✍️ಎಂ. ಅಶ್ರಫ್
ಸನ್ಮಾರ್ಗ ವಾರ್ತೆ
ಮುಹಮ್ಮದ್(ಸ)ರು ಹುಟ್ಟಿ ಬೆಳೆದ ಮಕ್ಕಾ ನಗರದಲ್ಲಿ ಅಲ್ಲಾಹನ ಮಿತ್ರ ಪ್ರವಾದಿ ಇಬ್ರಾಹೀಮ್(ಅ)ರು ತಮ್ಮ ಪುತ್ರ ಪ್ರವಾದಿ ಇಸ್ಮಾಈಲ್ (ಅ)ರೊಡಗೂಡಿ ಏಕದೇವೋಪಾಸನಾ ಭವನ ‘ಕಅಬಾಲಯ’ ಪುನರ್ನಿರ್ಮಿಸಿದ್ದರು. ಈ ಕಅಬಾಲಯವು ಏಕದವಾರಾಧನೆಯ ಕೇಂದ್ರ ಬಿಂದುವಾಗಿತ್ತು. ಆದರೆ ಕಾಲ ಕ್ರಮೇಣ ಅದರಲ್ಲಿ ಜನರು ವಿಗ್ರಹಗಳನ್ನು ಪ್ರತಿಷ್ಠಾಪಿಸ ತೊಡಗಿದರು. ಏಕದೇವಾರಾಧನೆಯನ್ನೇ ಪ್ರತಿಪಾದಿಸಿದ್ದ ಮತ್ತು ಅದಕ್ಕಾಗಿಯೇ ಕಅಬಾಲಯವನ್ನು ನಿರ್ಮಿಸಿದ್ದ ಪ್ರವಾದಿಗಳಾದ ಇಬ್ರಾಹೀಮ್(ಅ) ಮತ್ತು ಇಸ್ಮಾಈಲ್(ಅ)ರದ್ದೆನ್ನಲಾಗುವ ಚಿತ್ರಗಳನ್ನೂ ಕಅಬಾದ ಗೋಡೆಯಲ್ಲಿ ಬಿಡಿಸುವಷ್ಟು ಜನ ಪಥಭ್ರಷ್ಟರಾಗಿದ್ದರು.
ಮಕ್ಕಾ ಎಂಬ ಪವಿತ್ರ ನಗರವನ್ನು ಜನರು ಬಹುದೇವಾರಾಧನೆ, ಮದ್ಯಪಾನ, ದರೋಡೆ, ಮೋಸ, ವಂಚನೆ, ಅಶ್ಲೀಲತೆ, ನಗ್ನತೆಯ ಆಡುಂಬೊಲವನ್ನಾಗಿ ಮಾಡಿದ್ದರು.
ಇಂತಹ ಸಮಾಜವನ್ನು ಮತ್ತೆ ಪ್ರವಾದಿ ಇಬ್ರಾಹೀಮ್(ಅ)ರ ಕಾಲದ ಪವಿತ್ರ ಸಮಾಜವನ್ನಾಗಿ ಮಾರ್ಪಡಿಸಲು, ಅಲ್ಲಾಹನ ಪೂರ್ವ ನಿರ್ಧಾರದಂತೆ ಮುಹಮ್ಮದ್(ಸ)ರು ಪ್ರವಾದಿ ಇಸ್ಮಾಈಲ್(ಅ)ರ ಸಂತಾನ ಪರಂಪರೆಯಲ್ಲಿ ಹುಟ್ಟಿದರು. ನೈಸರ್ಗಿಕ ಬುದ್ಧಿಯಲ್ಲಿ ಯಾವುದೇ ಕಲಬೆರಕೆಯಿಲ್ಲದೆ ಅಪರಂಜಿಯಾಗಿ ಬೆಳೆದು ಜನರಿಂದ ಹೊಗಳಿಸಿ ಕೊಂಡ ವ್ಯಾಪಾರಿಯಾಗಿ, ತಮ್ಮ ನಲ್ವತ್ತನೇ ವಯಸ್ಸಿನಲ್ಲಿ ದೇವ ಸಂದೇಶವಾಹಕತ್ವದ ದೌತ್ಯವನ್ನು ವಹಿಸಿದರು. ಇಲ್ಲಿಂದ ಆರಂಭವಾಯಿತು ಪ್ರವಾದಿ ಮುಹಮ್ಮದ್(ಸ) ಮತ್ತು ಸಮಾಜದ ನಡುವಿನ ಘರ್ಷಣೆ. ಇದುವೇ ಈ ಲೇಖನದ ಮೂಲ ವಿಷಯ.
