47 ನೇ ರಾಷ್ಟ್ರೀಯ ದಿನಾಚರಣೆಯ ಸಂಭ್ರಮದಲ್ಲಿ ಯು. ಎ.ಇ.. (ಅರಬ್ ಸಂಯುಕ್ತ ಸಂಸ್ಥಾನ)

0
1338

ನುಸ್ರತ್, ಅಬುಧಾಬಿ

ಯು.ಎ.ಇ. ರಾಷ್ಟ್ರೀಯ ದಿನವನ್ನು ಡಿಸೆಂಬರ್ 2  ರಂದು ಆಚರಿಸಲಾಗುತ್ತದೆ. ರಾಷ್ಟ್ರೀಯ ದಿನಾಚರಣೆಗೆ ನಗರದ ರಸ್ತೆಗಳೆಲ್ಲಾ ವಿವಿಧ ವಿನ್ಯಾಸದ ಬಣ್ಣದ  ದೀಪಾಲಂಕೃತವಾಗಿ ಸಜ್ಜಾಗಿ ನಿಂತಿದೆ.  1971 ರಲ್ಲಿ ಅಬುಧಾಬಿ, ದುಬೈ, ಶಾರ್ಜ, ಅಜ್ಮಾನ್, ಫುಜೇರ, ಉಮ್ಮುಲ್ ಖುವೈನ್ ಎಂಬ ಆರು ಸಂಸ್ಥಾನಗಳು ಅರಬ್ ಸಂಯುಕ್ತ ಸಂಸ್ಥಾನ ಎಂಬ ಹೊಸ ರಾಷ್ಟ್ರವನ್ನು ನಿರ್ಮಿಸಲು ತೀರ್ಮಾನಿಸಿತು.  ನಂತರ ರಾಸ್ ಅಲ್ ಖೈಮ ಎಂಬ ಸಂಸ್ಥಾನವು ಫೆಬ್ರವರಿ 10, 1972  ರಲ್ಲಿ ಒಕ್ಕೂಟವನ್ನು ಸೇರಿಕೊಂಡಿತು. ಶೇಖ್ ಝಾಯಿದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು.  ದಿವಂಗತ ಶೇಖ್ ಝಾಯಿದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ರವರು ಯು.ಎ.ಇ. ಯ ರಾಷ್ಟ್ರಪಿತ ಎಂದೇ ಪ್ರಸಿದ್ಧರಾಗಿದ್ದಾರೆ.

ಇಂದು ಜಗತ್ತಿನ ಅತ್ಯಂತ ಸುರಕ್ಷಿತ ರಾಷ್ಟ್ರಗಳ ಪೈಕಿ ಯು. ಎ.ಇ. (ಅರಬ್ ಸಂಯುಕ್ತ ಸಂಸ್ಥಾನ) ಕೂಡಾ ಒಂದಾಗಿದೆ. ಇಲ್ಲಿನ ಆಡಳಿತಗಾರರ ದೂರದೃಷ್ಟಿಯ ಯೋಜನೆಗಳು ಹಲವು ವರ್ಷಗಳ ಹಿಂದಿನ  ಮರುಭೂಮಿಯನ್ನು ಜಗತ್ತಿನ ಅತ್ಯಂತ ಸುಂದರ ನಗರವನ್ನಾಗಿ ಮಾರ್ಪಡಿಸಿದೆ. 1975 ರಲ್ಲಿ ಕಚ್ಚಾತೈಲದ ಮೂಲಗಳು ಸಿಕ್ಕಿದಂದಿನಿಂದ ಮಾನವ ಸಂಪನ್ಮೂಲಗಳ ಬಾರೀ ಅಗತ್ಯವಿತ್ತು. ವಿವಿಧ ರಾಷ್ಟ್ರಗಳಿಂದ ಜೀವನಾಧಾರವನ್ನು ಹುಡುಕುತ್ತಾ ಜಲ ನೆಲ ಮತ್ತು ವಾಯುಮಾರ್ಗಗಳ ಮುಖಾಂತರ ಜನರು ಬಂದಾಗ ಎಲ್ಲಾ ರಾಷ್ಟ್ರದ ಜನರನ್ನು ಯಾವುದೇ ಬೇಧಬಾವವಿಲ್ಲದೆ ಸ್ವೀಕರಿಸಿ ಗೌರವಿಸಿದರು. ಎಲ್ಲಾ ರಾಷ್ಟ್ರದ ಜನರು ಒಟ್ಟಾಗಿ ತಮ್ಮ ಪ್ರತಿಭೆಗಳನ್ನು ಉಪಯೋಗಿಸಿ ಅತ್ಯಂತ ಸುಂದರ ರಾಷ್ಟ್ರಕ್ಕಾಗಿ ಬೇಕಾದ ಮೂಲಭೂತ ಸೌಕರ್ಯವನ್ನು ನಿರ್ಮಿಸುವಲ್ಲಿ ಸಫಲರಾದರು.

