ಇಪ್ಪತ್ತೇಳು ಲಕ್ಷ ಮಂದಿಯನ್ನು ಪುಳಕಿತಗೊಳಿಸುವ ಒಂದು ಫೋಟೋ ಮತ್ತು ಪುಟ್ಟ ಹೆಡ್ ಲೈನ್

0
961

ಆಯಿಶತುಲ್ ಅಫೀಫ

ಡಿಸೆಂಬರ್‌ ಹದಿನೆಂಟು ಕತಾರ್ ದೇಶಕ್ಕೆ ರಾಷ್ಟ್ರೀಯದಿನದ ಸಂಭ್ರಮ. ರಾಷ್ಟ್ರೀಯ ದಿನಾಚರಣೆಗಾಗಿ ಡಿಸಂಬರ್ ತಿಂಗಳ ಆರಂಭದಲ್ಲಿಯೇ ತಯಾರಿ ನಡೆಸಲಾಗುತ್ತದೆ. ಅಂಗಡಿ ಮುಂಗಟ್ಟುಗಳಲ್ಲಿ, ಕಛೇರಿಗಳಲ್ಲಿ , ಕಟ್ಟಡಗಳಲ್ಲಿ ಮರೂನ್ ಮತ್ತು ಬಿಳಿ ಬಣ್ಣದ ರಾಷ್ಟ್ರಧ್ವಜವು ಹಾರಾಡುತ್ತಿರುತ್ತವೆ. ಬೀದಿಗಳನ್ನು ದೀಪಗಳಿಂದ ಅಲಂಕರಿಸಿರುತ್ತಾರೆ, ಈ ತಯಾರಿಯನ್ನೆಲ್ಲ ನೋಡುವಾಗ ಕತಾರಿಗಳನ್ನೊಳಗೊಂಡು ನನ್ನಂತಹ ಅನಿವಾಸಿಗಳಲ್ಲೂ ಏನೋ ಒಂಥರ ಪುಳಕ, ಮನೆ ಹಬ್ಬವೆನ್ನುವ ಸಂಭ್ರಮ. ಮೊಬೈಲ್ ಸ್ಟೇಟಸ್ ಗಳಲ್ಲಿ ಕತಾರ್ ದೇಶದ ಧ್ವಜ ,ಶುಭಕೋರಿ ಸಂದೇಶಗಳು ಕಾಣಸಿಗುತ್ತವೆ.

ಒಮ್ಮೆ ಗೆಳತಿಯೊಬ್ಬಳು ನನ್ನ ಮೊಬೈಲ್ ಸ್ಟೇಟಸ್ ನೋಡಿ ಇದೆಂಥ ದೇಶಪ್ರೇಮ ನೀನು ಕತಾರಿಯಲ್ಲವಲ್ಲ ಎಂದು ಕೇಳಿದ್ದಳು. ಇದು ನಿಜವಾಗಿಯೂ ದೇಶಪ್ರೇಮವೇ? ಹೌದು ನಾವು ನಿರ್ಭಯರಾಗಿ ಬದುಕುತ್ತಿರುವ ನಾಡಿನ ಕಡೆಗಿರುವ ಪ್ರೇಮ , ನನ್ನೊಬ್ಬಳದ್ದು ಮಾತ್ರವಲ್ಲ ಇಲ್ಲಿ ಅನಿವಾಸಿಯಾಗಿ ಬದುಕುತ್ತಿರುವ ಜಗತ್ತಿನ ವಿವಿಧ ದೇಶಗಳಿಂದ ಬಂದಿರುವ ಅನೇಕರಲ್ಲಿ ಪ್ರೇಮವನ್ನು ಕಾಣಬಹುದು.