ಪ್ರವಾದಿತ್ವ ಲಭಿಸಿ, ದೇವಸಂದೇಶವನ್ನು ಘೋಷಿಸಿದ ಕ್ಷಣದಿಂದ ಮದೀನಕ್ಕೆ ವಲಸೆ ಹೋಗುವವರೆಗಿನ ಆ ಹದಿಮೂರು ವರ್ಷಗಳಲ್ಲಿ ಅನುಭವಿಸಿದ ಹಿಂಸೆ, ದೌರ್ಜನ್ಯ, ಅಣಕ, ಮೂದಲಿಕೆ ಎಲ್ಲವೂ ಪ್ರವಾದಿವರ್ಯರನ್ನು(ಸ) ಮತ್ತು ಅವರ ಅನುಚರರನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು. ಆದರೆ ಆ ಸಮಾಜದಲ್ಲಿ ಅಷ್ಟೂ ಸಮಯ ಯಾವತ್ತೂ ಪ್ರತಿಭಟಿಸುವ ಅಥವಾ ಹಿಂಸೆಗೆ ಪ್ರತಿಯಾಗಿ ಹಿಂಸೆ ಎಸಗುವ ಕಾರ್ಯವನ್ನು ಮಾಡಿರಲೇ ಇಲ್ಲ. ಅದಕ್ಕೆ ಅಲ್ಲಾಹನಿಂದ ಅನುಮತಿಯೂ ಇರಲಿಲ್ಲ. ಜನರು ಅಲ್ಲಾಹನ ಸಹಾಯ ಯಾವಾಗ ಬರುವುದೆಂದು ಪ್ರವಾದಿವರ್ಯರ(ಸ) ಬಳಿ ಬಂದು ಅಲವತ್ತುಕೊಳ್ಳುತ್ತಿದ್ದರು. ಆದರೆ ನಿಮ್ಮ ಕೈ ಗಳನ್ನು ತಡೆದಿರಿಸಿರಿ ಎಂದಷ್ಟೇ ಹೇಳಲಾಗುತ್ತಿತ್ತು.
ಅದೇ ವೇಳೆ ಮದೀನಕ್ಕೆ ವಲಸೆ ಹೋಗುವ ರಂಗ ಸಜ್ಜಿಕೆಯೂ ನಡೆಯುತ್ತಿತ್ತು.
ಒಂದು ಹಜ್ಜ್ ನ ಸಂದರ್ಭದಲ್ಲಿ ಮದೀನದಿಂದ ಆಗಮಿಸಿದ ಯಾತ್ರಾರ್ಥಿಗಳ ಸಣ್ಣ ಗುಂಪೊಂದು ಪ್ರವಾದಿವರ್ಯರನ್ನು(ಸ) ಭೇಟಿಯಾಗಿ, ಅವರಲ್ಲಿ ಇಸ್ಲಾಮ್ನ ದೀಕ್ಷೆ ಪಡೆದರು ಮತ್ತು ಅನುಸರಣೆಯ ಕರಾರು ಮಾಡಿದರು. ಇದು ಅಕಬಾ ಒಡಂಬಡಿಕೆ ಎಂದೇ ಪ್ರಸಿದ್ಧವಾಯಿತು. ಮರು ವರ್ಷ ಆ ಒಪ್ಪಂದದ ಸ್ಪಷ್ಟ ರೂಪ ಮೂಡಿ ಬಂತು. ಮದೀನದ ಯಾತ್ರಾರ್ಥಿಗಳು ಪ್ರವಾದಿವರ್ಯರ(ಸ) ರಾಜಕೀಯ ನಾಯಕತ್ವವನ್ನೂ ಒಪ್ಪಿದರು. ಜತೆಗೆ ಪ್ರವಾದಿವರ್ಯರೊಡನೆ(ಸ), ಇಲ್ಲಿ ಇದ್ದು ಹಿಂಸೆ, ದೌರ್ಜನ್ಯಗಳನ್ನು ಅನುಭವಿಸುವುದಕ್ಕಿಂತ ಮದೀನಕ್ಕೆ ಬಂದು ನೆಲೆಸಿರಿ, ನಿಮ್ಮ ಪ್ರಾಣ-ಸೊತ್ತುಗಳನ್ನು ನಮ್ಮ ಮನೆ ಮಂದಿಯನ್ನು ರಕ್ಷಿಸುವಂತೆ ರಕ್ಷಿಸುವೆವು ಎಂದು ಕರಾರು ಮಾಡಿದರು.
