ಕೊರೋನ ಕೇರ್ ಸೆಂಟರ್ ಆಗಿ ಪರಿವರ್ತನೆಯಾದ ಆಂಧ್ರದ ಮಸೀದಿ

0
705

ಸನ್ಮಾರ್ಗ ವಾರ್ತೆ

ಹೈದರಾಬಾದ್: ನಗರದ ಕೊರೋನ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ನ ಕೊರತೆಯಿದ್ದು ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಹೈದರಾಬಾದಿನ ಮಸೀದಿಯನ್ನು ತಾತ್ಕಾಲಿಕ ಕೊರೋನ ಕೇರ್ ಸೆಂಟರ‌ನ್ನಾಗಿ ಮಾಡಲಾಗಿದೆ.

ಇಲ್ಲಿ ಔಷಧಿಯ ಕೊರತೆಯೂ ಕೂಡ ಕಂಡು ಬರುತ್ತಿದೆ. ಹೈದರಾಬಾದ್ ರಾಜೇಂದ್ರನಗರದ ಮಸ್ಚಿದುಲ್ ಮುಹಮ್ಮದ್ ಅಹ್ಲೆ ಹದೀಸ್‍ನಲ್ಲಿ 40 ಮಂಚಗಳ ಕೊರೋನ ಐಸೊಲೇಶನ್ ಸೆಂಟರ್ ಆರಂಭವಾಗಿದೆ. ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ನೇತೃತ್ವದಲ್ಲಿ ಹೈದರಾಬಾದಿನ ರೋಟರಿ ಕ್ಲಬ್, ಯುಎಸ್‍ಐ ಸೀಡ್‍ನ ಸಹಾಯದಲ್ಲಿ ಸೆಂಟರ್ ಕೆಲಸ ಮಾಡಲಿದೆ.

ಕೊರೋನ ಸೆಂಟರ್ ಆದ ಮಸೀದಿಯಲ್ಲಿ, ಪ್ರಾಥಮಿಕ ರೋಗ ಲಕ್ಷಣ ಇರುವವರನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಇವರಿಗೆ ಅಗತ್ಯವಾದ ಎಲ್ಲ ವೈದ್ಯಕೀಯ ಸಹಾಯವನ್ನು ನೀಡಲಾಗುತ್ತಿದೆ ಎಂದು ಫೌಂಡೇಶನ್ ಪ್ರತಿನಿಧಿ ಡಾ.ಮುಹಮ್ಮದ್ ಆರಿಫ್ ಹೇಳಿದರು. ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಪರಿಸ್ಥಿತಿಯಲ್ಲಿ ಹಾಸಿಗೆಯ ಸಂಖ್ಯೆಯನ್ನು 65ಕ್ಕೇರಿಸಲಾಗುವುದು ಎಂದು ಅವರು ಹೇಳಿದರು.

ರೋಗಿ ಗಂಭೀರ ಸ್ಥಿತಿಯಲ್ಲಿದ್ದರೆ ಕೂಡಲೇ ಗಾಂಧಿ ಆಸ್ಪತ್ರೆಗೆ ಅಥವಾ ಹೈದರಾಬಾದಿನ ತೆಲಂಗಾಣ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಆಂಡ್ ರಿಸರ್ಚ್ ಸೆಂಟರ್‌ನಂತಹ ಕೊರೋನ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುವುದು ಎಂದು ಅವರು ತಿಳಿಸಿದರು.