ಆರ್ಡರ್ ಮಾಡಿದ್ದು ₹90 ಸಾವಿರದ ಕ್ಯಾಮೆರಾ ಲೆನ್ಸ್ ; ಪಾರ್ಸೆಲ್ ನೋಡಿ ಧಂಗಾದ ಗ್ರಾಹಕ! ಹಾಗಾದರೆ ಪಾರ್ಸೆಲ್ ನಲ್ಲಿ ಏನಿತ್ತು?

0
326

ಸನ್ಮಾರ್ಗ ವಾರ್ತೆ

ಇ-ಕಾಮರ್ಸ್ ವೆಬ್‌ಸೈಟ್ ಅಥವಾ ಆಪ್‌ಗಳಿಂದಲೇ ತಮಗೆ ಬೇಕಾದ ವಸ್ತುಗಳನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡುವವರ ಸಂಖ್ಯೆ ಈಗ ಹೆಚ್ಚಾಗಿದೆ. ಹೀಗೆ, ಆನ್‌ಲೈನ್‌ ಮೂಲಕ ಹೆಚ್ಚು ವ್ಯವಹಾರ ಮಾಡುವವರು ನೀವಾಗಿದ್ದರೆ ಈ ಸುದ್ದಿಯನ್ನು ಓದಿದರೆ ನಿಮಗೆ ಆಶ್ಚರ್ಯವೂ, ಆಘಾತವೂ ಆಗಬಹುದು.

ಗ್ರಾಹಕರೊಬ್ಬರು ಅಮೆಝಾನ್‌ 90,000 ರೂ.ಗಳ ಕ್ಯಾಮೆರಾ ಲೆನ್ಸ್‌ಗೆ ಆರ್ಡರ್ ಮಾಡಿದ್ದರು. ಆದರೆ ತಮಗೆ ಬಂದ ಪಾರ್ಸೆಲ್ ಓಪನ್ ಮಾಡಿ ನೋಡಿದಾಗ ಅವರಿಗೆ ಆಘಾತವಾಗಿದೆ. ಲೆನ್ಸ್‌ ಬದಲು ಬಂದಿದ್ದು ನವಣೆ ಅಕ್ಕಿಯ ಪ್ಯಾಕೆಟ್ ಮಾತ್ರ.

ಹೌದು, ಇದು ನಿಜ, ಸುಳ್ಳು ಸುದ್ದಿಯಲ್ಲ. ಸ್ವತಃ ಗ್ರಾಹಕನೇ ತಮಗಾದ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಅಮೆಝಾನ್ ವಿರುದ್ಧ ಆಕ್ರೋಶ ಹೊರಹಾಕಿರುವ ಬೆಂಗಳೂರಿನ ಅರುಣ್ ಕುಮಾರ್ ಮೆಹರ್ ಎಂಬವರು, “ಜು 5ರಂದು ಸಿಗ್ಮಾ ಕಂಪೆನಿಯ 24-70 ಎಫ್ 28 ಲೆನ್ಸ್ ಗಾಗಿ ಅಮೆಝಾನ್‌ನಲ್ಲಿ ಆರ್ಡರ್ ನೀಡಿದ್ದೆ. ಪಾರ್ಸಲ್ ಬಂದಾಗ ತೆರೆದು ನೋಡಿದರೆ ಅದರಲ್ಲಿ ನವಣೆ ಅಕ್ಕಿಯ ಕಾಳುಗಳಿದ್ದ ಪ್ಯಾಕೆಟ್ ಇದೆ. ಅಲ್ಲದೇ, ಪಾರ್ಸೆಲ್ ಬಾಕ್ಸ್‌ ಕೂಡ ತೆರೆದ ಸ್ಥಿತಿಯಲ್ಲಿದ್ದವು. ಅಮೆಜಾನ್‌ನಿಂದ ದೊಡ್ಡ ಹಗರಣ ಇದು. ದಯವಿಟ್ಟು ಈ ಕೂಡಲೇ ಕ್ರಮ ಕೈಗೊಳ್ಳಿ” ಎಂದು ಬರೆದು ಲೆನ್ಸ್ ಪೆಟ್ಟಿಗೆಯಲ್ಲಿ ನವಣೆ ಅಕ್ಕಿಯ ಕಾಳುಗಳನ್ನು ತುಂಬಿರುವ ಫೋಟೋಗಳನ್ನು ಜು.7ರಂದು ಟ್ವೀಟ್ ಮಾಡಿದ್ದರು.