ಅಜನಬಿ ,ಕತಾರಿ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ನ್ಯಾಯ ,ಮಹಿಳೆಯರನ್ನು ಅತ್ಯಂತ ಗೌರವಿಸುವ ,ಯಾವುದೇ ಭಯವಿಲ್ಲದೆ ಮಧ್ಯರಾತ್ರಿಯಲ್ಲೂ ಮಹಿಳೆ ಒಬ್ಬಂಟಿಯಾಗಿ ಹೋಗಲು ಅವಕಾಶವಿರುವ, ಸುರಕ್ಷತೆಯ ದೃಷ್ಟಿಯಿಂದ ಜಗತ್ತಿನಲ್ಲಿ ಎರಡನೇ ಸ್ಥಾನವನ್ನು ಹೊಂದಿರುವ ಈ ಪುಟ್ಟ ದೇಶದ ಹೃದಯ ವೈಶಾಲ್ಯವನ್ನು ಪ್ರೀತಿಸದಿರಲು ಯಾರಿಂದಲೂ ಸಾಧ್ಯವಿಲ್ಲ. ಕತಾರ್ ಸುಮಾರು ಇಪ್ಪತೇಳು ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಅದರಲ್ಲಿ ಸುಮಾರು ಏಳು ಲಕ್ಷದಷ್ಟು ಭಾರತೀಯರು . ಕತಾರ್ ದೇಶ ಎಷ್ಟೋ ಅನಿವಾಸಿಗಳನ್ನು ತನ್ನವರನ್ನಾಗಿ ಒಪ್ಪಿಕೊಂಡಿದೆ ಮತ್ತು ಅವರೆಲ್ಲರೂ ಕತಾರನ್ನು ತನ್ನದಾಗಿ ಅಪ್ಪಿಕೊಂಡಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಸ್ವಾಯತ್ತತೆಗಾಗಿ ಕತಾರ್ ತೀವ್ರವಾಗಿ ಶ್ರಮಿಸುತ್ತಿದೆ. ನಮಗೆಲ್ಲರಿಗೂ ತಿಳಿದಿರುವಂತೆ ಕಳೆದ ವರ್ಷ ನೆರೆಹೊರೆಯ ಅರಬ್ ದೇಶಗಳಾದ ಸೌದಿ, ಬಹರೇನ್, ಯು ಎ ಇ ಮತ್ತು ಈಜಿಪ್ಟ್ ಗಳು ಕತಾರಿನೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಂಡಿತು ಮತ್ತು ನೆಲಮಾರ್ಗ, ಜಲಮಾರ್ಗ, ವಾಯುಮಾರ್ಗವನ್ನು ಕತಾರ್ ಪಾಲಿಗೆ ದಿನಬೆಳಗಾಗುವುದರೊಳಗೆ ಮುಚ್ಚಲಾಯಿತು. ಭಯೋತ್ಪಾದನೆಗೆ ಕತಾರ್ ಬೆಂಬಲ ನೀಡುತ್ತಿದೆ ಎಂಬುವುದು ದಿಗ್ಬಂದನದ ಹಿಂದಿರುವ ಮುಖ್ಯ ಕಾರಣ ಮತ್ತು ಜಗತ್ತಿನ ಅತೀ ದೊಡ್ಡ ಮಾಧ್ಯಮ ಸಂಸ್ಥೆಯಾದ ಅಲ್ -ಜಜೀರಾವನ್ನು ನಿಷೇದಧಿಸಬೇಕೆಂಬುದು ದಿಗ್ಭಂದನ ಸರಿಸಲಿಕ್ಕಿರುವ ಪ್ರಮುಖ ಷರತ್ತುಗಳಲ್ಲೊಂದು.

ಇಲ್ಲಿ ಹೇರಳವಾಗಿ ಸಿಗುವುದು ಪೆಟ್ರೋಲ್ ಮತ್ತು ನೈಸರ್ಗಿಕ ಅನಿಲ, ಬೆಳೆಯೆಂದರೆ ಖರ್ಜೂರ ಮಾತ್ರ . ಆಹಾರ ಉತ್ಪನ್ನಗಳಿಗೆ ಕೊನೆ ಪಕ್ಷ ಹಾಲಿಗೂ ಸಹ ಕತಾರ್ ನೆರೆಯ ದೇಶಗಳನ್ನು ಅವಲಂಬಿಸಿತ್ತು . ಈ ಸನ್ನಿವೇಶದಲ್ಲಿ ಕತಾರ್ ಪಾಲಿನ ಹೀರೋವಾಗಿ ಹೊರಹೊಮ್ಮಿದವರು ಇಲ್ಲಿನ ರಾಜ ಶೇಕ್ ತಮೀಮ್ ಬಿನ್ ಹಮದ್ ಅಲ್ತಾನಿ.

