ಹೊಸದಿಲ್ಲಿ, ಮಾ. 22: ಮಾಜಿ ಪ್ರಧಾನಿ ರಾಜೀವ್ಗಾಂಧಿಯ ನಿಕಟರಾಗಿದ್ದ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೊಡ ಪುಲ್ವಾಮ ದಾಳಿಯ ಕುರಿತು ವಿವಾದದ ಹೇಳಿಕೆ ನೀಡಿದ್ದಾರೆ. ನನಗೆ ದಾಳಿಯ ಕುರಿತು ಹೆಚ್ಚಿನ ಅರಿವಿಲ್ಲ. ಆದರೆ ಇದು ಆಗುತ್ತಿರುತ್ತದೆ. ಮುಂಬೈಯಲ್ಲಿ ದಾಳಿ ಆಗಿತ್ತು. ಆ ಸಮಯದಲ್ಲಿಯೂ ನಾವು ಅದಕ್ಕೆ ಪ್ರತಿಕ್ರಿಯೆ ನೀಡಬಹುದಾಗಿತ್ತು. ನಮ್ಮ ವಿಮಾನವನ್ನು ಕಳುಹಿಸಬಹುದಾಗಿತ್ತು. ಆದರೆ ಅದು ಸರಿಯಾಗಿರಲಿಲ್ಲ. ಜಗತ್ತನ್ನು ಎದುರಿಸಲು ಇದು ಸರಿಯಾದ ವಿಧಾನವೂ ಅಲ್ಲ ಎಂದು ಪಿತ್ರೊಡ ಹೇಳಿದರು.
ಮುಂಬೈಯ ಭಯೋತ್ಪಾದನಾ ದಾಳಿಯನ್ನು ಎಂಟು ಮಂದಿ ಬಂದು ಮಾಡಿದರು. ಇದಕ್ಕಾಗಿ ಇಡೀ ಪಾಕಿಸ್ತಾನಕ್ಕೆ ದಾಳಿ ಮಾಡುವುದು ಹೇಗೆ? ಕೆಲವರು ಇಲ್ಲಿಗೆ ಬಂದು ಮಾಡಿದ ಕೆಲಸಕ್ಕೆ ಇಡೀ ದೇಶದ ನಾಗರಿಕರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ನನ್ನ ದೃಷ್ಟಿಯಲ್ಲಿ ಇದು ಸರಿಯಲ್ಲ. ನಾನು ಗಾಂಧಿವಾದಿ. ಗೌರವ ಕರುಣೆಯಲ್ಲಿ ನಂಬಿಕೆ ಹೊಂದಿದ್ದೇನೆ. ನಾನು ಮಾತುಕತೆಯಲ್ಲಿ ವಿಶ್ವಾಸ ಹೊಂದಿದವನು. ನಾವು ಯಾರಲ್ಲಾದರೂ ಮಾತುಕತೆಯಿಂದ ಸಮಸ್ಯೆ ಬಗೆಹರಿಸಬೇಕಾಗುತ್ತದೆ ಎಂದು ಪಿತ್ರೊಡ ಹೇಳಿದರು.
ಇದೇವೇಳೆ ಅರು ವಾಯು ದಾಳಿಯ ಕುರಿತು ಅವರು ಪ್ರಶ್ನೆ ಮಾಡಿದರು. ನಾವು ಪಾಕಿಸ್ತಾನದಲ್ಲಿ ಯಾರ ವಿರುದ್ಧ ದಾಳಿ ಮಾಡಿದೆವು. ನಿಜಕ್ಕೂ 300 ಮಂದಿ ಹತ್ಯೆಯಾದರೆ?
ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಯಲ್ಲಿ ಕೈಬರ್ ಫಖ್ತೂನ್ ಕ್ವಾದಲ್ಲಿ ನಡೆದ ಯಾವುದೋ ಬೇರೆ ದಾಳಿಯ ಫೋಟೊ ಕಾಣಿಸುತ್ತಿದೆ. ಆದ್ದರಿಂದ ಭಾರತದ ಜನರಿಗೆ ಸತ್ಯ ತಿಳಿಯುವ ಹಕ್ಕಿದೆ. ನಾನು ನ್ಯೂಯಾರ್ಕ್ ಟೈಮ್ಸ್ ಮತ್ತು ಇತರ ಪತ್ರಿಕೆಗಳ ವರದಿ ಓದಿದ್ದೇನೆ. ಭಾರತದ ದಾಳಿಯಲ್ಲಿ ಯಾರ ಹತ್ಯೆಯೂ ಆಗಿಲ್ಲ ಎಂದು ಅವುಗಳಲ್ಲಿ ವರದಿಯಾಗಿವೆ ಎಂದು ಪಿತ್ರೊಡ ಹೇಳಿದರು.












