ಸನ್ಮಾರ್ಗ ವಾರ್ತೆ
ಶಿಲ್ಲಾಂಗ್: ಮೇಘಾಲಯ ಬಿಜೆಪಿ ಸರಕಾರದಲ್ಲಿ ಮಂತ್ರಿಯಾಗಿರುವ ಸ್ಯಾನ್ಬೋರ್ ಶುಲ್ಲೈ ಜನರು ಕೋಳಿ, ಕುರಿ ಮತ್ತು ಮೀನುಗಳಿಗಿಂತ ಹೆಚ್ಚು ಗೋಮಾಂಸ ತಿನ್ನಬೇಕು ಎಂದು ಕರೆ ನೀಡಿದ್ದಾರೆ.
ಕಳೆದ ವಾರ ಕ್ಯಾಬಿನೆಟ್ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಹಿರಿಯ ಬಿಜೆಪಿ ನಾಯಕ ಶುಲ್ಲೈ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ತಿನ್ನಲು ಸ್ವತಂತ್ರರು ಎಂದು ಹೇಳಿದ್ದು, ಗೋಮಾಂಸ ವಿರೋಧಿಸುವ ಬಿಜೆಪಿ ಪಾಳಯದಲ್ಲಿ ಕಿಡಿ ಹಚ್ಚಿದ್ದಾರೆ.
ನಾನು ಜನರನ್ನು ಚಿಕನ್, ಮಟನ್ ಅಥವಾ ಮೀನಿಗಿಂತ ಹೆಚ್ಚು ಗೋಮಾಂಸವನ್ನು ತಿನ್ನಲು ಪ್ರೋತ್ಸಾಹಿಸುತ್ತೇನೆ. ಜನರನ್ನು ಹೆಚ್ಚು ಗೋಮಾಂಸ ತಿನ್ನಲು ಪ್ರೋತ್ಸಾಹಿಸುವ ಮೂಲಕ, ಬಿಜೆಪಿ ಗೋಹತ್ಯೆಯ ಮೇಲೆ ನಿಷೇಧ ಹೇರುತ್ತದೆ ಎಂಬ ಗ್ರಹಿಕೆಯನ್ನು ನಾವು ಹೋಗಲಾಡಿವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸಚಿವರಾಗಿರುವ ಶುಲ್ಲೈ ಅವರು, ನೆರೆಯ ರಾಜ್ಯದಲ್ಲಿ ಹೊಸ ಹಸು ಕಾನೂನಿನಿಂದ ಮೇಘಾಲಯಕ್ಕೆ ಜಾನುವಾರು ಸಾಗಾಣಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.












