿಕೊಂಡಿತು. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಇಂದು ರಾಜ್ಯ ಸಭೆಯಲ್ಲಿ ಅವರಿಗೆ ಸಂತಾಪ ಸೂಚಿಸುವುದಕ್ಕಾಗಿ ಒಂದು ಗಂಟೆಗಳ ಕಾಲ ರಾಜ್ಯಸಭೆಯ ಅಧಿವೇಶನವನ್ನು ಮುಂದೂಡಲಾಯಿತು.

2011ರಲ್ಲಿ ರಾನ್ನಿಪೇಟ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಮುಹಮ್ಮದ್ ಜಾನ್ ಜಯಲಲಿತಾ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

1996, 2006ರಲ್ಲಿ ರಾನ್ನಿಪೇಟದಿಂದ ಅವರು ಜಯ ಗಳಿಸಿದ್ದಾರೆ. ತಮಿಳ್ನಾಡಿನ ವಕ್ಫ್ ಮಂಡಳಿಯ ಅಧ್ಯಕ್ಷರೂ ಕೂಡ ಆಗಿದ್ದರು. 2019ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಮುಹಮ್ಮದ್ ಜಾನ್ ಅವರ ನಿಧನವು ಪಕ್ಷಕ್ಕೆ ಹಾಗೂ ಅಭಿಮಾನಿಗಳಿಗೆ ತುಂಬಲಾರದ ನಷ್ಟ ಎಂದು ಪಕ್ಷದ ಮುಖಂಡರು ತಿಳಿಸಿದ್ದು, ಅವರಿಗೆ ಸಂತಾಪ ಸೂಚಿಸಿದ್ದಾರೆ.