ಸನ್ಮಾರ್ಗ ವಾರ್ತೆ
ಬ್ರಿಟೀಷ್ ವಸಾಹತುಶಾಹಿ ದಿನಗಳಲ್ಲಿಯೂ ಸಹ ಗಾಂಧಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಇರಲಿಲ್ಲ. ಜವಾಹಲಾಲ್ ನೆಹರೂ 1,041 ದಿನಗಳ ಕಾಲ ಒಂದೇ ಬಾರಿಗೆ ಜೈಲಿನಲ್ಲಿದ್ದರು. ಈಗ ಅದೇ ದಿನಗಳನ್ನು ಹೋರಾಟಗಾರ ಉಮರ್ ಖಾಲಿದ್ ಎಣಿಸುವಂತಾಗಿದೆ. ಉಮರ್ ಖಾಲಿದ್ ಜಾಮೀನು ಮತ್ತು ವಿಚಾರಣೆ ಕೂಡ ಇಲ್ಲದೆ ಜೈಲಿನಲ್ಲಿ 1,000 ದಿನಗಳನ್ನು ಪೂರೈಸಿದ್ದಾರೆ.
ಯಾರು ಈ ಉಮರ್ ಖಾಲಿದ್?
ಸಿಎಎ ಮತ್ತು ಎನ್ಆರ್ಸಿ ವಿರೋಧಿ ಹೋರಾಟದ ವೇಳೆ ದೆಹಲಿ ಹಿಂಸಾಚಾರಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಸಾಮಾಜಿಕ ಹೋರಾಟಗಾರ, ಜೆಎನ್ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ರನ್ನು ಬಂಧಿಸಲಾಗಿದೆ. ಉಮರ್ ಖಾಲಿದ್ ತಿಹಾರ್ ಜೈಲು ಸೇರಿ ಜೂನ್ 9ಕ್ಕೆ ಒಂದು ಸಾವಿರ ದಿನಗಳು ಕಳೆದು ಹೋಗಿವೆ.
2019ರಲ್ಲಿ ಕೇಂದ್ರ ಸರಕಾರ ಸಿಎಎ ಮತ್ತು ಎನ್ಆರ್ಸಿಯನ್ನು ದೇಶದ ಜನರ ಮೇಲೆ ಹೇರಲು ಹೊರಟಾಗ ಅದನ್ನು ವಿರೋಧಿಸುವ ದೊಡ್ಡ ಆಂದೋಲವೇ ದೇಶದಲ್ಲಿ ಆರಂಭವಾಯಿತು. ಆಗಲೇ ಉಮರ್ ಖಾಲಿದ್ರಂತಹ ಹಲವು ಯುವ ನಾಯಕರು ಬೆಳಕಿಗೆ ಬಂದರು. ಖಾಲಿದ್ ಉಮರ್ ಸಹಿತ ಹಲವು ನಾಯಕರ ಬಂಧನವಾಯಿತು. ಪ್ರಶ್ನಿಸುವವರನ್ನು ಮಟ್ಟ ಹಾಕುವುದಷ್ಟೇ ಈ ಬಂಧನದ ಉದ್ದೇಶ.
ಉಮರ್ ಖಾಲಿದ್ ಬಂಧನಕ್ಕೊಳಗಾಗಿ ಸಾವಿರ ದಿನಗಳು ಕಳೆದಿರುವ ಹಿನ್ನೆಲೆಯಲ್ಲಿ ದೆಹಲಿಯ ಪ್ರೆಸ್ ಕ್ಲಬ್ನಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. ಆ ಸಭೆಯಲ್ಲಿ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಸಹಿತ ಹಲವು ಸಾಮಾಜಿಕ ಹೋರಾಟಗಾರರು ಭಾಗವಹಿಸಿದ್ದರು.
ಖಾಲಿದ್ ಅವರಂತಹವರಿಗೆ ನ್ಯಾಯದ ಬಾಗಿಲಿನ ಹಾದಿ ತುಂಬಾ ದೂರವೇ ಇರುವಂತೆ ತೋರುತ್ತಿದೆ. ಖಾಲಿದ್ ಸೆರೆವಾಸದ 1,000 ದಿನಗಳು ಮಾತ್ರವಲ್ಲ, ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ 1,000 ದಿನಗಳು ನಾಚಿಕೆಗೇಡಿನ ಸಂಗತಿ ಎಂದು ರವೀಶ್ ಕುಮಾರ್ ಹೇಳಿದರು.
