ಮಣಿಪುರ: ಈ ಮೇಥಿ, ಕುಕಿ ಘರ್ಷಣೆಗೆ ಕಾರಣವೇನು?

0
380

ಸನ್ಮಾರ್ಗ ವಾರ್ತೆ

  • ಎ. ರಶೀದುದ್ದೀನ್

ರಾಜಕೀಯ ಎಂಬುದು ದೇಶದ ಹಿತಕ್ಕಾಗಿ ಇರುವುದಲ್ಲ. ಬಹುಸಂಖ್ಯಾತ ವಿಭಾಗದ ಹಿತಾಸಕ್ತಿಗಾಗಿ ಎಂಬುದನ್ನು ಇಂದು ಭಾರತದಲ್ಲಿ ಯಾರಿಗೂ ಕಲಿಸುವ ಅಗತ್ಯವಿಲ್ಲ. ಒಂದು ರಾಜ್ಯವನ್ನು ಇನ್ನೊಂದು ರಾಜ್ಯದ ವಿರುದ್ಧ, ಒಂದೆಡೆ ಇರುವ ಸಮೂಹವನ್ನು ಇನ್ನೊಂದೆಡೆ ಇರುವ ಸಮುದಾಯದ ವಿರುದ್ಧ ಎತ್ತಿ ಕಟ್ಟುವ ಸಾಮರ್ಥ್ಯವು ಬ್ರಿಟಿಷರನ್ನೂ ಮೀರಿಸುವ ರೀತಿಯಲ್ಲಿ ಸದ್ಯ ಚಾಲ್ತಿಯಲ್ಲಿದೆ. ಇದು ಕೆಲವೊಮ್ಮೆ ಬಿಜೆಪಿಗೆ ಹೊಡೆತವನ್ನೂ ನೀಡಿದೆ. ಇದರಲ್ಲಿ ಮಣಿಪುರದ ಸಂಘರ್ಷವೂ ಒಂದು.

ಮೇಥಿ-ಕುಕಿ ಸಂಘರ್ಷವೆಂದು ಮಾಧ್ಯಮಗಳು ಇದನ್ನು ಲಘೂಕರಿಸಿದ್ದರೂ ಮುಖ್ಯವಾಗಿ ಕ್ರೈಸ್ತರ ಆರಾಧನಾಲಯಗಳನ್ನು ಸುಟ್ಟು ಹಾಕುವ ದೃಶ್ಯಗಳು ಹೊರಬರುತ್ತಿವೆ. ಮಣಿಪುರದಲ್ಲಿ ಇದುವರೆಗಿನ ವರದಿಗಳ ಪ್ರಕಾರ ಸುಮಾರು 317 ಚರ್ಚೆಗಳನ್ನು ಮೇಥಿಗಳು ಅಗ್ನಿಗಾಹುತಿಗೊಳಿಸಿದ್ದಾರೆ. ಉತ್ತರ ಭಾರತದಲ್ಲಿ ಎಲ್ಲೋ ಬಿಜೆಪಿ ಬಯಸುವ ಧ್ರುವೀಕರಣವನ್ನು ಈ ದೃಶ್ಯಗಳು ಸೃಷ್ಟಿಸುತ್ತಿರಬಹುದು. ಆದರೆ ಅದರ ದೂರಗಾಮಿ ಪರಿಣಾಮಗಳು ಭಾರತವನ್ನು ಬಾಧಿಸಲಿದೆ.

