ನೆಟ್ಟಾರು ಪತ್ನಿಗೆ ಗುತ್ತಿಗೆ ನೌಕರಿ ಕೊಟ್ಟದ್ದೇಕೆ? ಓರ್ವ ಸಂಸದನಾಗಿ ಪೂರ್ಣಕಾಲಿಕ ನೌಕರಿ ಕೊಡಿಸಲೂ ಸಾಧ್ಯವಾಗಿಲ್ಲವೇ?: ಕಟೀಲ್ ಗೆ ಪ್ರತಿಭಾ ಕುಳಾಯಿ ಛೀಮಾರಿ

0
454

ಸನ್ಮಾರ್ಗ ವಾರ್ತೆ

ಹತ್ಯೆಯಾಗಿರುವ ಪ್ರವೀಣ್ ನೆಟ್ಟಾರ್ ನಮ್ಮ ಬಿಲ್ಲವ ಸಮಾಜಕ್ಕೆ ಸೇರಿದವರು. ಅವರ ಪತ್ನಿಗೆ ಕೆಲಸ ಕೊಡುವುದು ದೊಡ್ಡ ಕೆಲಸವಲ್ಲ. ಆದರೆ ಬಿಜೆಪಿ ಕೊಡಿಸಿರುವ ಗುತ್ತಿಗೆ ಆಧಾರದ ಕೆಲಸದ ಅವಧಿ ಮುಗಿದಿದೆ. ಇದು ನಿಜಕ್ಕೂ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ನಾಚಿಕೆ ಪಡಬೇಕಾದ ವಿಷಯ.

ಬಿಜೆಪಿ ಸರಕಾರ ಇದ್ದಾಗ ಮುಖ್ಯಮಂತ್ರಿಯವರಿಗೆ, ಎಂಪಿ ನಳಿನ್ ಕುಮಾರ್ ಕಟೀಲ್ ಗೆ ನೆಟ್ಟಾರ್ ಪತ್ನಿಯನ್ನು ಕೇಂದ್ರ ಅಥವಾ ರಾಜ್ಯ ಸ್ವಾಮ್ಯದ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿಸಬಹುದಿತ್ತು ಅಥವಾ ಸರಕಾರದಿಂದ ಶಾಶ್ವತ ಉದ್ಯೋಗ ಕಲ್ಪಿಸಬಹುದಿತ್ತು. ಅದನ್ನು ಬಿಟ್ಟು ತಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹತ್ಯೆಗೀಡಾದಾಗ ಆತನ ಕುಟುಂಬದ ಸದಸ್ಯರಿಗೆ ತಾತ್ಕಾಲಿಕ ನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲಾಗಿದೆ. ಇದು ನಮ್ಮ ಬಿಲ್ಲವ ಸಮಾಜ ಖಂಡಿತಾ ಒಪ್ಪುವುದಿಲ್ಲ. ನಳಿನ್ ಕುಮಾರ್ ಕಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ನೆಟ್ಟಾರ್ ಪತ್ನಿಗೆ ವೈಯಕ್ತಿಕ ನೆಲೆಯಲ್ಲಿ ನಾನು ಕೆಲಸ ನೀಡುತ್ತೇನೆ” ಎಂದು ಬಿಲ್ಲವ ಮುಖಂಡೆ, ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ. ಅವರು ಮಂಗಳೂರು ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತಿದ್ದರು.

ಹಿಂದೂ ಸಂಘಟನೆಯ ಬಿಲ್ಲವ ಯುವಕರನ್ನು ಬಿಜೆಪಿ ನಾಯಕರು ತಮಗೆ ಬೇಕಾದಂತೆ ಬಳಸಿಕೊಂಡು ಕೊನೆಗೆ ಕೈಬಿಡುತ್ತಾರೆ. ನೆಟ್ಟಾರ್ ಕುಟುಂಬ ನಮ್ಮ ಬಿಲ್ಲವ ಸಮಾಜಕ್ಕೆ ಸೇರಿದ್ದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನೆಟ್ಟಾರ್ ಅವರ ಪತ್ನಿಗೆ ಉದ್ಯೋಗ ಕೊಡಲು ನಾವೆಲ್ಲರೂ ಒಂದಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ” ಎಂದರು.