ಮಿತ್ರ ರಾಷ್ಟ್ರಗಳ ಷರತ್ತುಗಳಿಗೂ ತಲೆಬಾಗಲಿಲ್ಲ ಮತ್ತು ಸುಮ್ಮನೆ ಕೂರಲೂ ಇಲ್ಲ. ದಿಗ್ಬಂದನ ಹೇರಿರುವ ರಾಷ್ಟ್ರಗಳಿಗೆ ದಿನವೂ ಪ್ರಯಾಣಿಸುತ್ತಿದ್ದ ಈಗ ಖಾಲಿ ಬಿದ್ದಿರುವ ಕತಾರ್ ಏರ್ವೇಸ್ ವಿಮಾನಗಳನ್ನು ವಿವಿಧ ರಾಷ್ಟ್ರಗಳಿಗೆ ಕಳುಹಿಸಿ ಆಹಾರ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾದರು. ಆದರೆ ಬೆಲೆಯು ಗಗನಕ್ಕೇರಿತು. ಹಾಲಿಗಾಗಿ ಹಾಲೆಂಡಿನಿಂದ ನಾಲ್ಕು ಸಾವಿರ ಹಸುಗಳನ್ನು ಖರೀದಿಸಲಾಯಿತು. ಅದರಲ್ಲಿ ಎಂಟುನೂರು ಹಸುಗಳನ್ನು ಏರ್ಲಿಫ್ಟ್ ಮಾಡಲಾಗಿದೆ. ಈಗ ಕತಾರ್ ಬಲದ್ ನ (ನನ್ನ ದೇಶ) ಎನ್ನುವ ಡೇರಿ ಫಾರ್ಮನ್ನು ಹೊಂದಿದೆ. ಹಾಲು, ಹಾಲಿನ ಉತ್ಪನ್ನಗಳಲ್ಲದೆ ತಾಜಾ ಹಣ್ಣು ತರಕಾರಿಗಳನ್ನು ಸಹ ಕತಾರ್ ಬೆಳೆಸುತ್ತಿದೆ. ನಮ್ಮ ಮನೆ ಹಿತ್ತಿಲಲ್ಲಿ ಬೆಳೆದಷ್ಟೇ ಸಂತೋಷ ವಾಗುತ್ತದೆ. ಆಹಾರ ಸಾಮಗ್ರಿಗಳ ಬೆಲೆಗಳು ಇಳಿಮುಖವಾಗಿದೆ. ಪರಿಸ್ಥಿತಿ ಸುಧಾರಿಸಿದೆ.

ವ್ಯಾಪಕವಾಗಿ ಬೆಲೆ ಹೆಚ್ಚಾದರೂ, ಉದ್ಯಮಗಳು ನೆಲಕಚ್ಚಿದರೂ ದೇಶದ ಆರ್ಥಿಕತೆಗೆ ಭಾರಿ ಹೊಡೆತಬಿದ್ದರೂ ಯಾವುದೇ ಪ್ರತಿಭಟನೆಗಳು ನಡೆಯಲಿಲ್ಲ. ಅಶಾಂತಿ ತಲೆದೋರಲಿಲ್ಲ. ಎಲ್ಲವೂ ಸಹಜವಾಗಿತ್ತು. ಜನ ಕಾರುಗಳಲ್ಲಿ , ಕಚೇರಿಗಳಲ್ಲಿ ಮನೆಗಳಲ್ಲಿ ರಾಜನ ಫೋಟೋ ಸಮೇತ ತಮೀಮ್ ಅಲ್ ಮಜದ್ (ತಮೀಮ್ ಅದ್ಭುತ )ಎನ್ನುವ ಸಂದೇಶವನ್ನು ಹೊತ್ತಿರುವ ಸ್ಟಿಕ್ಕರ್ ಗಳನ್ನು ತೂಗುಹಾಕಿ, ರಾಜನೊಂದಿಗೆ ನಾವಿದ್ದೇವೆ ಎನ್ನುವ ಸಂದೇಶವನ್ನು ಆ ನಾಲ್ಕು ದೇಶಗಳಿಗೆ ಸಾರಿ ಹೇಳುವ ಪ್ರಯತ್ನ ಮಾಡಿ ರಾಜನ ಬೆನ್ನಿಗೆ ನಿಂತರು.