ಇದೀಗ ಅರಬ್ ರಾಷ್ಟ್ರದ ಪ್ರಜೆಗಳಿಗಿಂತ ಸಹಸ್ರಾರು ಅಧಿಕ ಪಟ್ಟು ವಿದೇಶಿಯರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು ಇನ್ನೂರಕ್ಕೂ ಹೆಚ್ಚು ರಾಷ್ಟ್ರದ
ಜನರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಅದರಲ್ಲಿ ಭಾರತೀಯರ  ಬಹುದೊಡ್ಡ ಪಾಲು ನಮ್ಮ ರಾಜ್ಯದ ಮತ್ತು ನೆರೆ ರಾಜ್ಯದ ಜನರಾಗಿರುತ್ತಾರೆ.  ಇದು
ಕರಾವಳಿಯ ಜನರ ಆರ್ಥಿಕ ಮತ್ತು ಮೂಲ ಭೂತ  ಸೌಕರ್ಯಗಳನ್ನು ಸುಧಾರಿಸುವಲ್ಲಿ  ಪ್ರಮುಖ ಪಾತ್ರ ವಹಿಸಿದೆ.

  ಇಲ್ಲಿ ಜನರ ಸುರಕ್ಷತೆ ಮತ್ತು ಭದ್ರತೆಗೆ ತುಂಬಾ ಆದ್ಯತೆ ನೀಡಲಾಗುತ್ತದೆ, ರಾತ್ರಿ ಹಗಲೆನ್ನದೇ ಯಾರಿಗೂ ಏಕಾಂಗಿಯಾಗಿ ಪ್ರಯಾಣಿಸಬಹುದಾಗಿದೆ. ಯಾವುದೇ ಮುಷ್ಕರ ,ಪ್ರತಿಭಟನೆ, ಕೋಮು ಗಲಭೆ, ದರೋಡೆಗಳಿಲ್ಲ.  ರಾತ್ರಿಯಲ್ಲಿ ನಗರವು ದೀಪಗಳಿಂದ ಅಲಂಕೃತವಾಗಿರುತ್ತದೆ ಮತ್ತು ಪ್ರಮುಖ ನಗರಗಳ ಎಲ್ಲಾ ಪ್ರದೇಶಗಳನ್ನು
ಅತ್ಯಾಧುನಿಕ  ಕ್ಯಾಮರಾಗಳು ನಿರೀಕ್ಷಿಸುತ್ತಿವೆ.

