ಸನ್ಮಾರ್ಗ ವಾರ್ತೆ
ಕನೌಜ್: ಬಿಜೆಪಿ ಪ್ರಬಲವಾದರೆ, ಜನರು ಮತದಾನದ ಹಕ್ಕನ್ನೂ ಕಳೆದುಕೊಳ್ಳಬಹುದು ಎಂದು ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದರು. ಜೌವ ಎಂಬಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತಾಡುತ್ತಿದ್ದರು. ಆಡಳಿತ ಪಕ್ಷ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನವನ್ನು ನಾಶಪಡಿಸುತ್ತಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಇಂದು ಭಾರತದ ಆಸ್ತಿಯನ್ನು ಮಾರುತ್ತಿದೆ. ದೇಶವನ್ನು ಅವರು ಉದ್ಯಮಿಗಳಿಗೆ ಕೊಟ್ಟಿದ್ದಾರೆ. ಇವರು ಇನ್ನು ಕೆಲವು ಕಾಲ ಮುಂದುವರಿದರೆ ನಮ್ಮನ್ನು ಗುಲಾಮರನ್ನಾಗಿಸುತ್ತಾರೆ ಎಂದು ಅಖಿಲೇಶ್ ಕುಟುಕಿದೆಉ. ಚುನಾವಣೆ ನಡೆಯದ ಕೆಲವು ದೇಶಗಳಿವೆ ಎಂದು ಬೊಟ್ಟು ಮಾಡಿದ ಅವರು ಎಚ್ಚರದಿಂದಿರಿ ಎಂದರು.
ಬಿಜೆಪಿ ಹಿಂದುಳಿದ ಸಮುದಾಯದ ಜನರು ಮತ್ತು ದಲಿತರ ಮತಗಳನ್ನು ಸ್ವೀಕರಿಸುತ್ತಿದೆ. ಆದರೆ ಅವರಿಗೆ ಯಾವುದೇ ಪರಿಗಣನೆಯನ್ನು ನೀಡುತ್ತಿಲ್ಲ ಎಂದರು.
ಆರೆಸ್ಸೆಸ್ ವಿರುದ್ಧ ತೀಕ್ಷ್ಣ ಟೀಕೆಗಳನ್ನು ಹರಿಯಬಿಟ್ಟ ಅಖಿಲೇಶ್ ಒಂದು ಕಾಲದಲ್ಲಿ ತ್ರಿವರ್ಣ ಧ್ವಜವನ್ನು ವಿರೋಧಿಸಿದವರು ಇಂದು ಎಲ್ಲರ ಮನೆಯಲ್ಲಿ ಇರಬೇಕೆಂದು ಹೇಳುತ್ತಿದ್ದಾರೆ ವ್ಯಂಗ್ಯವಾಡಿದರು. ಕೇಂದ್ರ ಸರಕಾರದ ಸೈನಿಕ ನೇಮಕಾತಿ ಯೋಜನೆ ಅಗ್ನಿಪಥ್ ಅನ್ನು ಟೀಕಿಸಿದ ಅವರು, ಕೆಲವೇ ದಿನಗಳಲ್ಲಿ ಈ ತಾತ್ಕಾಲಿಕ ವ್ಯವಸ್ಥೆಯನ್ನು ಪೊಲೀಸ ಇಲಾಖೆಯಲ್ಲೂ ಜಾರಿಗೊಳಿಸಬಹುದು ಎಂದು ಎಚ್ಚರಿಸಿದರು.