ಮಣಿಪುರದ ಹಾಲಿ ಮುಖ್ಯಮಂತ್ರಿ ಬಿಜೆಪಿಯ ಬಿರೇನ್‌ರ ಕಳೆದ ರಾಜಕೀಯ ಚರಿತ್ರೆಯು ರಾಜ್ಯದ ಜನರ ಏಕತೆಗಾಗಿ ಕೆಲಸ ಮಾಡಿದ್ದನ್ನು ಸೂಚಿಸುತ್ತದೆ. ತಿಂಗಳ 15ನೇ ತಾರೀಕನ್ನಂತೂ ಜನ ಸಂಪರ್ಕಕ್ಕಾಗಿ ಮೀಸಲಿಟ್ಟು, ಮಣಿಪುರದ ಬುಡಕಟ್ಟು ನಾಯಕರೊಂದಿಗೆ ವಿಶೇಷ ಸಂಬಂಧ ಸ್ಥಾಪಿಸಿಕೊಂಡು ಮುಖ್ಯಮಂತ್ರಿ ಸ್ಥಾನದಿಂದ ತುಲನಾತ್ಮಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸು ತ್ತಿದ್ದರು. ರಾಜ್ಯದ ಆರಂಭಿಕ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾದ ಬಿರೇನ್ 2016ರಲ್ಲಿ ಅಂದಿನ ಮುಖ್ಯಮಂತ್ರಿ ಇಬೋಬಿ ಸಿಂಗ್ ರೊಂದಿಗೆ ಮುನಿಸಿಕೊಂಡು ಬಿಜೆಪಿ ಸೇರಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ 29 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ ನಿಂದ ಶಾಸಕರನ್ನು ಬಲೆ ಬೀಸಿ ಹಿಡಿದು ಬಿಜೆಪಿಯ ಸರಕಾರವನ್ನು ರಚಿಸಿದಾಗ ಬಿರೇನ್ ಮುಖ್ಯಮಂತ್ರಿಯಾದರು. ಈಗ ಬಿರೇನ್‌ರು ಸಂವಿಧಾನ ಮತ್ತು ಬಿಜೆಪಿ ನಡುವೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಬಿತ್ತುತ್ತಿರುವ ಕೋಮುವಾದಿ ನೀತಿಗಳೇ ಮಣಿಪುರದ ಜ್ವಾಲೆಗೆ ಮೂಲ ಕಾರಣ. ಮೇಥಿಗಳು ತಮ್ಮ ಪರಿಶಿಷ್ಟ ಜಾತಿಯ ಸ್ಥಾನಮಾನವನ್ನು ಕಳೆದುಕೊಂಡದ್ದು ಇಂದು-ನಿನ್ನೆಯ ವಿಷಯವಲ್ಲ. 1949 ಸೆಪ್ಟೆಂಬರ್ 19ಕ್ಕೆ ಲಯನ್ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕವೇ ಕಳಕೊಂಡಿದ್ದಾರೆ. ಆದರೆ ಮಣಿಪುರದ ರಾಜಕೀಯ ಮತ್ತು ಆಡಳಿತ ರಂಗಗಳನ್ನು ದೀರ್ಘ ಕಾಲದಿಂದ ಹಿಡಿತದಲ್ಲಿಟ್ಟುಕೊಂಡಿರುವ ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಕುಕಿಗಳಿಗಿಂತ ಹೆಚ್ಚು ಮುಂದಿರುವ ಮೇಥಿಗಳು ಮೀಸಲಾತಿಯ ವಿಷಯದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಅವರು ಸಾಧಿಸಿದ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪರಿಶಿಷ್ಟ ಪಂಗಡದ ಸ್ಥಾನಮಾನದಿಂದ ಅವರನ್ನು ತೆಗೆದು ಹಾಕಲಾಯಿತು. ಅದರ ಮರು ಸ್ಥಾಪನೆಯನ್ನು ಕೋರಿ ಮೇಥಿ ಬುಡಕಟ್ಟು ಒಕ್ಕೂಟವು ಸಲ್ಲಿಸಿದ ಅರ್ಜಿಗೆ ಕಳೆದ ಮಾರ್ಚ್‌ನಲ್ಲಿ ಮಣಿಪುರ ಹೈಕೋರ್ಟ್ ನೀಡಿದ ಆದೇಶದ ನಂತರ ಪ್ರಸ್ತುತ ಗಲಭೆಗಳು ಆರಂಭಗೊಂಡಿವೆ. ಅದು ಮದ್ದುಗುಂಡು ಕಾರ್ಖಾನೆಯ ಮೇಲೆ ಬಿದ್ದ ಬೆಂಕಿಯ ಕಿಡಿ ಮಾತ್ರವಾಗಿತ್ತು.

ಬೆಂಕಿ ಹಿಡಿಯಲು ಸಿದ್ಧವಾದ ರೀತಿಯಲ್ಲಿ ಮದ್ದು ಗುಂಡುಗಳನ್ನು ಸಂಗ್ರಹಿಸಿಡುವ ಕೆಲಸ ಅಲ್ಲಿ ಕ್ರಿಯಾಶೀಲವಾಗಿತ್ತು.