ಮರುಭೂಮಿಯಲ್ಲಿ ಮಳೆಯಿಲ್ಲದಿದ್ದರೂ ಯಾವುದೇ ಆಹಾರದ ವಸ್ತುಗಳಿಗೆ ಕೊರತೆಯಿಲ್ಲ. ವರ್ಷವಿಡೀ ಜಗತ್ತಿನ ಎಲ್ಲಾ ಎಲ್ಲಾ ರೀತಿಯ ತರಕಾರಿ, ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಯಾವುದೇ ರಾಷ್ಟ್ರದ ಆರ್ಥಿಕ ಬೆಳವಣಿಗೆಯು ಮಳೆಯ ಮೇಲೆ ಅವಲಂಭಿತವಾಗಿರುತ್ತದೆ. ಮಳೆಯಿಲ್ಲದಿದ್ದರೆ ಬರಗಾಲ, ಕ್ಷಾಮವನ್ನು ಅನುಭವಿಸಬೇಕಾಗುತ್ತದೆ. ಆದರೆ ಯು. ಎ.ಇ. ಯ ಸ್ಥಿತಿಯು ಇದಕ್ಕೆ ತೀರಾ ಭಿನ್ನವಾಗಿದೆ. ವರ್ಷದಲ್ಲಿ ಬೇಸಿಗೆ  ಮತ್ತು ಚಳಿ ಎಂಬ ಎರಡು ಕಾಲಗಳು ಮಾತ್ರವಿದೆ. ಚಳಿಗಾಲದಲ್ಲಿ ಕೆಲವೆಡೆಗಳಲ್ಲಿ ಅಲ್ಪಸ್ವಲ್ಪ ಮಳೆ ಬರುವುದನ್ನು ಕಾಣಬಹುದಾಗಿದೆ. ಗುಡುಗು, ಮಿಂಚುಗಳು ವಿರಳ. ಮಳೆ ಬಂದರೆ ಪರ್ವತಗಳ ಕಣಿವೆಗಳು ತುಂಬಿತುಳುಕುತ್ತದೆ. ಚಳಿಗಾಲದಲ್ಲಿ ಕೆಲವು ಪ್ರದೇಶಗಳಲ್ಲಿ ಅತಿ ಶೈತ್ಯದಿಂದ ಕೂಡಿದ್ದು ದಟ್ಟವಾದ ಮಂಜು ಆವರಿಸಿರುತ್ತದೆ. ಮಳೆಯೊಂದಿಗೆ ಕೆಲವೆಡೆಗಳಲ್ಲಿಆಲಿಕಲ್ಲುಗಳು  ಬೀಳುವುದು ಒಂದು ವೈಶಿಷ್ಟ್ಯತೆ. ಮಳೆಯಿಲ್ಲದಿದ್ದರೂ ನೀರಿನ ಕೊರತೆಯಿಲ್ಲ, ವಿದ್ಯುತ್ ಚಕ್ತಿಯ ಅಭಾವವಿಲ್ಲ. ಸೊಳ್ಳೆಯ ಕಾಟವಿಲ್ಲ.

ಇಲ್ಲಿನ ಮುಖ್ಯ ಬೆಳೆ ಖರ್ಜೂರ ನೀರಿಲ್ಲದೆ ಸುಡುಬಿಸಿಲಿನಲ್ಲೇ ಪಕ್ವವಾಗುತ್ತದೆ. ಮಾವು, ಬುಗರಿ, ನುಗ್ಗೆ ಕಾಯಿ, ದಾಳಿಂಬೆ, ಕಹಿಬೇವಿನಂತಹ ಮರಗಳು ವಿರಳವಾಗಿ ಕಂಡುಬರುತ್ತದೆ. ಜೋಳ, ಟೊಮಾಟೊ, ಸೌತೆಕಾಯಿ, ಕೊತ್ತಂಬರಿ ಸೊಪ್ಪು, ಕಾಯಿ ಮೆಣಸು ಮತ್ತು ಇನ್ನಿತರ ಕೆಲವು ತರಕಾರಿಗಳನ್ನು ಫಾರ್ಮ್ ಗಳಲ್ಲಿ ಬೆಳಸಲಾಗುತ್ತದೆ.

