ಶ್ರೀನಗರ,ಫೆ.16: ಪೂಲ್ವಾಮದಲ್ಲಿ ಭಯೋತ್ಪಾದನಾ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಸೈನಿಕನ ಮೃತದೇಹಕ್ಕೆ ಕೆಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಹೆಗಲು ಕೊಟ್ಟರು. ಭಯೋತ್ಪಾದನಾ ದಾಳಿ ನಡೆದ ನಂತರ ಶುಕ್ರವಾರ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ ರಾಜನಾಥ್ ಸಿಂಗ್, ಯೋಧರ ಮೃತದೇಹಗಳಿದ್ದ ಪೆಟ್ಟಿಗೆಗಳನ್ನು ತ್ರಿವರ್ಣ ಧ್ವಜದಲ್ಲಿ ಹೊದ್ದಿಸಿ ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ತಾನೂ ಕೈ ಜೋಡಿಸಿದರು. ವೀರ ಮರಣವನ್ನು ಹೊಂದಿದ ಸಿಆರ್ಪಿಎಫ್ ಯೋಧರಿಗೆ ಅವರು ಶ್ರದ್ಧಾಂಜಲಿ ಅರ್ಪಿಸಿದರು.

ರಾಜ್ಯಪಾಲ ಸತ್ಯ ಪಾಲ್ ಮಲಿಕ್, ಗೃಹ ಕಾರ್ಯದರ್ಶಿ ರಾಜೀವ್ ಗೌಬ, ಸಿಆರ್ಪಿಎಫ್ ಡೈರಕ್ಟರ್ ಜನರಲ್ ಆರ್.ಆರ್. ಭಟ್ನಾಗರ್, ಜಮ್ಮುಕಾಶೀರ ಡಿಜಿಪಿ ದಿಲ್ಬಾಗ್ ಸಿಂಗ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದೇಶದ ವಿವಿಧೆಡೆಗೆ ಸಾಗಿಸುವುದಕ್ಕಾಗಿ ಯೋಧರ ಮೃತದೇಹಗಳನ್ನು ವಿಮಾನನಿಲ್ದಾಣಕ್ಕೆ ತರಲಾಯಿತು. ಇದಕ್ಕಾಗಿಯೇ ವಿಶೇಷ ವಿಮಾನವನ್ನು ಸಜ್ಜೀಕರಿಸಿ ಇರಿಸಲಾಗಿತ್ತು. ವಿಮಾನ ನಿಲ್ದಾಣಕ್ಕೆ ಕೊಂಡು ಹೋಗುವಾಗ ಹಾಗೂ ವಾಹನಕ್ಕೆ ಹತ್ತಿಸುವಾಗ ಮತ್ತು ಮೃತದೇಹಗಳನ್ನು ವಾಹನದಿಂದ ಇಳಿಸುವಾಗ ಜಮ್ಮು-ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ರ ಜೊತೆ ರಾಜನಾಥ್ ಸಿಂಗ್ ಹೆಗಲುಕೊಟ್ಟರು. ಮೃತದೇಹಗಳನ್ನು ವಾಹನದಲ್ಲಿ ಇರಿಸುವವರೆಗೆ ಎಲ್ಲರೂ ಮೌನಪಾಲಿಸಿದರು.












