ಖ್ಯಾತ ಇಸ್ಲಾಮಿ ವಿದ್ವಾಂಸ, ಮೌಲಾನಾ ಮುಹಮ್ಮದ್ ಫಾರೂಕ್ ಖಾನ್ ಇನ್ನಿಲ್ಲ

0
278

ಸನ್ಮಾರ್ಗ ವಾರ್ತೆ

ಲಕ್ನೋ: ಪ್ರಸಿದ್ಧ ಧಾರ್ಮಿಕ ವಿದ್ವಾಂಸ, ಕುರ್ ಆನ್ ವ್ಯಾಖ್ಯಾನಕಾರರು, ಲೇಖಕರು ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ನ ಹಿರಿಯ ಸದಸ್ಯರೂ ಆದ ಮೌಲಾನಾ ಮುಹಮ್ಮದ್ ಫಾರೂಕ್ ಖಾನ್ ಬುಧವಾರ ನಿಧನರಾಗಿದ್ದಾರೆ.

ಮೌಲಾನಾ ಅವರು ಬುಧವಾರ ಬೆಳಿಗ್ಗೆ ಬಕ್ರೀದ್ ಆಚರಿಸಲೆಂದು ಲಕ್ನೋ ದಲ್ಲಿರುವ ತಮ್ಮ ಮಗನ ಬಳಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅವರ ಅರೋಗ್ಯದಲ್ಲಿ ಸಲ್ಪ ಮಟ್ಟಿಗೆ ಏರುಪೇರು ಕಾಣಿಸಿಕೊಂಡು ತಮ್ಮ ಇಹಜೀವನಕ್ಕೆ ವಿದಾಯ ಹೇಳಿದರು.

1932 ರಲ್ಲಿ ಉತ್ತರ ಪ್ರದೇಶದ ಸುಲ್ತಾನ್‌ಪುರದ ಕರ್ಪಿ ಗ್ರಾಮದಲ್ಲಿ ಜನಿಸಿದರು. ಅವರು ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಅಜಂಗಢದಲ್ಲಿ ತಮ್ಮ ಬೋಧನಾ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಬರೆಯಲು ಶುರು ಮಾಡಿದರು. ಅತ್ಯುತ್ತಮ ತರಬೇತುದಾರರಾಗಿದ್ದರು. ಶ್ರೇಷ್ಠ ಇಸ್ಲಾಮಿಕ್ ದಾರ್ಶನಿಕರಾಗಿದ್ದ ಅವರು ಉರ್ದು ಮತ್ತು ಹಿಂದಿಯಲ್ಲಿ ಪವಿತ್ರ ಕುರ್ ಆನ್‌ನ ಅನುವಾದಕರೂ ಹಾಗೂ ವ್ಯಾಖ್ಯಾನಕಾರರೂ ಆಗಿದ್ದರು. ಅಲ್ಲದೆ ಉರ್ದು, ಹಿಂದಿ ಭಾಷೆಗಳಲ್ಲಿ ಅವರು ರಚಿಸಿದ ಏಳು ಸಂಪುಟಗಳ ‘ಕಲಾಮೆ ನಬುವತ್’ ಎಂಬ ಹದೀಸ್ ವ್ಯಾಖ್ಯಾನ ಗೃಂಥಮಾಲೆ ಅವರ ಬಲುದೊಡ್ಡ ಸಾಧನೆ.

ದಾವಾ, ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ ಮತ್ತು ಧರ್ಮಗಳ ತುಲನಾತ್ಮಕ ಅಧ್ಯಯನದಂತಹ ಹಲವಾರು ವಿಷಯಗಳ ಕುರಿತಾದ ಹಲವಾರು ಮಹತ್ವದ ಪುಸ್ತಕಗಳನ್ನು ಅವರು ಬರೆದಿದ್ದಾರೆ. ಅವರು ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಇಸ್ಲಾಮೀ ಸಾಹಿತ್ಯದ ಹಲವು ಪ್ರಮುಖ ಗ್ರಂಥಗಳನ್ನು ರಚಿಸಿದ ಹೆಗ್ಗಳಿಕೆ ಅವರದ್ದು. ಅರೇಬಿಕ್ ಮತ್ತು ಉರ್ದುವಿನಿಂದ ಅನೇಕ ಪುಸ್ತಕಗಳನ್ನು ಹಿಂದಿಗೆ ಅನುವಾದಿಸಿದ್ದಾರೆ. ಅವರ ಕವನ ಸಂಕಲನಗಳೂ ಉರ್ದು ಮತ್ತು ಹಿಂದಿಯಲ್ಲಿ ಪ್ರಕಟವಾಗಿವೆ. ಅವರು ಈ ಹಿಂದೆ ಜಮಾಅತೆ ಇಸ್ಲಾಮಿ ಹಿಂದ್ ನ ಕೇಂದ್ರ ಪ್ರತಿನಿಧಿಗಳ ಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.