ಇದಕ್ಕೊಂದು ಹಿನ್ನೆಲೆ ಇತ್ತು. ಮದೀನದಲ್ಲಿ ಹಲವು ಶತಮಾನಗಳಿಂದ ಬಾಳುತ್ತಾ ಬಂದಿದ್ದ ಔಸ್ ಮತ್ತು ಖಝ್ರಜ್ ಎಂಬ ಎರಡು ಗೋತ್ರಗಳು ತಮ್ಮ ದಾಯಾದಿ ಸಂಬಂಧವನ್ನೂ ಮರೆತು ಕುಟುಂಬ ಪ್ರತಿಷ್ಠೆಯ ಕಾರಣ ಸದಾ ಕಲಹದಲ್ಲಿ ನಿರತವಾಗಿರುತ್ತಿದ್ದುವು, ಅದಕ್ಕೆ ಹೊರ ನಾಡಿನಿಂದ ಬಂದು ನೆಲೆಸಿದ ಬಡ್ಡಿಕೋರ ಯಹೂದಿ ಸಮುದಾಯದ ಕುಮ್ಮಕ್ಕು ಬೇರೆ ಇತ್ತು. ಎರಡೂ ಗೋತ್ರದವರನ್ನು ಕದನದಲ್ಲಿ ನಿರತವಾಗಿರಿಸಿ ತಮ್ಮ ರಾಜಕೀಯ ಮತ್ತು ಆರ್ಥಿಕ ಲಾಭಗಳನ್ನು ಖಾತ್ರಿ ಪಡಿಸಿಡುತ್ತಿದ್ದರು. ಎಲ್ಲಾದರೂ ಈ ಗೋತ್ರಗಳ ಮಂದಿ ಯಹೂದಿಗಳೊಂದಿಗೆ ಕಲಹಕ್ಕಿಳಿದರೆ, ನಮ್ಮಲ್ಲಿ ಓರ್ವ ಪ್ರವಾದಿ ಬರಲಿದ್ದಾರೆ, ಅವರು ಬಂದ ಮೇಲೆ ನಿಮ್ಮನ್ನೆಲ್ಲ ನೋಡಿಕೊಳ್ಳುತ್ತೇವೆ ಎಂದು ಹೆದರಿಸುತ್ತಿದ್ದರು.
ಎಷ್ಟಾದರೂ ಗ್ರಂಥ ಹೊಂದಿದ ಜನ! ಅವರ ಮಾತಿನಲ್ಲಿ ಸತ್ಯ ಇರಬಹುದು ಎಂದು ಉಭಯ ಗೋತ್ರದ ಮಂದಿ ನಂಬುತ್ತಿದ್ದರು ಮತ್ತು ಯಹೂದಿಗಳ ಕುರಿತು ತಮ್ಮ ನಿಲುವನ್ನು ಸಡಿಲಗೊಳಿಸುತ್ತಿದ್ದರು. ಆದರೆ ಯಾವಾಗ ಮಕ್ಕಾದಲ್ಲಿ ದೇವ ಸಂದೇಶವಾಹಕರು(ಸ) ಆಗಮಿಸಿದ್ದಾರೆ ಎಂದು ಅವರಿಗೆ ಮನವರಿಕೆಯಾಯಿತೋ ಆಗಲೇ ಅವರು ಅವಕಾಶವನ್ನು ತಮ್ಮದಾಗಿಸಿದರು.