ಮಣಿಪುರದ ಬಹುಸಂಖ್ಯಾತ ಮೇಥಿ ಹಿಂದೂಗಳು ಮತ್ತು ಅವರೊಂದಿಗಿರುವ ಕುಕಿ ಕ್ರೈಸ್ತರ ನಡುವೆ ಹಕ್ಕು ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ರೀತಿಯಲ್ಲಿ ವಿವಾದಗಳು ಮೂರು ದಶಕಗಳಷ್ಟು ಹಿಂದಿನವು. ಇದು ಈಶಾನ್ಯ ರಾಜ್ಯಗಳ ಸಾಮಾನ್ಯ ಚಿತ್ರಣವಾಗಿದೆ. ಆದರೆ ಉಲ್ಫಾದಿಂದ ಹಿಡಿದು ಬೋಡೋ, ನಾಗಾ ಪ್ರತ್ಯೇಕತಾವಾದಿಗಳು ಸಕ್ರಿಯರಾಗಿದ್ದಾಗಲೂ ಈ ರಾಜ್ಯಗಳ ಜನರನ್ನು ದೊಡ್ಡ ಪ್ರಮಾಣದಲ್ಲಿ ಒಂದಾಗಿ ನಿಲ್ಲಿಸಲು ಸಾಧ್ಯವಾಗಿತ್ತು. ಉಲ್ಫಾ ಮತ್ತು ನಾಗಾ ಪ್ರತ್ಯೇಕತಾವಾದಿಗಳ ವಿಷಯಗಳಲ್ಲಿ ಕಾಂಗ್ರೆಸ್‌ನ ಕಾಲದಲ್ಲಿ ಉಂಟಾದ ಸಮಸ್ಯೆಗಳನ್ನು ಚರ್ಚೆಗಳಿಂದ ಪರಿಹರಿಸಲು ಮೋದಿ ಸರಕಾರಕ್ಕೆ ಸಾಧ್ಯವಾಗಿದೆ ಎಂಬುದನ್ನು ಅಡಗಿಸಿಡಬೇಕಾಗಿಲ್ಲ. ಆದರೆ, ಕುಕಿಗಳ ವಿಷಯದಲ್ಲಿ ಇದೇ ಚರ್ಚೆಯನ್ನು ಕೈಬಿಡಬೇಕೆಂದು ಬಿರೇನ್ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದರು. ರಾಜಕೀಯ ಒತ್ತಡವೇ ಇದಕ್ಕೆ ಕಾರಣ. ಜನರನ್ನು ಒಗ್ಗೂಡಿಸಲು ಬಿಜೆಪಿ ಉಪಯೋಗಿಸುವ ಏಕಮುಖ ವಿಚಾರಧಾರೆಗಳಿಂದಲೇ ಮಣಿಪುರದ ಇಂದಿನ ಗಲಭೆ ಜನ್ಮ ತಾಳಿದೆ ಎಂದರೆ ತಪ್ಪಾಗಲಾರದು. ಅಸ್ಸಾಮ್‌ನಲ್ಲಿ ಯಶಸ್ವಿಯಾದ ‘ಮಣ್ಣಿನ ಮಕ್ಕಳು’ ವಿದೇಶಿ ನುಸುಳುಕೋರರು ವಾದ ಮತ್ತು ಜನಸಂಖ್ಯಾ ಸ್ಫೋಟ ಸಿದ್ಧಾಂತದಿಂದ ಆರಂಭಿಸಿ ನಾರ್ಕೊಟಿಕ್ ಶಿಲುಬೆ ಕೃಷಿ ಆರೋಪದ ವರೆಗೆ ಬಿಜೆಪಿಯು ಮಣಿಪುರದಲ್ಲಿ ಗದ್ದಲವೆಬ್ಬಿಸುತ್ತಿದೆ. ಎರಡು ಧಾರ್ಮಿಕ ವಿಭಾಗಗಳ ನಡುವಿನ ಅಪನಂಬಿಕೆ ಆತಂಕಕಾರಿ ಹಂತಕ್ಕೆ ಬಂದು ತಲುಪಿದೆ.

ರಾಜ್ಯ ಸರಕಾರದ ಕೆಲವು ನೀತಿಗಳು ಕ್ರೈಸ್ತ ಕುಕಿಗಳನ್ನು ಕೆರಳಿಸಿರುವುದರ ನಡುವೆ ಮೇಥಿಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಅನುಕೂಲಕರವಾಗಿ ಹೈಕೋರ್ಟ್ ನ ತೀರ್ಪು ಬಂದಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಲು ಸರಕಾರ ಹಿಂದೇಟು ಹಾಕುತ್ತಿರುವುದರ ಹಿಂದೆ ಹಿಂದುತ್ವದ ವೋಟ್ ಬ್ಯಾಂಕ್ ರಾಜಕೀಯವನ್ನು ಕಾಣಬಹುದು. ಮಣಿಪುರದ ಅರೆ ಹಿಂದುಗಳಾದ ಮೇಥಿಗಳ ಒಂದು ವಿಭಾಗಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ನೀಡಬೇಕೆಂಬ ನ್ಯಾಯಾಲಯದ ತೀರ್ಪಿನ ಹಿನ್ನೆಲೆ ಮತ್ತು ಅದನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್ ಗೆ ಹೋಗುವುದಕ್ಕಿಂತ ಅದನ್ನು ಜಾರಿಗೊಳಿಸು ವುದೇ ಸುಲಭ ಎಂಬುದನ್ನು ಕಂಡುಕೊಂಡ ಸರಕಾರದ ಮಾನಸಿಕ ಸ್ಥಿತಿಯು ಒಂದೇ ದಾರದಲ್ಲಿ ಬಂಧಿಸಲ್ಪಟ್ಟಿದೆ.