ಕೇಂದ್ರ ಸರ್ಕಾರ ದೇಶವ್ಯಾಪಿಯಾಗಿ ಜಾರಿಗೆ ತರಲು ಮುಂದಾಗಿದ್ದ ಸಿಎಎ ಮತ್ತು ಎನ್ಆರ್ಸಿ ಕಾಯ್ದೆಗಳನ್ನು ವಿರೋಧಿಸಿ ಪೂರ್ವ ದೆಹಲಿಯಲ್ಲಿ ನಡೆದ ದೀರ್ಘ ಹೋರಾಟದಲ್ಲಿ ಉಮರ್ ಖಾಲಿದ್ ಮುಂದಾಳತ್ವ ವಹಿಸಿದ್ದರು.
2019ರಿಂದ ಡಿಸೆಂಬರ್ನಿAದ 2020ರ ಫೆಬ್ರವರಿ ವರೆಗೂ ಈ ಹೋರಾಟ ನಡೆದಿತ್ತು. ಫೆಬ್ರವರಿ 23 ರಿಂದ 25ರ ನಡುವೆ ಹೋರಾಟ ನಡೆಯತ್ತಿದ್ದ ಪೂರ್ವ ದೆಹಲಿಯಲ್ಲಿ ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ 53 ಮಂದಿ ಸಾವನ್ನಪ್ಪಿದ್ದರು. ಜೊತೆಗೆ 700ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು.
ಈ ಹಿಂಸಾಚಾರಕ್ಕೆ ಸಂಚು ರೂಪಿಸಿದ್ದರು ಎಂದು ಆರೋಪಿಸಿ ದೇಶದ್ರೋಹ ಮತ್ತು ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಉಮರ್ ಖಾಲಿದ್, ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಸೇರಿದಂತೆ 18 ಮಂದಿ ಸಾಮಾಜಿಕ ಹೋರಾಟಗಾರರನ್ನು 2020ರ ಸೆಪ್ಟೆಂಬರ್ 14ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಉಮರ್ ಖಾಲಿದ್ ಸೇರಿ ದಂತೆ ಹಲವು ಹೋರಾಟಗಾರರಿಗೆ ಜಾಮೀನು ದೊರೆತಿಲ್ಲ. ಆದರೆ, ಉಮರ್ ಖಾಲಿದ್ ಮೇಲೆ ಮಾಡಿರುವ ಗಂಭೀರ ಆರೋಪಗಳನ್ನು ಸಾಬೀತು ಪಡಿಸಲು ದೆಹಲಿ ಪೊಲೀಸರು ಸೂಕ್ತ ಸಾಕ್ಷ್ಯಧಾರಗಳನ್ನು ಒದಗಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂಬ ಆಶಾಭಾವದ ಹೊರತು ಅವರ ಬಿಡುಗಡೆಯ ಬೇರೆ ದಾರಿಗಳು ಕಾಣುತ್ತಿಲ್ಲ.
ಜಾರ್ಖಂಡ್ನ ಬುಡಕಟ್ಟು ಜನಾಂಗದವರ ಕುರಿತು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪೂರ್ಣಗೊಳಿಸಿದ ಖಾಲಿದ್ ಅವರನ್ನು ಸೆಪ್ಟೆಂಬರ್ 14, 2020 ರಂದು ಬಂಧಿಸಲಾಯಿತು ಮತ್ತು ದೆಹಲಿ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ಖಾಲಿದ್ ಗಲಭೆಗಳ ಮಾಸ್ಟರ್ ಮೈಂಡ್ ಎಂದು ಸಾಬೀತು ಪಡಿಸಲು ಕಳೆದ ಸಾವಿರ ದಿನಗಳಿಂದಲೂ ಹೆಣಗುತ್ತಿದ್ದಾರೆ.
ಖಾಲಿದ್ನ ತಂದೆ ಎಸ್ಕ್ಯೂಆರ್ ಇಲ್ಯಾಸ್, ಗಲಭೆ ನಡೆದಾಗ ತನ್ನ ಮಗ ದೆಹಲಿಯಲ್ಲಿ ಇರಲಿಲ್ಲ ಎಂದು ಹೇಳುತ್ತಾರೆ.
