ಸಮಾನ ನಾಗರಿಕ ಸಂಹಿತೆ: ಕೇಂದ್ರ ಕಾನೂನು ಆಯೋಗದ ನಡೆಗೆ ಜಮಾಅತೆ ಇಸ್ಲಾಮೀ ಹಿಂದ್ ತೀವ್ರ ವಿರೋಧ

0
446

ಸನ್ಮಾರ್ಗ ವಾರ್ತೆ

ಸಮಾನ ನಾಗರಿಕ ಸಂಹಿತೆ ಕುರಿತಂತೆ ಕಾನೂನು ಕೇಂದ್ರ ಆಯೋಗವು ಸಲಹೆಗಳನ್ನು ಆಹ್ವಾನಿಸಿರುವುದರ ಬೆನ್ನಿಗೇ ಜಮಾಅತೆ ಇಸ್ಲಾಮಿ ಹಿಂದ್ ಈ ನಡೆಯನ್ನು ತೀವ್ರವಾಗಿ ವಿರೋಧಿಸಿದೆ.

ಇದೇ ವೇಳೆ, ಸಮಾನ ನಾಗರಿಕ ಸಂಹಿತೆಯು ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಭಾಗವಾಗಿರುವಾಗ ಯಾಕೆ ಅದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತೀರಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ಸಂವಿಧಾನವನ್ನು ಉಲ್ಲಂಘಿಸಿ ಈ ಕಾನೂನು ತರಬಯಸಿದರೆ ಅದನ್ನು ಪ್ರಶ್ನಿಸಬಹುದು. ಆದರೆ ಸಂವಿಧಾನವನ್ನು ಬಿಜೆಪಿ ರಚಿಸಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ್ದಾರೆ. ನೆಹರು ಅವರು ಅದರ ಭಾಗವಾಗಿದ್ದರು ಎಂದು ರಾಜನಾಥ್ ಸಿಂಗ್ ವಿವರಿಸಿದ್ದಾರೆ.

ಇದೇ ವೇಳೆ ಮುಸ್ಲಿಂ ಪರ್ಸನಲ್ ಬೋರ್ಡ್ ಸಹಿತ ವಿವಿಧ ಮುಸ್ಲಿಂ ಸಂಘಟನೆಗಳು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಕೇಂದ್ರ ಸರಕಾರದ ನಿಲುವನ್ನು ತೀವ್ರವಾಗಿ ವಿರೋಧಿಸಿವೆ. ಇದು ಸಂವಿಧಾನದ ಸ್ಪೂರ್ತಿಗೆ ವಿರುದ್ಧ ಮತ್ತು ಎಲ್ಲಾ ಧರ್ಮಗಳಿಗೆ ಸಂವಿಧಾನದಲ್ಲಿ ನೀಡಲಾಗಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧ ಎಂದು ಮುಸ್ಲಿಂ ಪರ್ಸನಲ್ ಬೋರ್ಡ್ ಅಭಿಪ್ರಾಯ ಪಟ್ಟಿದೆ.

ಇದು ಸಮಾಜವನ್ನು ಧ್ರುವೀಕರಣಗೊಳಿಸುವುದಕ್ಕೆ ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕೆ ಸರಕಾರ ಮಾಡುತ್ತಿರುವ ತಂತ್ರ ಎಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಹೇಳಿದೆ.

ದೆಹಲಿಯಲ್ಲಿ ನಡೆದ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸಭೆಯಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದ್ದು, ಸಂವಿಧಾನವು ಖಾತ್ರಿಪಡಿಸಿರುವ ಮೂಲಭೂತ ಹಕ್ಕುಗಳಿಗೆ ಇದು ಚ್ಯುತಿ ತರುತ್ತದೆ, ಇದನ್ನು ಒಪ್ಪಿಕೊಳ್ಳಲಾಗದು ಮತ್ತು ದೇಶದ ಆಂತರಿಕ ಭದ್ರತೆಗೆ ಇದು ಹಾನಿ ತರಬಹುದು ಎಂದು ಸಭೆಯಲ್ಲಿ ಅಭಿಪ್ರಾಯ ಪಡಲಾಗಿದೆ.