ಯಹೂದಿಗಳಿಗಿಂತ ಮುಂಚೆ ಈ ಪ್ರವಾದಿಯ(ಸ) ಅನುಸರಣೆಯ ಕರಾರು ಮಾಡಿಕೊಂಡರು. ಈ ಒಪ್ಪಂದದಲ್ಲಿ ಅವರು `ಅಲ್ಲಾಹನ ಜೊತೆ ಯಾರನ್ನೂ ಭಾಗೀದಾರರನ್ನಾಗಿ ಮಾಡಲಾರೆವು, ಕಳ್ಳತನ ಮಾಡಲಾರೆವು, ನಮ್ಮ ಮಕ್ಕಳನ್ನು ವಧಿಸಲಾರೆವು. ಯಾರ ವಿರುದ್ಧವೂ ಮಿಥ್ಯಾರೋಪ ಹೊರಸಲಾರೆವು, ಒಳಿತಿನ ವಿಷಯಗಳಲ್ಲಿ ಪ್ರವಾದಿವರ್ಯರಿಗೆ(ಸ) ಅವಿಧೇಯತೆ ತೋರಲಾರೆವು, ಎಲ್ಲ ಸಂದರ್ಭಗಳಲ್ಲೂ ಅವರ ನಾಯಕತ್ವದೊಂದಿಗೆ ಸಂಘರ್ಷಿಸಲಾರವು’ ಎಂಬುದಾಗಿ ಕರಾರು ಮಾಡಿದರು.
ಒಂದರ್ಥದಲ್ಲಿ ಇದು ಧಾರ್ಮಿಕವಾಗಿ ಅಲ್ಲಾಹನಿಗೆ ಶರಣು ಹೋಗುವುದರೊಂದಿಗೆ ಸಾಮಾಜಿಕವಾಗಿ ಬೆಳೆದು ಬಂದಿರುವ ಪಿಡುಗುಗಳನ್ನು ತೊಡೆದು ಹಾಕಿ, ಪ್ರವಾದಿವರ್ಯರ(ಸ) ನಾಯಕತ್ವವನ್ನು ಅಂಗೀಕರಿಸುವ ಒಂದು ಅಪ್ಪಟ ರಾಜಕೀಯ ಒಪ್ಪಂದವಾಗಿತ್ತು. ಆ ಬಳಿಕ ಪ್ರವಾದಿವರ್ಯರು(ಸ) ಮದೀನಕ್ಕೆ ವಲಸೆ ಹೋದರು. ನಂತರ ಅಲ್ಲಿ ಅವರು ಮೊತ್ತ ಮೊದಲು ಮಾಡಿದ ಕೆಲಸ ಇತರ ಸಮುದಾಯಗಳೊಂದಿಗೆ ಒಪ್ಪಂದವಾಗಿತ್ತು. ಅಲ್ಲಾಹನ ಸಂದೇಶ ಪ್ರಚಾರವು ಮಕ್ಕಾದಲ್ಲಿ ಒಂದು ಅಭಿಯಾನದ ರೂಪದಲ್ಲಿ ಆಗುತ್ತಿತ್ತು. ವೈಯಕ್ತಿಕವಾಗಿಯೂ ಸಂಘಟಿತವಾಗಿಯೂ ಭಯದ ವಾತಾವರಣದೊಂದಿಗೆ ನಡೆಯುತ್ತಿತ್ತು. ಆದರೆ ಮದೀನಕ್ಕೆ ವಲಸೆ ಹೋದ ಮೇಲೆ ಪ್ರವಾದಿವರ್ಯರು(ಸ) ಅಲ್ಲಿನ ನಿವಾಸಿಗಳ ಒಮ್ಮತದಿಂದ ಅವರ ರಾಜಕೀಯ ನಾಯಕರಾದರು. ಈಗ ಅಲ್ಲಾಹನ ಸಂದೇಶವು ಒಂದು ಆಂದೋಲನದ ರೂಪ ಪಡೆಯಿತು.