ಬಂಧನದ ಈ ಸಾವಿರ ದಿನಗಳಲ್ಲಿ ಅವರು ಎರಡು ದಿನಗಳ ಮಟ್ಟಿಗೆ ತನ್ನ ತಂಗಿಯ ಮದುವೆಗೆ. 2022ರ ಡಿಸೆಂಬರ್ 28 ರಂದು ತನ್ನ ಸಹೋದರಿಯ ಮದುವೆಗಾಗಿ ವಿಶೇಷ ಅನುಮತಿ ಪಡೆದು ಹೊರಬಂದಿದ್ದರು. ಮದುವೆಯಲ್ಲಿ ಭಾಗವಹಿಸಲು ಖಾಲಿದ್ಗೆ ಜಾಮೀನು ನೀಡಲಾಗಿತ್ತು.
ಸಿಎಎ ಮತ್ತು ಎನ್ಆರ್ಸಿ ವಿರೋಧಿಸಿ ನಡೆಸಲಾದ ಹೋರಾಟ ದಲ್ಲಿ ದೇಶದಾದ್ಯಂತ ಮುಸ್ಲಿಮ್ ಸಮುದಾಯದಲ್ಲಿ ಬಹಳಷ್ಟು ಯುವ ಸಮುದಾಯ ಹೊರ ಹೊಮ್ಮಿತು. ಖಾಲಿದ್ ವಿಷಯದಲ್ಲಿ ಅವರೆಷ್ಟು ಭೀತರಾಗಿದ್ದರು ಎಂದರೆ ಕೋವಿಡ್ ಕಾಲದಲ್ಲಿ ತಿಹಾರ್ ಜೈಲ್ನಲ್ಲಿ ಖಾಲಿದ್ ಜೊತೆ ಇದ್ದ ಎಲ್ಲ ಖೈದಿಗಳನ್ನು ಕೆಲವು ದಿನಗಳ ಮಟ್ಟಿಗೆ ಮನೆಗೆ ಕಳುಹಿಸಲಾಗಿತ್ತು. ಅವರು ಹಿಂದಿರುಗಿ ಬಂದಾಗಲೂ ಖಾಲಿದ್ ಜೈಲ್ನಲ್ಲೇ ಇದ್ದುದು ಕಂಡು, ನೀನು ಮನೆಗೆ ಹೋಗಿಯೇ ಇಲ್ಲವೇ ಎಂದು ಅಚ್ಚರಿಯಿಂದ ಅವರು ಪ್ರಶ್ನಿಸಿದ್ದರು.
ದೆಹಲಿ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾದ 751 ಎಫ್ಐಆರ್ಗಳಲ್ಲಿ 59ನೇ ಎಫ್ಐಆರ್ ದೆಹಲಿ ಗಲಭೆಗಳ ಸಂಚಿಗೆ ಸಂಬಂಧಿಸಿದ್ದಾಗಿದೆ. ಗಲಭೆಯಲ್ಲಿ ಸಾವನ್ನಪ್ಪಿದ 53 ಮಂದಿಯಲ್ಲಿ ಮೂರನೇ ಎರಡರಷ್ಟು ಮಂದಿ ಮುಸ್ಲಿಮರು, ಗಲಭೆಗೆ ಯೋಜನೆ ರೂಪಿಸಿದ ಆರೋಪ ಎದುರಿಸುತ್ತಿರುವ 18 ಮಂದಿಯಲ್ಲಿ 16 ಮಂದಿ ಮುಸ್ಲಿಮರು. ಯಾರು ಸಂತ್ರಸ್ತರಾಗಿದ್ದಾರೋ ಅವರನ್ನೇ ಅಪರಾಧಿ ಮಾಡುವ ಪ್ರಕ್ರಿಯೆ ಇದು ಅನಿಸುವುದಿಲ್ಲವೇ?
ದೆಹಲಿಯಲ್ಲಿ ಗಲಭೆ ವಿವಿಧ ಪ್ರಕರಣಗಳಲ್ಲಿ ದೆಹಲಿ ನ್ಯಾಯಾಲಯಗಳು ಆರೋಪಿತರಿಗೆ ಜಾಮೀನು ನೀಡಿವೆ. ಹೀಗೆ ಜಾಮಿನಿ ನೀಡುವಾಗ ಪೊಲೀಸರನ್ನು ನ್ಯಾಯಾಲಯಗಳು ತರಾಟೆಗೆ ತೆಗೆದುಕೊಂಡಿವೆ. “ಅಸ್ಪಷ್ಟ ಪುರಾವೆಗಳು ಮತ್ತು ಸಾಮಾನ್ಯ ಆರೋಪಗಳು,” “ಸಂಪೂರ್ಣವಾಗಿಲ್ಲದ ತನಿಖೆ”, ಮತ್ತು ನಗೆಪಾಟಲಿಗೀಡಾ ಗುವ ಸಂಗತಿಗಳನ್ನು ತುರುಕಲಾಗಿದೆ ಎಂದು” ಹೇಳಿರುವ ನ್ಯಾಯಾಲಯಗಳು, ಈ ಧೋರಣೆಗಳಿಗೆ ಪೊಲೀಸರನ್ನು ಹೊಣೆಗಾರರನ್ನಾಗಿ ಮಾಡಿವೆ.