ಜನರ ಈ ಪ್ರೀತಿಗೆ ರಾಜನು ಕತಾರಿಗಳೊಂದಿಗೆ ಅನಿವಾಸಿಗಳನ್ನೂ ಸೇರಿಸಿ ಕೃತಜ್ಞತೆ ಅರ್ಪಿಸಿದ್ದಾರೆ.

ಏನೇ ಏರುಪೇರಾಗಿದ್ದರೂ 2022ರಲ್ಲಿ ಕತಾರಿನಲ್ಲಿ ನಡೆಯುವ ಫೀಫಾ ಫುಟ್ಬಾಲ್ ವರ್ಲ್ದ್ ಕಪ್ ಸಿದ್ದತೆಗಳು ನಿರಾತಂಕವಾಗಿ ಮುಂದುವರಿದೆ . ಹೊಸ ಹೊಸ ಸ್ಟೇಡಿಯಂಗಳು, ಫುಟ್ಬಾಲ್ ಪ್ರಿಯರ ಆತಿಥ್ಯಕ್ಕಾಗಿ ಹೋಟೆಲುಗಳು ತಲೆಯೆತ್ತುತ್ತಿವೆ. ಮೆಟ್ರೋ ಕಾಮಗಾರಿ ಭರದಿಂದ ಸಾಗುತ್ತಿದೆ. ವರ್ಲ್ಡ್ ಕಪ್ ಫೈನಲ್ ಪಂದ್ಯ ನಡೆಯಲಿರುವ, ಎಂಬತ್ತು ಸಾವಿರ ಆಸನ ವ್ಯವಸ್ಥೆಯನ್ನು ಹೊಂದಿರುವ ಲುಸೈಲ್ ಕ್ರೀಡಾಂಗಣದ ವಿನ್ಯಾಸವನ್ನು ಕತಾರ್ ಈ ವಾರ ಅನಾವರಣಗೊಳಿಸಿತು.

ಏನೇ ಆದರೂ ಕತಾರ್ ದೇಶದ ಸ್ವತಂತ್ರ ಮನೋಭಾವ ನೆರೆಯ ರಾಷ್ಟ್ರಗಳನ್ನು ದಂಗುಬಡಿಸಿರುವುದಂತೂ ಸತ್ಯ . ಎಲ್ಲವನ್ನೂ ಸಂಬಾಳಿಸಿಕೊಂಡು ತನಗೆ ನಿರ್ಬಂಧ ಹೇರಿರುವ ರಾಷ್ಟ್ರಗಳಿಗೆ ಸಡ್ಡು ಹೊಡೆಯುತ್ತ ಕತಾರ್ ಮುನ್ನುಗ್ಗುತ್ತಿದೆ. ವಿಸ್ತೀರ್ಣದಲ್ಲಿ ಕೇರಳಕ್ಕಿಂತಲೂ ಸಣ್ಣದಾಗಿರುವ ಕತಾರ್ ದೇಶದಲ್ಲಿ ಫೀಫಾದಂತಹ ಪ್ರತಿಷ್ಠಿತ ಕ್ರೀಡಾಕೂಟ ನಡೆಯುತ್ತದೆನ್ನುವುದೇ ಸೋಜಿಗ, ಕತಾರ್ ಅಂಗಳದಲ್ಲಿ ವರ್ಲ್ಡ್ ಕಪ್ ಚೆಂಡು ಪುಟಿಯುವುದನ್ನು ನೋಡಲು ವಿಶ್ವ ಕುತೂಹಲದಿಂದಲೂ ಕತಾರಿಗಳು ಕಾತರದಿಂದಲೂ ಕಾಯುತ್ತಿದ್ದಾರೆ.