ಅನ್ನಭಾಗ್ಯ: ಅಕ್ಕಿ ಬದಲು ಹಣ; ರಾಜ್ಯ ಸರ್ಕಾರ ನಿರ್ಧಾರ

0
271

ಸನ್ಮಾರ್ಗ ವಾರ್ತೆ

ಕಾಂಗ್ರೆಸ್‌ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸುವಲ್ಲಿ ಸರ್ಕಾರವು ನಾನಾ ರೀತಿ ಅಡೆತಡೆಗಳನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರದ ಅಸಹಕಾರದಿಂದ ಅಕ್ಕಿ ದೊರೆಯುತ್ತಿಲ್ಲವೆಂದು ರಾಜ್ಯ ಸರ್ಕಾರ ಆರೋಪಿಸಿದೆ.

ಅಕ್ಕಿ ಕೊರತೆಯಿಂದಾಗಿ ಯೋಜನೆಯಡಿ ಪಡಿತರ ದಾರರಿಗೆ ತಲಾ 10 ಕೆ.ಜಿ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅಕ್ಕಿಯ ಬದಲು ಹಣ ನೀಡಲು ನಿರ್ಧರಿಸಿರುವುದಾಗಿ ಸರ್ಕಾರ ಹೇಳಿದೆ.

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಸಚಿವ ಮುನಿಯಪ್ಪ, “ಅಕ್ಕಿ ಬದಲಾಗಿ ಹಣ ನೀಡುತ್ತೇವೆ. ಒಂದು ಕೆ.ಜಿ ಅಕ್ಕಿಗೆ 36 ರೂ. ನಿಗದಿ ಮಾಡಲಾಗಿದೆ. ಪಡಿತರದಾರರಿಗೆ ತಲಾ ಐದು ಕೆ.ಜಿ ಅಕ್ಕಿ ನೀಡಲಾಗುತ್ತದೆ. ಉಳಿದ ಐದು ಕೆ.ಜಿ ಅಕ್ಕಿಯ ಬದಲಿಗೆ, ಪ್ರತಿ ಕೆ.ಜಿಗೆ 36 ರೂ.ನಂತೆ ಹಣ ನೀಡುತ್ತೇವೆ” ಎಂದು ಹೇಳಿದ್ದಾರೆ.

“ಹಣ ನೀಡುವ ಪ್ರಕ್ರಿಯೆಯು ಅಕ್ಕಿ ಸಂಗ್ರಹವಾಗುವವರೆಗೂ ಚಾಲ್ತಿಯಲ್ಲಿರುತ್ತದೆ. ಅಗತ್ಯಕ್ಕಾಗುವಷ್ಟು ಅಕ್ಕಿ ಸಿಕ್ಕ ಬಳಿಕ ಹಣ ನೀಡುವುದನ್ನು ನಿಲ್ಲಿಸಿ, ಅಕ್ಕಿಯನ್ನೇ ನೀಡುತ್ತೇವೆ” ಎಂದು ಅವರು ಹೇಳಿದ್ದಾರೆ.