ಕುಕಿಗಳು ಮಣಿಪುರಕ್ಕೆ ವಲಸೆ ಬಂದವರು ಎಂಬ ವಾದವು ರಾಜ್ಯದಲ್ಲಿ ಬಲಗೊಳ್ಳುತ್ತಿದೆ. ಮ್ಯಾನ್ಮಾರ್‌ನಲ್ಲಿನ ಮಿಲಿಟರಿ ಆಡ ಳಿತದ ದಮನಕಾರಿ ನೀತಿಗಳಿಂದ ರಕ್ಷಣೆ ಪಡೆಯಲು ಅಲ್ಲಿನ ಚಿನ್ ಆದಿವಾಸಿಗಳು ಅಂತಾರಾಷ್ಟ್ರೀಯ ಗಡಿದಾಟಿ ಇತ್ತೀಚೆಗೆ ಮಣಿಪುರಕ್ಕೆ ವಲಸೆ ಬರುತ್ತಿರುವುದು ವಾಸ್ತವ ಸಂಗತಿ. ಇವರು ಕುಕಿಗಳಂತೆ ಕ್ರೈಸ್ತರಾಗಿದ್ದಾರೆ. ಅಂಕಿ-ಅಂಶಗಳು ಸಣ್ಣದಾಗಿ ಕಂಡರೂ ಬಹಳ ದುರ್ಬಲ ಜನ ಸಂಖ್ಯೆಯಿರುವ ಮಣಿಪುರದಲ್ಲಿ ಈ ಚಿನ್ ನಿರಾಶ್ರಿತರು ದೊಡ್ಡ ಮಟ್ಟದಲ್ಲಿ ಭೀತಿಯನ್ನು ಹರಡುತ್ತಿದ್ದಾರೆ ಎನ್ನಲಾಗುತ್ತಿದೆ. ತಮ್ಮೊಂದಿಗೆ ಬುಡಕಟ್ಟು ಮತ್ತು ಧಾರ್ಮಿಕ ಸಾಮ್ಯತೆಗಳನ್ನು ಹೊಂದಿರುವ ಚಿನ್ ನಿರಾಶ್ರಿತರಿಗೆ ಕುಕಿಗಳು ಸ್ವಂತ ಗ್ರಾಮದಲ್ಲಿ ಆಶ್ರಯವನ್ನು ನೀಡುತ್ತಿರುವುದು ಎಲ್ಲಾ ಕುಕಿಗಳು ವಲಸಿಗರು ಎಂಬ ಆರೋಪಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನಲಾಗುತ್ತಿದೆ. 50% ಇರುವ ಮೇಥಿ ಹಿಂದೂಗಳು ಮತ್ತು 40 ಪ್ರತಿಶತ ಕ್ರಿಶ್ಚಿಯನ್ ಕುಕಿಗಳ ನಡುವಿನ ಜನಸಂಖ್ಯಾ ವ್ಯತ್ಯಾಸವು ಕಿರಿದಾಗುತ್ತಿದೆ ಎಂಬ ರಾಜಕೀಯ ಭೀತಿಯು ಮಣಿಪುರದ ಪ್ರಸ್ತುತ ಅಶಾಂತಿಯ ಹಿಂದಿನ ಪ್ರಮುಖ ಕಾರಣವಾಗಿದೆ.