ಆದರೆ ಸಂಘರ್ಷವಿರುವಲ್ಲಿ ಈ ಆಂದೋಲನ ಕಾರ್ಯವು ಸರಾಗವಾಗಿ ಸಾಗಲಾರದು. ಇದರ ಅರಿವಿದ್ದುದರಿಂದಲೇ ಪ್ರವಾದಿವರ್ಯರು(ಸ) ಸಂಘರ್ಷ, ಕಲಹ, ಯುದ್ಧಗಳನ್ನು ಸಾಧ್ಯವಾದಷ್ಟು ನಿವಾರಿಸಿ ಸುತ್ತಮುತ್ತಲೂ ಶಾಂತಿಯ ವಾತಾವರಣವನ್ನು ಬೆಳೆಸಲು ಶ್ರಮಿಸಿದರು. ವಲಸೆಗೆ ಮುಂಚೆ ಮದೀನದಲ್ಲಿ ಯಹೂದಿಗಳ ಕುತಂತ್ರದಿಂದಾಗಿ ಔಸ್ ಮತ್ತು ಖಝ್ರಜ್ ಗೋತ್ರಗಳ ನಡುವೆ ಭೀಕರವಾದ ದೀರ್ಘಕಾಲೀನ ಯುದ್ಧ (ಬುಆಸ್ ಯುದ್ಧ) ನಡೆದಿತ್ತು. ಕೊನೆಗೊಮ್ಮೆ ಜ್ಞಾನೋದಯವಾಗಿ ಉಭಯ ಗೋತ್ರಗಳೂ ಒಂದಾಗಿದ್ದುವು.
ಪ್ರವಾದಿವರ್ಯರ(ಸ) ಆಗಮನದ ಬಳಿಕವೂ ಒಂದಾಗಿದ್ದ ಉಭಯ ಗೋತ್ರಗಳ ನಡುವೆ ಯಹೂದಿಗಳ ವಿಷ ಬೀಜ ಬಿತ್ತಲು ಪ್ರಯತ್ನಿಸುತ್ತಿದ್ದರು. ಅದು ಮೊಳಕೆಯೊಡೆಯುವ ಸೂಚನೆಗಳೂ ಸಿಗುತ್ತಿದ್ದುವು. ಹಾಗಾಗಿ ಒಪ್ಪಂದ ಮಾಡುವುದು ಮತ್ತು ಮೈತ್ರಿ ಸಂಬಂಧವನ್ನು ಬೆಳೆಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಪ್ರವಾದಿವರ್ಯರು(ಸ) ಇಂತಹ ಚಿಕ್ಕಪುಟ್ಟ ಗೋತ್ರ ಕಲಹಗಳ ಜೊತೆಗೆ ವಿವಿಧ ಧರ್ಮೀಯರೊಂದಿಗೆ ಇತರ ಗೋತ್ರಗಳ ನಾಯಕರೊಂದಿಗೆ ರಾಜಕೀಯ ಒಪ್ಪಂದವನ್ನು ಮಾಡಿದರು. ಇದು ಇಸ್ಲಾಮೀ ರಾಷ್ಟ್ರದ ಬೆಳವಣಿಗೆಗೆ ತೀರಾ ಅಗತ್ಯವೂ ಆಗಿತ್ತು.
