ಸಂಬಂಧಿಕರ ಕಣ್ಣ ಮುಂದೆಯೇ ಸಿಪಿಎಂ ಕಾರ್ಯಕರ್ತನ ಬರ್ಬರ ಹತ್ಯೆ: ಕೃತ್ಯದ ಹಿಂದೆ ಬಿಜೆಪಿ ಕೈವಾಡವಿದೆ- ಸಿಪಿಎಂ ಆರೋಪ

0
446

ಕೊಲೆಗೆ ಕರೆ ನೀಡಿದ ಬಿಜೆಪಿ ನಾಯಕನ ಭಾಷಣದ ದೃಶ್ಯಗಳು ವೈರಲ್!

ಸನ್ಮಾರ್ಗ ವಾರ್ತೆ

ತಲಶ್ಶೇರಿ: ಶಾಂತವಾಗಿದ್ದ ಕಣ್ಣೂರು ಮತ್ತೆ ಹತ್ಯಾ ರಾಜಕೀಯದ ನೆಲೆಯಾಗಿ ಮಾರ್ಪಟ್ಟಿದೆ. ಸಿಪಿಎಂ ಕಾರ್ಯಕರ್ತ, ಮೀನುಗಾರ ಹರಿದಾಸ್ ಎಂಬವರನ್ನು ಸಂಬಂಧಿಕರ ಮುಂದೆಯೇ ಕ್ರೂರವಾಗಿ ಕೊಲೆ ಮಾಡಿದ ಘಟನೆ ನಡೆದಿದ್ದು, ಕೃತ್ಯದ ಹಿಂದೆ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರು ಇದ್ದಾರೆ ಎಂದು ಪೊಲೀಸರಿಗೆ ಸೂಚನೆ ಲಭಿಸಿದೆ.

ಕೆಲಸ ಮುಗಿಸಿ ರಾತ್ರೆ ಗೆಳೆಯರ ಜೊತೆ ಬೈಕಿನಲ್ಲಿ ಮನೆಗೆ ಮರಳುತ್ತಿದ್ದ ಹರಿದಾಸ್ ಬೈಕಿನಿಂದ ಇಳಿದು ಮನಗೆ ನಡೆದು ಹೋಗುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಬಂದ ಹತ್ಯಾಕೋರರು ಹರಿದಾಸ್‍ರನ್ನು ಇರಿದರು. ಬೊಬ್ಬೆ ಕೇಳಿ ಮನೆಯವರು ಓಡಿ ಬಂದರು. ಅವರ ಕಣ್ಣ ಮುಂದೆಯೇ ಹರಿದಾಸ್‍ರನ್ನು ಕಡಿದು ಕೊಲೆ ಮಾಡಿದರು. ಕಾಲನ್ನು ಸಂಪೂರ್ಣ ದೇಹದಿಂದ ವಿಚ್ಛೇದಿಸಲಾಗಿತ್ತು. ಹರಿದಾಸ್‍ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಹರಿದಾಸ್‍ರ ಕಾಲು ಪತ್ತೆಯಾಗಿರಲಿಲ್ಲ. ಹರಿದಾಸ್‍ರನ್ನು ರಕ್ಷಿಸಲು ಮುಂದೆ ಬಂದ ಸಹೋದರ ಸೂರ ಎಂಬವರನ್ನೂ ಹಂತಕರು ಗಾಯಗೊಳಿಸಿದರು.

ಪುನ್ನೊಲಿ ಎಂಬಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಸಿಪಿಎಂ-ಬಿಜೆಪಿ ಘರ್ಷಣೆ ಮತ್ತು ಜಾತ್ರೆಯ ಬೆನ್ನಿಗೆ ಬಿಜೆಪಿಯವರ ಪ್ರತಿಭಟನಾ ಸಭೆಯಲ್ಲಿ ತಲಶ್ಶೇರಿ ಕೊಮ್ಮಲ್ ವಾರ್ಡಿನ ಕೌನ್ಸಿಲರ್ ವಿಜೇಶ್ ಹತ್ಯೆಗೆ ಕರೆ ನೀಡಿದ ಭಾಷಣ ಹರಿದಾಸ್ ಕೊಲೆಗೆ ಕಾರಣವಾಯಿತೆಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂವಿ ಜಯರಾಜನ್ ಆರೋಪಿಸಿದರು. ಕೊಲೆಗೆ ಕರೆ ನೀಡಿದ ಭಾಷಣದ ದೃಶ್ಯಗಳು ವೈರಲಾಗಿವೆ.

ಕೊಲೆ ಪಾತಕ ಪ್ರತಿಭಟಿಸಿ ತಲಶ್ಶೇರಿ ನಗರಸಭೆ, ನ್ಯೂಮಾಹಿ ಪಂಚಾಯತ್‍ಗಳಲ್ಲಿ ಸಿಪಿಎಂ ಹರತಾಳಕ್ಕೆ ಕರೆ ನೀಡಲಾಗಿದೆ. ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಹರತಾಳ ನಡಿಯುತ್ತಿದ್ದು. ಇದೇ ವೇಳೆ ಪ್ರತೀಕಾರ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸಂಘರ್ಷಾವಸ್ಥೆಯಿರುವ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಘಟನೆಯ ನಂತರ ಪೊಲೀಸರು ಸಂಬಂಧಿಕರಿಂದ ಹೇಳಿಕೆಯನ್ನು ಸಂಗ್ರಹಿಸಿದ್ದು ಹತ್ಯೆ ನಡೆಸುವವರು ತಂದಿದ್ದ ಬೈಕ್ ಕೇಂದ್ರೀಕರಿಸಿ ಪೊಲೀಸ್ ತನಿಖೆ ನಡೆಯುತ್ತಿದೆ.