ಚಿನ್ ಗೋತ್ರವು ಸೇರಿದಂತೆ ಹದಿನೈದರಷ್ಟು ಬುಡಕಟ್ಟು ಸಮುದಾಯಗಳು ಮಣಿಪುರದಲ್ಲಿದೆ. ಹಿಂದೂಗಳಾದ ಮೇಥಿಗಳಿಗೆ ಮೀಸಲಾತಿಯನ್ನು ಖಾತ್ರಿಪಡಿಸುವುದರ ಹಿಂದೆ ಈ ನುಸುಳುಕೋರರ ಭಯವೇ ಹಲ್ಲು ಕಿರಿದು ನಿಂತಿದೆ. ಇದರಲ್ಲಿರುವ ತಮಾಷೆಯೇನೆಂದರೆ, ಬಿಜೆಪಿ ಸರಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯೇ ಮೇಥಿಗಳ ಭಯಕ್ಕೆ ಕಾರಣ! ಭಾರತಕ್ಕೆ ಬಂದರೆ ಕಡಿಮೆ ಅವಧಿಯಲ್ಲಿ ನಾಗರಿಕರಾಗಬಹುದು ಎಂಬ ಪ್ರಚಾರ ನೆರೆಯ ದೇಶಗಳ ಮುಸ್ಲಿಮೇತರ ಜನರಲ್ಲಿ ವ್ಯಾಪಕ ವಾಗಿದೆ. ಅದನ್ನು ಮ್ಯಾನ್ಮಾರ್‌ನಿಂದ ಬರುವ ಚಿನ್ ಗೋತ್ರಗಳು ಉಪಯೋಗಿಸಿಕೊಂಡು ಭವಿಷ್ಯದಲ್ಲಿ ತಮ್ಮನ್ನು ಹಿಂದಿಕ್ಕುತ್ತಾರೆ ಎಂದು ಮೇಥಿಗಳು ಚಿಂತಿತರಾಗಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ತೊರೆದು ಮೇಥಿಗಳು ಬಿಜೆಪಿಗೆ ಪಕ್ಷಾಂತರ ಮಾಡುತ್ತಿರುವುದು ಕುಕಿ ಭೀತಿಯ ಹಿನ್ನಲೆಯಾಗಿದೆ. ಹೆಚ್ಚಾಗುತ್ತಿರುವ ಈ ಗೊಂದಲದ ಜೇನುಗೂಡಿಗೆ ನ್ಯಾಯಾಲಯದ ಮರೆಯಲ್ಲಿ ಹಿಂದೂ ಧರ್ಮದ ಕಲ್ಲೆಸೆಯುವ ಕೆಲಸವನ್ನು ಬಿಜೆಪಿ ಮಾಡಿದೆ. ಪರಕೀಯತೆಯಿಂದ ಹಿಡಿದು ಡ್ರಗ್ಸ್ ಆರೋಪದವರೆಗೆ ಸಂಘ ಪರಿವಾರವು ಕುಕಿಗಳ ವಿರುದ್ಧ ಬಳಸುತ್ತಿದ್ದ ಅಸ್ತ್ರಗಳಾಗಿದ್ದವು. ರಾಜ್ಯದಲ್ಲಿ ಗಸಗಸೆ ಕೃಷಿಯನ್ನು ಕುಕಿಗಳು ನಡೆಸುತ್ತಿದ್ದಾರೆ ಎಂಬ ಆರೋಪವಿದೆ.

ಈ ಆರೋಪಕ್ಕೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ಬೆಂಬಲವಿದೆ. ಅಸ್ಸಾಮ್‌ನಲ್ಲಿ ಕೇವಲ ಸರಕಾರಿ ಭೂಮಿ ಒತ್ತುವರಿ ಆರೋಪವು ಮುಸಲ್ಮಾನರ ಎದೆಗೆ ಬುಲ್ಡೋಜರ್ ಹಾಯಿಸಲು ಸಾಕು ಎಂದಿದ್ದರೆ ಮಣಿಪುರದಲ್ಲಿ ಸರಕಾರಿ ಭೂಮಿಯಲ್ಲಿ ಗಸಗಸೆ ಬೆಳೆಗಾರರನ್ನು ತೆರವುಗೊಳಿಸಲು ಸರಕಾರವು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿದೆ ಎಂಬ ಸ್ಪಷ್ಟೀಕರಣ ನೀಡಲಾಗುತ್ತಿದೆ. ಕುಕಿಗಳ ಬುಡಕಟ್ಟುಗುಣ ಲಕ್ಷಣಗಳ ಪ್ರಕಾರ ಪ್ರತಿಯೊಂದು ಗ್ರಾಮವೂ ಸ್ಥಳೀಯ ಮುಖ್ಯಸ್ಥರ ಮಾಲಿಕತ್ವದಲ್ಲಿರುವುದರಿಂದ ವ್ಯಕ್ತಿಗಳಿಗೆ ಭೂಮಿಯ ಮಾಲಿಕತ್ವವನ್ನು ಸಾಬೀತು ಪಡಿಸುವುದು ಸುಲಭವಲ್ಲ. ಯುಪಿ, ಅಸ್ಸಾಮ್ ಮತ್ತು ಮಧ್ಯಪ್ರದೇಶದಲ್ಲಿ ಮುಸ್ಲಿಮರ ಮನೆಗಳ ಮೇಲೆ ಚಲಾಯಿಸಲಾಗುತ್ತಿರುವ ಬುಲ್ಡೋಝರ್ ಗಳು ಮಣಿಪುರದಲ್ಲಿ ಕ್ರೈಸ್ತ ಚರ್ಚುಗಳ ಕಡೆಗೆ ನುಗ್ಗುತ್ತಿದೆ. ಆಲ್ ಮಣಿಪುರ್ ಕ್ರಿಶ್ಚಿಯನ್ ಅಸೋಸಿಯೇಶನ್ (AMCO) ಹೇಳುವಂತೆ ಬೆಟ್ಟಗಳಲ್ಲಿ ಮಾತ್ರವಲ್ಲ ಇಂಫಾಲ್ ನಗರಗಳಲ್ಲೂ ಚರ್ಚ್ ಗಳನ್ನು ಧ್ವಂಸಗೊಳಿಸಲಾಗಿದೆ. ಮಣಿಪುರದಲ್ಲಿ ಸರಕಾರದ ಆರಾಧನಾ ಸ್ಥಳಗಳ ಪಟ್ಟಿಯಲ್ಲಿ ಒಂದೇ ಒಂದು ಚರ್ಚ್ ಅನ್ನು ಸೇರಿಸಲಾಗಿಲ್ಲ ಎಂದು AMCO ಬೊಟ್ಟು ಮಾಡಿದೆ. ಈ ಪಟ್ಟಿಯಲ್ಲಿ ಸುಮಾರು 188 ಪೂಜಾ ಸ್ಥಳಗಳಿವೆ.