ಒಂದು ರಾಷ್ಟ್ರದ ಸ್ಥಾಪನೆಯ ವೇಳೆ ರಾಜಕೀಯ ಸಂಘರ್ಷ ನಡೆಯುವುದು ಸಾಮಾನ್ಯ. ಅಂತಹದರಲ್ಲಿ ಶಕ್ತಿಯ ಬಳಕೆ ಅನಿವಾರ್ಯವಾಗಿರುತ್ತದೆ. ಆದರೆ ಪ್ರವಾದಿವರ್ಯರು(ಸ) ಸ್ಥಾಪಿಸಿದ ಮದೀನಾದ ಇಸ್ಲಾಮೀ ರಾಷ್ಟ್ರವು
ಸಂಘರ್ಷರಹಿತವಾಗಿತ್ತು. ಅದಕ್ಕಾಗಿ ಪ್ರವಾದಿವರ್ಯರು(ಸ) ರಚಿಸಿದ ಸಂವಿಧಾನಕ್ಕೆ ಗತ ಇತಿಹಾಸದಲ್ಲಿ ಯಾವುದೇ ನಿದರ್ಶನ ದೊರೆಯುವುದಿಲ್ಲ. ಅದು ಅತ್ಯಂತ ಸಂತುಲಿತ ಭಾಷೆಯಲ್ಲಿ ಬರೆಯಲ್ಪಟ್ಟಿತ್ತು. ಅದೊಂದು ಲಿಖಿತ ಸಂವಿಧಾನವಾಗಿತ್ತು. ಬಹುಶಃ ಮಾನವೇತಿಹಾಸದ ಮೊತ್ತ ಮೊದಲ ಲಿಖಿತ ಸಂವಿಧಾನ. ಅದರಲ್ಲಿ ಅನೇಕ ಪರಿಚ್ಛೇದಗಳಿದ್ದುವು. ಕೆಲವು ಉದಾಹರಣೆಗಳು: ‘ಪರಮ ದಯಾಮಯನೂ ಕೃಪಾಶೀಲನೂ ಆದ ಅಲ್ಲಾಹನ ನಾಮದಿಂದ’ ಆರಂಭವಾಗುವ ಆ ಸಂವಿಧಾನದ ಪ್ರಥಮ ಪರಿಚ್ಛೇದದಲ್ಲಿ ‘ಕುರೈಶ್ ಮತ್ತು ಮದೀನದ ಮುಸ್ಲಿಮರ ಮಧ್ಯೆ’ ಎಂದು ನಮೂದಿಸಲಾಗಿದೆ. ಬಳಿಕದ ಪರಿಚ್ಛೇದದಲ್ಲಿ ಯಹೂದಿಗಳನ್ನು ರಾಜಕೀಯವಾಗಿ ಒಂದು ಸಮುದಾಯವೆಂದು ಪರಿಗಣಿಸಲಾಯಿತು. ಈ ಸಂವಿಧಾನದಾದ್ಯಂತ ಅನ್ಯಾಯ, ಕೊಲೆಯ ವಿರುದ್ಧ ರಕ್ತಪರಿಹಾರ, ಅದಿಲ್ಲದಿದ್ದರೆ ಪ್ರತೀಕಾರ ಪಡೆಯುವುದು, ಅಭಯ ಯಾಚಿಸಿದವರಿಗೆ ಅಭಯ ನೀಡುವುದು ಮುಂತಾದ ವಿಷಯಗಳೊಂದಿಗೆ ಮದೀನದ ಪರಿಸರವನ್ನು ಇಸ್ಲಾಮೀ ರಾಷ್ಟ್ರದ ಪ್ರದೇಶ (Territory) ಎಂದು ಬಣ್ಣಿಸಲಾಗಿದೆ.
ಅದರ ಹೊರಗಿರುವ ಗೋತ್ರಗಳೊಂದಿಗೆ ಮೈತ್ರಿ ಸಂಬಂಧವನ್ನು ಬೆಳೆಸುವ ಒಡಂಬಡಿಕೆಗಳನ್ನೂ ಮಾಡಲಾಯಿತು. ಇದರ ಮೂಲಕ ಸಂದೇಶ ಪ್ರಚಾರ ಕಾರ್ಯವು ವ್ಯಾಪಕವಾಗತೊಡಗಿತು. ಮಿತ್ರಗೋತ್ರಗಳಲ್ಲಿ ಸಂದೇಶ ಪ್ರಚಾರಕರು ಹೋಗಿ ಅವರೊಡನೆ ಬೆರೆಯುವುದು ಸಾಧ್ಯವಾಗತೊಡಗಿತು. ಈ ಪ್ರಕಾರ ಅಲ್ಲಿನ ಜನರಿಗೂ ಮದೀನದೊಂದಿಗೆ ಉತ್ತಮ ಸಂಪರ್ಕ ಬೆಳೆಯತೊಡಗಿತು. ಇದು ಸಾರ್ವಜನಿಕವಾಗಿ ಇಸ್ಲಾಮೀ ಆಡಳಿತದೊಂದಿಗೆ ಸದಭಿಪ್ರಾಯ ಬೆಳೆಯಲು ಕಾರಣವಾಯಿತು. ಈ ಒಡಂಬಡಿಕೆಗಳು ಮತ್ತು ಸಂವಿಧಾನದ ಮೂಲಕ ರಕ್ಷಣಾ ವ್ಯವಸ್ಥೆಯನ್ನೂ ಬಲಪಡಿಸಲಾಯಿತು. ಇತರ ಗೋತ್ರಗಳ ಧಾರ್ಮಿಕ ಸ್ವಾತಂತ್ರ್ಯವನ್ನೂ ಸ್ಪಷ್ಟಪಡಿಸಲಾಯಿತು. ಜೊತೆಗೆ ಮದೀನದ ಮೇಲೆ ಆಕ್ರಮಣ ನಡೆದರೆ ಒಪ್ಪಂದದಲ್ಲಿ ಒಳಪಟ್ಟ ಎಲ್ಲ ಪಾಲುದಾರರೂ ಪರಸ್ಪರ ಬೆಂಬಲಿಸಬೇಕು ಎಂದೂ ಒಡಬಂಡಿಕೆಯಲ್ಲಿ ಸೇರಿಸಲಾಗಿತ್ತು.
