ಜನತೆಯಲ್ಲಿ ಧೈರ್ಯ ತುಂಬಲು ಮಂಗಳೂರಿನಲ್ಲಿ ಪಥ ಸಂಚಲನ ನಡೆಸಿದ ಪೊಲೀಸರು

0
408

ಸನ್ಮಾರ್ಗ ವಾರ್ತೆ

ಮಂಗಳೂರು: ಕಳೆದ ಕೆಲವು ವಾರಗಳಿಂದ ಹಿಜಾಬ್-ಶಾಲು ವಿಚಾರವಾಗಿ ರಾಜ್ಯದಲ್ಲಿ ಉಂಟಾಗಿರುವ ಕೆಲವೊಂದು ಬೆಳವಣಿಗೆಗಳಿಂದ ಜನರು ರೋಸಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಜನರಲ್ಲಿ ಉಂಟಾಗಿರುವ ಗೊಂದಲಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಾಗೂ ಅದಕ್ಕೆ ಪೂರಕವಾಗಿ ಜನತೆಯಲ್ಲಿ ಧೈರ್ಯ ತುಂಬುವುದಕ್ಕಾಗಿ ಮಂಗಳೂರು ನಗರದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಪಥ ಸಂಚಲನ ನಡೆಸಿದರು.

ಶಾಲಾ ಕಾಲೇಜುಗಳು ಪರಿಸರದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಪೊಲೀಸರಿಂದ ಪಥ ಸಂಚಲನ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಪಥಸಂಚಲನ ಆರಂಭವಾಗಿ ಬಲ್ಲಾಳ್ ಬಾಗ್ ನಿಂದ ಶುರುವಾಗಿ ಪಿ.ವಿ.ಎಸ್ ಸರ್ಕಲ್, ಜ್ಯೋತಿ ಅಂಬೇಡ್ಕರ್, ಸರ್ಕಲ್ ಆಗಿ ಹಂಪನಕಟ್ಟ ಮಾರ್ಗವಾಗಿ ಪೊಲೀಸ್ ಆಯುಕ್ತರ ಕಚೇರಿ ಬಳಿ ಕೊನೆಗೊಂಡಿತು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್‌ ನೇತೃತ್ವದಲ್ಲಿ ಪಥಸಂಚಲನ ಆಯೋಜಿಸಲಾಗಿತ್ತು. ಡಿಸಿಪಿ ಹರಿರಾಂ ಶಂಕರ್‌, ಟ್ರಾಫಿಕ್ ಎಸಿಪಿ ನಟರಾಜ್‌ ಸಹಿತ ಹಲವು ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡರು.

ಇನ್ನು ಪಥಸಂಚಲನದ ಅರಿವು ಇಲ್ಲದೇ ಮಂಗಳೂರು ನಗರದ ಬಹುತೇಕ ಕಡೆಗಳಲ್ಲಿ ಬೆಳಿಗ್ಗೆ ಟ್ರಾಫಿಕ್‌ ಜಾಮ್ ಉಂಟಾಯಿತು. ಅನೇಕ ಕಡೆಗಳಲ್ಲಿ ಪಥ ಸಂಚಲನದ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಬದಲಾವಣೆ ಕೂಡಾ ಮಾಡಲಾಗಿತ್ತು.