ಈ ಗಲಭೆಗಳು ಬಿಜೆಪಿ ಪ್ರಾಯೋಜಿತ ಎಂದು ಹೇಳಲು ಯಾವುದೇ ನೇರ ಪುರಾವೆಗಳಿಲ್ಲ. ಆದರೆ ಅದರ ಒಳ ಸುಳಿವುಗಳನ್ನು ನೋಡುವಾಗ ಅದು ಅವರಲ್ಲಿಗೇ ತಲುಪುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಬಿತ್ತಿರುವ ಅಲ್ಪ ಸಂಖ್ಯಾತ ಭೀತಿಯ ಇನ್ನೊಂದು ಮುಖವನ್ನು ಮಣಿಪುರದಲ್ಲಿ ದೇಶವು ಕಾಣುತ್ತಿದೆ. ಅಲ್ಲಿ ಅವರು ಬಾಂಗ್ಲಾದೇಶದ ನುಸುಳುವಿಕೆಯ ಕಾಲ್ಪನಿಕ ಕಥೆಯನ್ನು ಇನ್ನೊಂದು ರೂಪದಲ್ಲಿ ಹರಡುತ್ತಿದ್ದರು. ಮುಸ್ಲಿಮರು ಹೆಚ್ಚು ಹೆತ್ತು ಜನಸಂಖ್ಯೆಯನ್ನು ಹೆಚ್ಚಿಸುತ್ತಾರೆ ಎಂದು ಇತರ ರಾಜ್ಯಗಳಲ್ಲಿ ಆರೋಪಿಸುವಂತೆ ಕುಕಿಗಳು ಮೇಥಿ ಗಳ ಜನಸಂಖ್ಯೆಯನ್ನು ಮೀರಿಸುತ್ತಾರೆ ಎಂಬ ಪ್ರಚಾರ ಮಣಿಪುರದಲ್ಲಿ ಪ್ರಬಲವಾಗಿದೆ. ಇನ್ನೊಬ್ಬರ ಕುರಿತ ಈ ಭಯವು ಮಣಿಪುರದಲ್ಲಿ ಎನ್‌ಆರ್‌ಸಿ ಜಾರಿಗೆ ತರಬೇಕೆಂಬ ಹೊಸ ಬೇಡಿಕೆಗೆ ನಾಂದಿ ಹಾಡಿದೆ. ಮಾತ್ರವಲ್ಲದೆ, ಇನ್ನರ್ ಲೈನ್ ಪರ್ಮಿಟ್‌ಗಾಗಿ ಚರ್ಚೆಯೂ ಮಣಿಪುರದಲ್ಲಿ ಶಕ್ತವಾಗಿದೆ. ಅಸ್ಸಾಮ್ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಈ ಪರ್ಮಿಟ್ ಇದುವರೆಗೆ ಜಾರಿಗೊಳ್ಳದ ರಾಜ್ಯಗಳಲ್ಲೂ ಈ ಬೇಡಿಕೆ ಹೆಚ್ಚಾಗಿದೆ. ಪ್ರತಿಯೊಂದು ಗೋತ್ರದಲ್ಲೂ ಇತರರ ಭಯವು ವ್ಯಾಪಕಗೊಳ್ಳುವುದರಿಂದ ಅನ್ಯರ ಸಂಚಾರ, ವ್ಯವಹಾರ ನಿಯಂತ್ರಣವನ್ನು ಖಾತ್ರಿಗೊಳಿಸುವ ಕುರಿತು ಚರ್ಚೆಗಳು ಆರಂಭಗೊಂಡಿದೆ.