ಕೃಷಿ ಸುಧಾರಿಸಲು ಸರ್ಕಾರವು ಉತ್ತಮ ಸೌಲಭ್ಯ ನೀಡುತ್ತದೆ. ಹೊಲ ಗದ್ದೆಗಳಿಲ್ಲ. ಬಾಳೆ, ತೆಂಗಿನ ಮರಗಳಿಲ್ಲ. ಆಡು ಮೇಡು, ಕೋಳಿ, ದನಗಳಂತಹ ಸಾಕು ಪ್ರಾಣಿಗಳು
ವಿರಳವಾಗಿ ಕಂಡುಬರುತ್ತದೆ. ಹೆಚ್ಚಿನ ಪ್ರಾಣಿಗಳನ್ನುನೋಡಬೇಕಾದರೆ ಮೃಗಾಲಯಗಳಿಗೆ ಹೋಗಬೇಕು. ಹಿಂದೆ ನಾವು ಪಠ್ಯಪುಸ್ತಕಗಳಲ್ಲಿ ಕಲಿತಂತಹ ಓಯಸಿಸ್ ಗಳಿಲ್ಲ.  ಮರುಭೂಮಿಯ ಹಡಗು ಒಂಟೆ ಮೂಲೆಗುಂಪಾಗಿದೆ.

ಕನ್ನಡಿಗರ ಒಂದು ದೊಡ್ಡ ವಿಭಾಗವೇ ಯು.ಎ.ಇ. ಯಲ್ಲಿ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದೆ. ಹೂಡಿಕೆದಾರರನ್ನು ಕೈಚಾಚಿ ಸ್ವಾಗತಿಸುತ್ತದೆ.  ಕನ್ನಡಿಗರ ಹಲವಾರು ಸಂಘ ಸಂಸ್ಥೆಗಳು ಕೂಡಾ ಕಾರ್ಯ ಪ್ರವೃತ್ತಿಯಾಗಿದೆ. ತಮ್ಮ ಜೀವಮಾನದ ಮೂವತ್ತು ಮೂವತ್ತೈದು ವರ್ಷಗಳನ್ನು ಯು.ಎ.ಇ.ಯಲ್ಲಿ ಕಳೆದವರೂ ಇದ್ದಾರೆ. ಆಸ್ಪತ್ರೆ, ವಿದ್ಯಾ ಸಂಸ್ಥೆಗಳ ಸ್ಥಾಪನೆಯಲ್ಲಿ ಕನ್ನಡಿಗರ ಪಾಲು ಇದೆ.

ದಿನಿದಿನಕ್ಕೆ ಒಂದು ಕಡೆ ಕಟ್ಟಡಗಳ ಸಾಲು ಎದ್ದು ನಿಲ್ಲುತ್ತಿದ್ದರೆ ಇನ್ನೊಂದೆಡೆ ಮರುಭೂಮಿಯನ್ನು  ಹಚ್ಚಹಸುರಾಗಿಸುವಲ್ಲಿ ಸಫಲವಾಗುತ್ತಿದೆ.  ಗಗನಚುಂಬಿ ಕಟ್ಟಡಗಳು, ಆರೆಂಟು ಸಾಲುಗಳ ರಸ್ತೆ, ರಸ್ತೆಯ ಮಧ್ಯೆ ಹಾಗೂ ಎರಡು ಬದಿಗಳಲ್ಲಿ ಖರ್ಜೂರದ ಮರ,  ಹೂವು, ಹಚ್ಚಹಸುರು ಮತ್ತು ಎಲ್ಲೆಲ್ಲೂ ಶುಚಿತ್ವವನ್ನು ಕಾಪಾಡುತ್ತಾ ಬಂದಿದೆ.  ವಿಶ್ವದ ಅತೀ ದೊಡ್ಡ ಕಟ್ಟಡ, ಅಕ್ವೇರಿಯಮ್,  ದುಬಾರಿ ಸಪ್ತತಾರಾ ಹೋಟೇಲ್ ಗಳು, ಉದ್ಯಾನಗಳು, ಕೃತಕ ದ್ವೀಪಗಳು, ಸುಂದರ ಮಸೀದಿಗಳು, ಶಾಪಿಂಗ್ ಮಾಲ್ ಗಳು, ಕಾಲುವೆಗಳು, ಅತ್ಯಾಕರ್ಷಕ ಸಮುದ್ರ ಕಿನಾರೆಗಳು, ಬೆಟ್ಟಗುಡ್ಡೆಗಳು, ಮರಳು ದಿಣ್ಣೆಗಳು ಜಗತ್ತಿನ ವಿವಿಧ ದೇಶಗಳ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ದುಬೈ ಮೆಟ್ರೋ ಹಾಗೂ ಟ್ರಾಮ್ ಗಳು ಸಾರ್ವಜನಿಕರ ದೈನಂದಿನ ಸಂಚಾರ ಸೌಕರ್ಯವನ್ನು  ಸುಲಭಗೊಳಿಸುವಲ್ಲಿ ಯಶಸ್ವಿಯಾಗಿದೆ.

