ದುಬೈ: ದೀರ್ಘಕಾಲಿಕ ಹಣಕಾಸು ಸಚಿವರಾಗಿದ್ದ ಶೇಖ್ ಹಮ್ದಾನ್ ಬಿನ್ ರಶೀದ್ ಅಲ್ ಮಕ್ತೌಮ್ ನಿಧನ

0
8139

ಸನ್ಮಾರ್ಗ ವಾರ್ತೆ

ದುಬೈ: ದುಬೈನ ಉಪ ಆಡಳಿತಗಾರ ಮತ್ತು ಯುಎಇ ಹಣಕಾಸು ಮತ್ತು ಕೈಗಾರಿಕಾ ಸಚಿವರಾಗಿದ್ದ ಶೇಖ್ ಹಮ್ದಾನ್ ಬಿನ್ ರಶೀದ್ ಅಲ್ ಮಕ್ತೌಮ್ ನಿಧನರಾದರು. ಯುಎಇಯ ಉಪಾಧ್ಯಕ್ಷರು ಮತ್ತು ಪ್ರಧಾನಿ ಮತ್ತು ದುಬೈ ಆಡಳಿತಗಾರಾದ ಅವರ ಸಹೋದರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್‌ರವರು ಅಧಿಕೃತ ಟ್ವಿಟರ್ ಖಾತೆಯ ಮೂಲಕ ಸುದ್ದಿಯನ್ನು ಹಂಚಿಕೊಂಡರು.

ದಿವಂಗತ ಆಡಳಿತಗಾರ ಶೇಖ್ ರಶೀದ್ ಬಿನ್ ಸಯೀದ್ ಅಲ್ ಮಕ್ತೌಮ್ ಅವರ ಎರಡನೇ ಮಗನಾಗಿ ಶೇಖ್ ಹಮ್ದಾನ್ ಡಿಸೆಂಬರ್ 25, 1945 ರಂದು ಜನಿಸಿದರು.

ಶೇಖ್ ಹಮ್ದಾನ್ ಅವರ ಔಪಚಾರಿಕ ಶಾಲಾ ಶಿಕ್ಷಣವು ದುಬೈನಲ್ಲಿ ಪ್ರಾರಂಭವಾಯಿತು. ಅವರು ದುಬೈನ ಅಲ್-ಅಹ್ಲಿಯಾ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದರು ಮತ್ತು ಕೇಂಬ್ರಿಡ್ಜ್‌ನ ಬೆಲ್ ಸ್ಕೂಲ್ ಆಫ್ ಲ್ಯಾಂಗ್ವೇಜಸ್‌ನಲ್ಲಿ ಹೆಚ್ಚಿನ ಅಧ್ಯಯನವನ್ನು ಪೂರೈಸಿದರು.

1971 ರಲ್ಲಿ ಯುಎಇಯ ಮೊದಲ ಹಣಕಾಸು ಮತ್ತು ಕೈಗಾರಿಕಾ ಸಚಿವರಾದ ಶೇಖ್ ಹಮ್ದಾನ್‌ರವರು ತಮ್ಮ ಜೀವಿತಾವಧಿಯವರೆಗೂ ಈ ಸ್ಥಾನದಲ್ಲಿ ಮುಂದುವರೆದಿದ್ದರು. ದೇಶದ ಹಣಕಾಸು ನೀತಿಗಳು ಮತ್ತು ಸರ್ಕಾರದ ಖರ್ಚುಗಳನ್ನು ಅಭಿವೃದ್ಧಿಪಡಿಸುವಲ್ಲಿ ಅವರು ಗಣನೀಯ ಪಾತ್ರ ವಹಿಸಿದ್ದಾರೆ.

ಶೇಖ್ ಹಮ್ದಾನ್‌ರವರು ದುಬೈ ಪುರಸಭೆಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಮಾಹಿತಿ ಮತ್ತು ಆರೋಗ್ಯ ಇಲಾಖೆಗಳು, ದುಬೈ ವರ್ಲ್ಡ್ ಟ್ರೇಡ್ ಸೆಂಟರ್, ದುಬೈ ಅಲ್ಯೂಮಿನಿಯಂ (DUBAL) ಮತ್ತು ದುಬೈ ನ್ಯಾಚುರಲ್ ಗ್ಯಾಸ್ ಕಂಪೆನಿ ಲಿಮಿಟೆಡ್ (DUGAS) ಇತರ ಸಂಸ್ಥೆಗಳ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ಜನವರಿ 4, 1995 ರಂದು, ಶೇಖ್ ಹಮ್ದಾನ್ ಅವರನ್ನು ದುಬೈನ ಉಪ ಆಡಳಿತಗಾರರಾಗಿ ನೇಮಿಸಲಾಯಿತು. ಶೇಖ್ ಹಮ್ದಾನ್ ಅವರು ಅಲ್ ಮಕ್ತೌಮ್ ಸಂಸ್ಥೆಯಲ್ಲಿ ವಿಶ್ವದಾದ್ಯಂತದ ವಿದ್ಯಾರ್ಥಿಗಳಿಗೆ ಅನೇಕ ವಿದ್ಯಾರ್ಥಿವೇತನಗಳನ್ನು ನೀಡಿದರು.