ತಿರುವನಂತಪುರಂ,ಮಾ. 13: ಲೋಕಸಭಾ ಚುನಾವಣೆಯಲ್ಲಿ ವೋಟಿಗಾಗಿ ಶಬರಿಮಲೆ ವಿಷಯವನ್ನು ಉಪಯೋಗಿಸಬಾರದು ಎಂದು ಮುಖ್ಯ ಚುನಾವಣಾಧಿಕಾರಿ ಡಿಕಾರಾಂ ಮೀಣ ತಿಳಿಸಿದ್ದಾರೆ. ಶಬರಿಮಲೆ ವಿಷಯವನ್ನು ವೋಟಿಗೆ ಉಪಯೋಗಿಸಲು ತಾನು ಅನುಮತಿ ನೀಡಿಲ್ಲ.
ಅದನ್ನು ವೋಟಿಗಾಗಿ ಬಳಸುವುದು ತಪ್ಪು. ಅಯ್ಯಪ್ಪನ ಹೆಸರು ಹೇಳಿ ವೋಟು ಕೇಳಬಾರದೆಂದು ಅವರು ಹೇಳಿದರು. ಸರ್ವಪಕ್ಷಗಳ ಸಭೆಯ ಬಳಿ ಪತ್ರಕರ್ತರಿಗೆ ಈ ವಿಷಯವನ್ನು ಅವರು ತಿಳಿಸಿದ್ದಾರೆ. ಯಾವ ವಿಷಯವಾದರೂ ಚರ್ಚೆ ಮಾಡಬಹುದು. ತಾನು ಶಬರಿಮಲೆ ವಿಷಯವನ್ನು ಉಪಯೋಗಿಸದಂತೆ ನಿಷೇಧಿಸಲು ಸಾಧ್ಯವಿಲ್ಲ. ಮಹಿಳಾ ಪ್ರವೇಶ ವಿಷಯ ಉಪಯೋಗಿಸಿದರೆ ಹೇಗೆ ತಡೆಯುವುದು ಎಂದು ಡಿಕಾರಾಂ ಮೀಣ ಪ್ರಶ್ನಿಸಿದರು.
ಜನರ ಭಾವನೆಯನ್ನು ಪ್ರಚೋದಿಸುವ ರೀತಿ ಧರ್ಮ, ಜಾತಿ, ಸಮುದಾಯದ ಹೆಸರನ್ನು ಉಪಯೋಗಿಸಬಾರದು. ಚುನಾವಣೆ ಜಾತ್ಯತೀತ ಪ್ರಕ್ರಿಯೆಯಾಗಿದೆ ಎಂದು 2017ರ ಸುಪ್ರೀಂಕೋರ್ಟು ತೀರ್ಪು ನೀಡಿದೆ. ದೇವಸ್ಥಾನ, ಮಸೀದಿ, ಚರ್ಚ್ಗಳ ಸಹಿತ ಚಿತ್ರಗಳನ್ನು ಪ್ರಚಾರದಲ್ಲಿ ಬಳಸಬಾರದು. ಧಾರ್ಮಿಕ ಭಾವನೆ ಘಾಸಿ ಮಾಡುವ ರೀತಿಯಲ್ಲಿ ಪ್ರಚಾರ ಮಾಡಬಾರದು. ಜಾತ್ಯತೀತ ಪ್ರಕ್ರಿಯೆಗೆ ಲೋಪವೆಸಗುವ ಯಾವುದೇ ಕಾರ್ಯ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಇದನ್ನು ಸರ್ವ ಪಕ್ಷ ಸಭೆಯಲ್ಲಿ ತಿಳಿಸಿದ್ದೇನೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದರೆ ಕಠಿಣ ಕ್ರಮ ಜರಗಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದರು.












