ಸೋನು ನಿಗಮ್ ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತಂತೆ…

0
1628

ಇಸ್ಮತ್ ಪಜೀರ್

ಗಾಯಕ ಸೋನು ನಿಗಂ ಈಗ ಹೊಸತೊಂದು ರಾಗ ಹಾಡುತ್ತಿದ್ದಾರೆ… “ನಾನು ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು” ಎಂಬ ಹೊಸರಾಗ…..

ಮುಂಬೈಯ ಮಸೀದಿಗಳ ಮಿನಾರದಿಂದ ಮುಂಜಾವಿಗೆ ಕೇಳಿ ಬರುವ ಆಝಾನನ್ನೇ ಸಹಿಸಲು ಸಾಧ್ಯವಾಗದ ಸೋನುಗೆ ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತಂತೆ…

ಒಂದೊಮ್ಮೆ ಅತ್ಯಂತ ಬೇಡಿಕೆಯಲ್ಲಿದ್ದ ಸೋನುಗೆ ಈಗ ಮಾರುಕಟ್ಟೆ ಇಲ್ಲ.‌ ಅದಕ್ಕಾಗಿ ಒಮ್ಮೆ ಆಝಾನ್ ಈತನಿಗೆ ನಿದ್ರಾಭಂಗ ಮಾಡುತ್ತದೆ ಎಂದು ದೊಡ್ಡ ವಿವಾದಕ್ಕೆಡೆ ಮಾಡುವ ಹೇಳಿಕೆ ನೀಡಿ ಕೆಲಕಾಲ ಚರ್ಚೆಯ ವಸ್ತುವಾಗಿದ್ದರು. ಜನ ಅದನ್ನು ಮರೆತು ಬಿಟ್ಟರು. ಇದೀಗ ಮತ್ತೆ ಇನ್ನೊಂದು ವಿವಾದಾತ್ಮಕ ಹೇಳಿಕೆ ಕೊಟ್ಟು ಕೆಲಕಾಲ ಚರ್ಚೆಯಲ್ಲಿರಲು ಬಯಸಿರುವಂತೆ. ಇವರನ್ನು ಹಲವರು ಅಂದು ಹಿಂದೂತ್ವವಾದಿ ಎಂದು ಜರೆದಾಗ ನಾನು ಸ್ಪಷ್ಟವಾಗಿ ಹೇಳಿದ್ದೆ… “ಈತ ಕೇವಲ ಪ್ರಚಾರವಾದಿ ” ಎಂದು.

ಇದು ಇವರೇ ಹುಟ್ಟು ಹಾಕಿದ ಹೊಸ ತಂತ್ರವೇನಲ್ಲ. Negative route of publicity ಎಂದು ಇದನ್ನು ಕರೆಯಬಹುದು. ಸುಮಾರು ಏಳೆಂಟು ವರ್ಷಗಳ ಹಿಂದೆ ಒಮ್ಮೆ ಲೇಖಕಿ ಸಾರಾ ಅಬೂಬಕರ್ ನನ್ನಲ್ಲಿ ಹೇಳಿದ್ದರು. ” ಕೇರಳದ ಕೆಲವು ಲೇಖಕರು ಕೆಲವು ಬಾಡಿಗೆ ಪ್ರತಿಭಟನಾಕಾರರಲ್ಲಿ ತಮಗೆ ತಾವೇ ಟೊಮ್ಯಾಟೊ, ಮೊಟ್ಟೆ ಹೊಡೆಸುತ್ತಿದ್ದರಂತೆ.”

ಬೇಡಿಕೆ ಕಡಿಮೆಯಾದಾಗ ಸಮಾಜ ತಮ್ಮನ್ನು ಮರೆತುಬಿಡುತ್ತದೆ ಮತ್ತು ಹೇಗಾದರೂ ಮಾಡಿ ಮತ್ತೆ ಬೇಡಿಕೆ ಪ್ರಾಪ್ತಿ ಮಾಡಿಕೊಳ್ಳಬೇಕೆಂಬ ಹುಚ್ಚು ಸಾಮಾಜಿಕ ಶಾಂತಿಗೆ ಅತ್ಯಂತ ಮಾರಕ. ನಿಮಗೆ ಗೊತ್ತಿರಬಹುದು. ಲಜ್ಜಾ ಎಂಬ ಕಾದಂಬರಿ ಬರೆದವರು ಬಾಂಗ್ಲಾದ ಲೇಖಕಿ ತಸ್ಲೀಮಾ ನಸ್ರೀನ್. ಆಕೆ ಯಾವುದೇ ವಿಧದಲ್ಲಿ ನೋಡಿದರೂ ಗುಣಮಟ್ಟದ ಲೇಖಕಿಯಲ್ಲ. ಆದರೆ ಆಕೆಗೆ ದಿಡೀರ್ ಪ್ರಚಾರ ಬೇಕಿತ್ತು. ಅದಕ್ಕಾಗಿ ಆಕೆ ಕಂಡುಕೊಂಡ ಸುಲಭ ಮಾರ್ಗ ಇದೇ Negative route of publicity. ಯಾರಲ್ಲಿ ನಿಜಕ್ಕೂ ಪ್ರತಿಭೆ ಮತ್ತು ಬಂಡವಾಳ ಇರುತ್ತದೋ ಅವರಿಗೆ ಇಂತಹದ್ದರ ಅಗತ್ಯವಿರುವುದಿಲ್ಲ. ಇನ್ನು ಕೆಲವರು ಸತ್ಯವನ್ನು ಪ್ರತಿಪಾದಿಸಿದ್ದಕ್ಕೆ, ಅಪ್ರಿಯ ಸತ್ಯವನ್ನು ಸಮಾಜದ ಮುಖಕ್ಕೆ ಹೊಡೆದಂತೆ ಹೇಳಿದಾಗ ವಿವಾದವುಂಟಾಗುವುದಿದೆ. ಅದು ಬೇರೆಯೇ ಕೆಟಗರಿ. ಅವರಲ್ಲಿ ಬಂಡವಾಳ ಮತ್ತು ಪ್ರತಿಭೆ ಇರುತ್ತವೆ ಎನ್ನುವುದನ್ನು ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಅದಕ್ಕೊಂದು ಉದಾಹರಣೆ ಡಾ.ಎಂ.ಎಂ.ಕಲ್ಬುರ್ಗಿ.

ಆದರೆ ಈ ಸೋನು ನಿಗಂನದ್ದು ದಿವಾಳಿಗಳ ಮಾರ್ಗ ಎನ್ನುವುದಕ್ಕೆ ಅಗತ್ಯವೇ ಇಲ್ಲದ ಆತನ ಈ ಎರಡು ಹೇಳಿಕೆಗಳೇ ಸಾಕ್ಷಿ ಒದಗಿಸುತ್ತದೆ. ಇವರನ್ನು ಇಗ್ನೋರ್ ಮಾಡುವುದೊಂದೇ ಇವರನ್ನು ತೆಪ್ಪಗಾಗಿಸಲು ಇರುವ ಮಾರ್ಗ.. ಜಸ್ಟ್ ಇಗ್ನೋರ್ ದೆಮ್…