 

ಅರಬ್ ಸಂಯುಕ್ತ ಸಂಸ್ಥಾನ ಮುಸ್ಲಿಮರ ಆಳ್ವಿಕೆಯಲ್ಲಿದ್ದರೂ ಎಲ್ಲ ಧರ್ಮದವರಿಗೂ ಅವರವರ ಧರ್ಮ ಆಚರಿಸಲು ಅನುಮತಿ ನೀಡುತ್ತದೆ. ಇನ್ನೊಬ್ಬರ ಬಗ್ಗೆ ಅಥವಾ ಇನ್ನೊಂದು ಧರ್ಮದ ಬಗ್ಗೆ ಅವಹೇಳನ ಮಾಡುವುದು, ವ್ಯಂಗ್ಯ ಚಿತ್ರಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದು ನಿಷೇಧವಾಗಿರುತ್ತದೆ.
ನಗರದಾದ್ಯಂತ ಮಸೀದಿಗಳ ವವಸ್ಥೆ, ಮಂದಿರ, ಚರ್ಚ್, ಗುರುದ್ವಾರಗಳಿವೆ. ಎಲ್ಲ ನಗರಗಳಲ್ಲಿ ಪವಿತ್ರ ಕುರ್ ಆನ್  ಕಲಿಯಲು ಸರಕಾರದ ವತಿಯಿಂದ ಉಚಿತ ಸೌಕರ್ಯಗಳನ್ನು ನೀಡಲಾಗುತ್ತದೆ.

ತಮ್ಮ ಪ್ರಜೆಗಳಿಗೆ ಉತ್ತಮ ಸೌಕರ್ಯವನ್ನು ನೀಡುವಲ್ಲಿ ಯು. ಎ.ಇ.  ಜಗತ್ತಿನಲ್ಲೇ ಪ್ರಥಮ ಸ್ಥಾನ ಎಂದರೂ ತಪ್ಪಾಗಲಾರದು. ಪ್ರಜೆಗಳಿಗೆ ಮನೆ, ಆರೋಗ್ಯ, ವಿದ್ಯಾಭಾಸ ಹಾಗೂ ಇನ್ನಿತರ ಮೂಲಭೂತ  ಸೌಕರ್ಯಗಳನ್ನು ಉಚಿತವಾಗಿ ನೀಡುತ್ತದೆ.

47ನೇ ರಾಷ್ಟ್ರೀಯ ದಿನಕ್ಕೆ ಕನ್ನಡಿಗರ ಮತ್ತು ಯು.ಎ.ಇ ಯ ಸಂಬಂಧ ಶಾಂತಿ ಸಮಾಧಾನದೊಂದಿಗೆ  ಯುಗಯುಗಳವರೆಗೂ ಮುಂದುವರೆಯಲೆಂದು ಹಾರೈಸುತಾ …