ಮಂಗಳೂರಿನಲ್ಲಿ ಇಂದಿನಿಂದ ನೈಟ್ ಕರ್ಫ್ಯೂ: ಫೀಲ್ಡ್ ಗಿಳಿದ ಪೊಲೀಸ್ ಕಮಿಷನರ್

0
921

ಸನ್ಮಾರ್ಗ ವಾರ್ತೆ

ಮಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿಗೆ ಮಾಡಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.‌ ಶಶಿಕುಮಾರ್ ಹಾಗೂ ಅಧಿಕಾರಿಗಳ‌ ತಂಡ ಫೀಲ್ಡ್ ಗಿಳಿದಿದ್ದು, ಈಗಾಗಲೇ ಸಾರ್ವಜನಿಕರಿಗೆ ಎಲ್ಲಾ ಮಾಹಿತಿ ನೀಡಿದ್ದರೂ ಕೂಡ ಸುಮ್ಮನೆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಮೂಲಕ ಬಿಸಿ ಮುಟ್ಟಿಸುವ ಕೆಲಸ ಆರಂಭಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೋವಿಡ್ ನೈಟ್ ಕರ್ಪ್ಯೂವನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಲು ಪಾಲಿಕೆಯು ಮುಂದಾಗಿರುವುದರ ಜೊತೆಗೆ ಇದೇ ಮಂಗಳೂರು ನಗರದಾದ್ಯಂತ 45 ಚೆಕ್ ಪೋಸ್ಟ್ ಗಳನ್ನು ಸಿದ್ಧ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

ಕೋವಿಡ್ ನಿಯಮಗಳು ಮತ್ತು ನೈಟ್ ಕರ್ಪ್ಯೂ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿರುವ ಎನ್. ಶಶಿಕುಮಾರ್, ಸಾರ್ವಜನಿಕರು ಅಗತ್ಯ ಅಥವಾ ತುರ್ತು ಅವಶ್ಯಕತೆಗೆ ಮಾತ್ರ ಹೊರಬರುವಂತೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಅಧಿಕಾರಿಗಳ ತಂಡದೊಂದಿಗೆ ಮಂಗಳೂರು ನಗರದಲ್ಲಿ ತಪಾಸಣೆಯನ್ನು ಆರಂಭಿಸಿದ್ದಾರೆ.

ಅನಗತ್ಯ ಓಡಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಎಲ್ಲರೂ ರಾತ್ರಿ 10 ಗಂಟೆಯೊಳಗೆ ಮನೆಯಲ್ಲಿರಬೇಕು. ಹೊರ ವಲಯದಿಂದ ನಗರಕ್ಕೆ ಬರುವುದನ್ನು ತಡೆಯುವುದಕ್ಕೆ ಪೊಲೀಸ್ ವಿಶೇಷ ನಿಗಾ ವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಇನ್ನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಸೂಚನೆ ನೀಡಿರುವ ಪೊಲೀಸ್ ಇಲಾಖೆ, ರಾತ್ರಿ ಪಾಳಿಯವರು ಕರ್ಪ್ಯೂ ಅವಧಿಯಲ್ಲಿ ತಮ್ಮ ಕಂಪನಿ/ ಸಂಸ್ಥೆಯೊಳಗೆ ಇರಬೇಕು. ಕಂಪನಿಗಳು ಇದಕ್ಕೆ ಸರಿಯಾಗಿ ಶಿಫ್ಟ್ ಬದಲಾಯಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ಝೊಮ್ಯಾಟೊ, ಸ್ವಿಗ್ಗಿ ಸಹಿತ ಆನ್ ಲೈನ್ ಮೂಲಕ ಫುಡ್ ಡೆಲಿವರಿ ಮಾಡುವವರು ಕಡ್ಡಾಯವಾಗಿ ಕಂಪನಿಯ ಟೀ ಶರ್ಟ್ ಹಾಗೂ ಐಡೆಂಟಿಟಿ ಕಾರ್ಡ್ ಹೊಂದಿರಬೇಕು ಎಂದು ಸೂಚನೆ ನೀಡಲಾಗಿದೆ.