ಆದರೆ, ರಾಷ್ಟ್ರೀಯ ಮಾಧ್ಯಮಗಳು ಎನ್‌ಆರ್‌ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರತ್ಯಾಘಾತಗಳನ್ನು ಕಾಣದಂತೆ ನಟಿಸುತ್ತಿದೆ. ಅಸ್ಸಾಮ್‌ನ ಮತದಾರರನ್ನು ಸೆಳೆ ಯಲು ಬಾಂಗ್ಲಾದೇಶದ ಮುಸ್ಲಿಮರ ಒಳನುಸುಳುವಿಕೆಯ ಪುರಾಣವು ಬಿಜೆಪಿಗೆ ಮಾಡಿದ ಸಹಾಯವು ಸಣ್ಣದಲ್ಲ. ಆದರೆ ಮಣಿಪುರದಲ್ಲಿ ಎನ್‌ಆರ್‌ಸಿ ಜಾರಿಗೆ ತಂದರೆ ಕುಕಿಗಳು ಸಾಮೂಹಿಕವಾಗಿ ಬಿಜೆಪಿಯ ವಿರುದ್ಧವಾಗುತ್ತಾರೆ ಎಂಬ ಪರಿಸ್ಥಿತಿ ಈಗಿನದು. ಅಸ್ಸಾಮ್‌ನಲ್ಲಿ ಉಂಟಾದ ಪರಿಸ್ಥಿತಿಯು ಮರುಕಳಿಸದಂತೆ ಬಿಜೆಪಿ ಎಚ್ಚರಿಕೆ ವಹಿಸುತ್ತಿದೆ.

ಅಸ್ಸಾಮ್‌ನಲ್ಲಿ ಬಾಂಗ್ಲಾದೇಶದಿಂದ ಬಂದ 90 ಲಕ್ಷ ಮುಸ್ಲಿಮರಿದ್ದಾರೆ ಎಂದು ಹೇಳಿ ಪೌರತ್ವ ಪಟ್ಟಿಯನ್ನು ತಯಾರಿಸಲು ಹೊರಟ ಬಿಜೆಪಿ ಸರಕಾರವು ಇಂದಿಗೂ ಅದರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ರಾಜ್ಯದ 120 ಲಕ್ಷ ಮುಸ್ಲಿಮರಲ್ಲಿ 40 ಲಕ್ಷ ಮಂದಿಯನ್ನು, 2019 ರಲ್ಲಿ ಹೊರತಂದ ಪಟ್ಟಿಯಿಂದ ತಪ್ಪಾಗಿ ಹೊರ ಹಾಕಲಾಗಿತ್ತು. ನ್ಯಾಯಾಲಯವು ಚಾಟಿ ಬೀಸಿದಾಗ ಈ 40 ಲಕ್ಷ 19 ಲಕ್ಷಕ್ಕೆ ಇಳಿಕೆಯಾಯಿತು. ಅದರಲ್ಲೂ ದೋಷಗಳಿರುವುದು ಕಂಡು ಬಂದಾಗ ಮೂರು ತಿಂಗಳಲ್ಲಿ ಸರಿಪಡಿಸಿ ಮರು ಪ್ರಕಟಿಸುವುದಾಗಿ ಹೇಳಿದ ಪಟ್ಟಿ ಇನ್ನೂ ಬಿಡುಗಡೆಗೊಂಡಿಲ್ಲ.