ಸೆಪ್ಟೆಂಬರ್ 2021 ರಲ್ಲಿ, ವಕೀಲ ಮಣಿ ಚಂದರ್ 40 ನ್ಯಾಯಾಲಯದ ಆದೇಶಗಳನ್ನು ಉಲ್ಲೇಖಿಸಿದ್ದು, ಅದರಲ್ಲಿ ಸುಳ್ಳು ಹೇಳಿಕೆಗಳು, ಕಪೋಲಕಲ್ಪಿತ ಆರೋಪಗಳು ಮತ್ತು ತಾವು ಏನು ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರಿಗೆ ಗೊತ್ತಿಲ್ಲದಿರುವ ಆಂಶಗಳನ್ನು ತಿಳಿಸಿದ್ದಾರೆ.
8 ಜೂನ್ 2023 ರಂದು ಮೂವರು ಮುಸ್ಲಿಂ ಪುರುಷರನ್ನು ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯವು ತನಿಖೆ ಇಲ್ಲದೆಯೇ ಹಲವಾರು ದೂರುಗಳನ್ನು ಸೇರಿಸಿದ್ದಕ್ಕಾಗಿ ಪೊಲೀಸರನ್ನು ಟೀಕಿಸಿದೆ. ಮುಸ್ಲಿಮರು ಜೈ ಶ್ರೀರಾಮ್ ಎಂಬ ಘೋಷಣೆ ಕೂಗುತ್ತಿದ್ದರು ಎಂಬುದನ್ನು ಯೋಚಿ ಸಲೂ ಸಾಧ್ಯವಿಲ್ಲ ಎಂದು ಮೂವರನ್ನು ಖುಲಾಸೆಗೊಳಿಸುವಾಗ ನ್ಯಾಯಾಲಯ ಹೇಳಿದೆ. ಇದೆಲ್ಲ ಉಲ್ಲೇಖಿಸಿದ್ದು ಯಾಕೆ ಎಂದರೆ, ಆಡಳಿತಗಾರರ ಒತ್ತಡಕ್ಕೆ ಸಿಲುಕಿ ಪೊಲೀಸರು ಅಮಾಯಕರನ್ನು, ನಿರಪರಾಧಿಗಳನ್ನು ಹೇಗೆ ಜೈಲಿಗೆ ಅಟ್ಟಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲು.
ಅಷ್ಟಕ್ಕೂ ಉಮರ್ ಖಾಲಿದ್ಗೆ ಜಾಮೀನು ನಿರಾಕರಿಸಲು ಕೊಟ್ಟ ಕಾರಣಗಳಾದರೂ ಏನೆನ್ನುತ್ತೀರಾ?
1. ಉಮರ್ ಖಾಲಿದ್ ಜೆಎನ್ಯು ಮುಸ್ಲಿಂ ವಿದ್ಯಾರ್ಥಿಗಳ ವಾಟ್ಸಾಪ್ ಗುಂಪಿನ ಸದಸ್ಯರಾಗಿದ್ದರು.
2. ಅವರು ಜಂತರ್ ಮಂತರ್, ಜಂಗ್ಪುರ ಕಛೇರಿ, ಶಾಹೀನ್ ಬಾಗ್, ಸೀಲಂಪುರ್, ಜಾಫರಾಬಾದ್ ಮತ್ತು ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ ನಲ್ಲಿ ವಿವಿಧ ಸಭೆಗಳಲ್ಲಿ ಭಾಗವಹಿಸಿದ್ದರು.
3. ಅಮರಾವತಿಯಲ್ಲಿ ಅವರು ಮಾಡಿದ ಭಾಷಣದಲ್ಲಿ ಅಮೇರಿಕಾ ಅಧ್ಯಕ್ಷರ ಭಾರತ ಭೇಟಿಯನ್ನು ಉಲ್ಲೇಖಿಸಿದ್ದಾರೆ.
4. ಗಲಭೆಗಳ ಅನಂತರ ಇವರಿಗೆ ನಿರಂತರ ಕರೆಗಳು ಬಂದಿವೆ.












