ಮುತ್ತಲಾಕ್ ಸುಗ್ರಿವಾಜ್ಞೆ: ಸಮಸ್ತದ ಅರ್ಜಿ ಸುಪ್ರೀಂಕೋರ್ಟಿನಲ್ಲಿ ತಿರಸ್ಕೃತ

0
1208

ಹೊಸದಿಲ್ಲಿ,ಮಾ.25: ಮುತ್ತಲಾಕ್ ಕ್ರಿಮಿನಲ್ ಅಪರಾಧ ಎಂಬ ಕೇಂದ್ರ ಸರಕಾರದ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಸಮಸ್ತ ಕೇರಳ ಜಮ್‍ಇಯ್ಯತ್ತುಲ್ ಉಲೇಮ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟು ತಳ್ಳಿಹಾಕಿದೆ. ಈ ವಿಷಯದಲ್ಲಿ ಕೋರ್ಟು ಈಗ ಮಧ್ಯಪ್ರವೇಶಿಸುವುದಿಲ್ಲ. ಮಸೂದೆ ಪಾಸು ಆಗಿ ಕಾನೂನು ರಚನೆಯಾದರೆ ಆಗ ನೋಡೋಣ ಎಂದು ಸುಪ್ರೀಂಕೋರ್ಟು ಅರ್ಜಿದಾರರಿಗೆ ತಿಳಿಸಿದೆ.

ಮುತ್ತಲಾಕನ್ನು ಕ್ರಿಮಿನಲ್ ಅಪರಾಧ ಗೊಳಿಸಿ ಸುಗ್ರೀವಾಜ್ಞೆಯನ್ನು ಕೇಂದ್ರ ಸರಕಾರ ಹೊರಡಿಸಿತ್ತು. ಇದನ್ನು ರದ್ದು ಪಡಿಸಬೇಕೆಂದು ಸಮಸ್ತ ಅರ್ಜಿ ಸಲ್ಲಿಸಿತುತ. ಸಮಸ್ತದ ಅರ್ಜಿಯ ವಿಚಾರಣೆ ಮುಗಿಯುವವರೆಗೆ ಸುಗ್ರಿವಾಜ್ಞೆಗೆ ತಡೆಯಾಜ್ಞೆ ನೀಡಬೇಕೆಂದು ಕೂಡ ಅರ್ಜಿಯಲ್ಲಿ ಸಮಸ್ತ ಮನವಿ ಮಾಡಿತ್ತು.
ಮುತ್ತಲಾಕ್ ನಿಷೇಧಿಸಿ ಸುಪ್ರೀಂಕೋರ್ಟು ತೀರ್ಪು ಹೊರಬಂದು ತಿಂಗಳೊಳಗೆ ಅವಸರವಸರವಾಗಿ ಇಂತಹದೊಂದು ಸುಗ್ರೀವಾಜ್ಞೆ ಹೊರಡಿಸುವ ಆವಶ್ಯಕತೆ ಇಲ್ಲ ಎಂದು ಸಮಸ್ತ ಬೆಟ್ಟು ಮಾಡಿ ತೋರಿಸಿತ್ತು.

ಮುತ್ತಲಾಕ್ ಕ್ರಿಮಿನಲ್ ಅಪರಾಧವಾಗಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ ಪುನಃ ಸಹಿ ಹಾಕಿದ್ದರು. ಒಂದು ವರ್ಷದಲ್ಲಿ ಮೂರು ಸಲ ಈವಿಷಯದಲ್ಲಿ ಸರಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಪತಿಯ ಇಚ್ಛೆಯಂತೆ ತ್ವರಿತವಾಗಿ ವಿವಾಹ ವಿಚ್ಛೇದನ ಸಾಧ್ಯವಾಗುವ ಮುತ್ತಲಾಕ್‍ನ್ನು ನಿಷೇಧಿಸಿ ಸರಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಪಾರ್ಲಿಮೆಂಟಿನಲ್ಲಿ ಎರಡು ಬಾರಿ ಮಸೂದೆ ಮಂಡಿಸಲಾಗಿತ್ತು. ರಾಜ್ಯಸಭೆಯಲ್ಲಿ ಮಸೂದೆ ಪಾಸಾಗದ್ದರಿಂದ ಅದು ಕಾನೂನಾಗಿ ಪರಿವರ್ತನೆಯಾಗಿರಲಿಲ್ಲ. ನಂತರ ಸರಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಯಾವುದೇ ಸುಗ್ರೀವಾಜ್ಞೆಗೆ ಆರು ತಿಂಗಳಷ್ಟು ಮಾತ್ರ ಸಮಯ ಮಿತಿ ಇದೆ. ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಸೂದೆ ಅದರ ಕಾಲವಧಿ ಮುಗಿಯುವ ಜೂನ್ ಮೂರಕ್ಕೆ ಅಸಿಂಧುವಾಗಲಿದೆ.