ಅನ್ನ ಭಾಗ್ಯ ಯೋಜನೆ: ಕೇಂದ್ರೀಯ ಸಂಸ್ಥೆಗಳಿಂದಲೇ ಅಕ್ಕಿ ಖರೀದಿಗೆ ಪ್ರಯತ್ನ- ಸಿದ್ದರಾಮಯ್ಯ

0
514

ಸನ್ಮಾರ್ಗ ವಾರ್ತೆ

ಬೆಂಗಳೂರು: ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ (ಎನ್‌ಸಿಸಿಎಫ್), ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾ ಮಂಡಳ (ನಾಫೆಡ್) ಮತ್ತು ಭಾರತೀಯ ಆಹಾರ ನಿಗಮ (ಎಫ್‌ಸಿಐ) ಸೇರಿದಂತೆ ಕೇಂದ್ರೀಯ ಸಂಸ್ಥೆಗಳಿಂದಲೇ ಅನ್ನ ಭಾಗ್ಯ ಯೋಜನೆಗೆ ಅಗತ್ಯವಿರುವ ಅಕ್ಕಿ ಖರೀದಿಗೆ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಎಫ್‌ಸಿಐ ಪ್ರತಿ ಕೆ.ಜಿ.ಗೆ 34ರ ದರದಲ್ಲಿ ಅಕ್ಕಿ ಒದಗಿಸುತ್ತದೆ. 2.60 ಸಾಗಾಣಿಕೆ ವೆಚ್ಚ ಸೇರಿದರೆ ಪ್ರತಿ ಕೆ.ಜಿ.ಗೆ 36.60 ವೆಚ್ಚವಾಗುತ್ತದೆ. ಈಗ ಮೂರೂ ಸಂಸ್ಥೆಗಳಿಂದ ದರ ಪಟ್ಟಿ ಆಹ್ವಾನಿಸಿ, ಟೆಂಡರ್ ಮೂಲಕ ಅಕ್ಕಿ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಈಗ ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ ಐದು ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಹೆಚ್ಚುವರಿಯಾಗಿ ಜೋಳ, ರಾಗಿ ವಿತರಿಸುವ ಕುರಿತು ಚರ್ಚೆ ನಡೆದಿದೆ. ಆದರೆ, ತಲಾ ಎರಡು ಕೆ.ಜಿ. ಜೋಳ ಅಥವಾ ರಾಗಿ ವಿತರಿಸಿದರೂ ಆರು ತಿಂಗಳಿಗೆ ಸಾಕಾಗುವಷ್ಟು ದಾಸ್ತಾನು ಮಾತ್ರ ಇದೆ. ಬಾಕಿಯಿರುವ ಅಕ್ಕಿಯನ್ನು ಖರೀದಿಸಲೇಬೇಕಾಗುತ್ತದೆ ಎಂದವರು ಹೇಳಿದರು.

ಕೇಂದ್ರ ಸರ್ಕಾರದ ಸ್ವಾಮ್ಯದ ಎಫ್‌ಸಿಐ ಬಳಿ ಅಕ್ಕಿಯ ದಾಸ್ತಾನು ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸಹಕಾರ ನೀಡಬೇಕಾದ ಕೇಂದ್ರ ಸರ್ಕಾರ ಬಡವರ ಪರ ಯೋಜನೆ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ದೂರಿದರು.

“ಛತ್ತೀಸ್ ಗಢ ರಾಜ್ಯದಲ್ಲಿ 1.5 ಲಕ್ಷ ಟನ್ ಅಕ್ಕಿಯ ದಾಸ್ತಾನು ಇದೆ. ಅದು ಸಾಕಾಗುವುದಿಲ್ಲ. ಬಡವರಿಗೆ ಅಕ್ಕಿ ವಿತರಿಸುವ ವಿಚಾರದಲ್ಲಿ ಯಾರು ಎಷ್ಟೇ ರಾಜಕಾರಣ ಮಾಡಿದರೂ ನಾವು ಹಿಂದೆ ಸರಿಯುವುದಿಲ್ಲ. ಜುಲೈ 1ರಿಂದಲೇ ಯೋಜನೆ ಜಾರಿಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ’ ಎಂದು ಸಿದ್ದರಾಮಯ್ಯ ಹೇಳಿದರು.