ಪಟ್ಟಿಯಲ್ಲಿರುವುದು ಹೆಚ್ಚಿನ ಸಂಖ್ಯೆಯಲ್ಲಿ ದಾಖಲೆಗಳಿಲ್ಲದಿರುವ ಹಿಂದೂ ನಿರಾಶ್ರಿತರೆಂದು ತಿಳಿದು ಬಂದಾಗ ಭಾರತದ ಇತಿಹಾಸದಲ್ಲಿ ಅತ್ಯಂತ ತಾರತಮ್ಯ ಕಾನೂನುಗಳಲ್ಲಿ ಒಂದಾದ ಪೌರತ್ವ ಕಾಯ್ದೆಗೆ ಮೋದಿ ಸರಕಾರವು ರೂಪುಕೊಟ್ಟಿತು. ದಾಖಲೆಗಳಿಲ್ಲದ ಬಾಂಗ್ಲಾದೇಶೀ ಹಿಂದೂ ನಿರಾಶ್ರಿತರನ್ನು ಗಡೀಪಾರು ಮಾಡುವ ಬದಲು ಅವರನ್ನು ಭಾರತೀಯ ಪ್ರಜೆಗಳನ್ನಾಗಿ ಮಾಡಿ ತಮ್ಮ ವೋಟ್ ಬ್ಯಾಂಕ್‌ಗೆ ಯಾವುದೇ ಧಕ್ಕೆ ಬರದಂತೆ ಬಿಜೆಪಿ ನೋಡಿಕೊಂಡಿತು.

ಹಿಂದೂ ರಾಷ್ಟ್ರೀಯತೆ ಬಲಗೊಳ್ಳುತ್ತಿದ್ದರೂ ಇಂದು ಭಾರತದಲ್ಲಿರಾಷ್ಟ್ರೀಯ ಏಕೀಕರಣ ಆಗುತ್ತಿಲ್ಲ. ಮುಸ್ಲಿಮ್ ಎಂಬ ಸಾಮಾನ್ಯ ಶತ್ರು ಬಹುತೇಕ ಎಲ್ಲ ರಾಜ್ಯಗಳಲ್ಲೂ ಒಂದೇ ರೀತಿಯಲ್ಲಿ ಇದ್ದರೆ, ಇತರ ರಾಜ್ಯಗಳಲ್ಲಿ ಜನರ ಪ್ರಕಾರಗಳನ್ನು ಅವಲಂಬಿಸಿ ಹೊಸ ಶತ್ರುಗಳು ಸೃಷ್ಟಿಸಲ್ಪಡುತ್ತಾರೆ. ಪ್ರತಿಯೊಂದು ಸಮುದಾಯವೂ ಮತ್ತೊಬ್ಬರನ್ನು ಹೆಚ್ಚು ಅನುಮಾನದಿಂದ ನೋಡುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಭಾರತವು ಕೋಮುವಾದ ಹರಡಿರುವ ಭ್ರಷ್ಟ ಗಣರಾಜ್ಯವಾಗಿ ಮಾರ್ಪಟ್ಟಿದೆ. ಇಲ್ಲಿ ಭದ್ರತೆಗೆ ಸಂಬಂಧಿಸಿದ ವಿಷಯಗಳು ಸಹ ಪ್ರಯೋಜನ ಗಳು, ಮೀಸಲಾತಿಗಳು ಮತ್ತು ಪ್ರಶಸ್ತಿಗಳ ಭಾಷೆಯಲ್ಲಿ ಮಾತ್ರ ಅರ್ಥವಾಗುತ್ತದೆ. ಭಯವೆಂಬ ಏಕೈಕ ವಿಕಾರವು ಒಂದು ದೇಶವೆಂಬ ನೆಲೆಯಲ್ಲಿ ಇಂದು ಭಾರತೀಯ ಜನತೆಯನ್ನು ಒಟ್ಟುಗೂಡಿಸುತ್ತಿದೆ.

ಮೇಥಿಗಳು ಮತ್ತು ಕುಕಿಗಳ ನಡುವೆ ಅವಿಶ್ವಾಸದ ಚಂಡಮಾರುತವನ್ನು ಬಿತ್ತಿದ ಇಂಟರ್ ನ್ಯಾಶನಲ್ ಮೇಥಿ ಫಾರಮ್‌ನಂತಹ ಹಲವು ಸಂಘಟನೆಗಳು ಮಣಿಪುರದಲ್ಲಿತ್ತು. ಇಂತಹ ಎರಡು ಸಂಘಟನೆಗಳ ವಿರುದ್ಧ ಕ್ರೈಸ್ತ ಸಂಘಟನೆಗಳು ಒಂದು ವರ್ಷದ ಹಿಂದೆಯೇ ದೂರು ದಾಖಲಿಸಿತ್ತು. ಆದರೆ ಬಿರೇನ್ ಸಿಂಗ್ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಅದರ ಪರಿಣಾಮವನ್ನು ಮಣಿಪುರ ಇವತ್ತು ಅನುಭವಿಸುತ್ತಿದೆ.