ಈ ರೀತಿಯಾಗಿ ಒಪ್ಪಂದ ನಡೆಸಿದ ಗೋತ್ರಗಳು ಬಹಳ ಇವೆ. ಉದಾಹರಣೆಗೆ, ಮದೀನದಿಂದ ಮಕ್ಕಾದ ಕಡೆಗೆ ಹೋಗುವ ದಾರಿಯಲ್ಲಿ ಸಿಗುವ ವದ್ದಾನ್, ಅಂತೆಯೇ ಐಶ್, ಯಾಂಬೂಅï ಸಮೀಪದ ಬುವಾತ್, ದುಲ್ ಅಶೀರಾ ಮುಂತಾದ ಊರುಗಳಿಗೆ ತೆರಳಿ ಅಲ್ಲಿನವರೊಡನೆ ನಡೆಸಿದ ಮೈತ್ರಿ ಒಪ್ಪಂದವು ಒಂದು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿತ್ತು.
ಎಲ್ಲಕ್ಕಿಂತಲೂ ಮಿಗಿಲಾದ ಒಡಂಬಡಿಕೆ ಹುದೈಬಿಯಾ ಸಂಧಿಯಾಗಿತ್ತು. ಮಕ್ಕಾದಿಂದ ಮದೀನಕ್ಕೆ ವಲಸೆ ಬಂದು ಆರು ವರ್ಷಗಳು ಸಂದು ಹೋಗಿದ್ದುವು. ಈ ಮಧ್ಯೆ ಮಕ್ಕಾದ ಸತ್ಯನಿಷೇಧಿಗಳು ಪ್ರವಾದಿವರ್ಯರನ್ನು(ಸ) ಹೇತುವಾಗಿಸಿ, ಮದೀನದ ಮೇಲೆ ಅನೇಕ ಬಾರಿ ದಂಡೆತ್ತಿ ಬಂದಿದ್ದರು. ವ್ಯಾಪಾರಿ ತಂಡದ ರಕ್ಷಣೆಯ ನೆಪದಿಂದ ಬದ್ರ್ ನಲ್ಲಿ, ಬದ್ರ್ ನ ಪ್ರತೀಕಾರದ ನೆಪದಲ್ಲಿ ಉಹುದ್ನಲ್ಲಿ ಮತ್ತು ಅರಬ್ನ ಅನೇಕ ಗೋತ್ರಗಳ ಒಕ್ಕೂಟ ರಚಿಸಿ ನಡೆಸಿದ ದಾಳಿ (ಅಹ್ಝಾಬ್) ಹೀಗೆ ಅನೇಕ ಯುದ್ಧಗಳನ್ನು ಮದೀನದ ವಿರುದ್ಧ ನಡೆಸಿದ್ದರು. ಈ ಎಲ್ಲ ಯುದ್ಧಗಳಲ್ಲಿ ಮುಸ್ಲಿಮರೇ ಮೇಲುಗೈ ಸಾಧಿಸಿದ್ದು ಬೇರೆ ವಿಷಯ. ಹೇರಳ ಯುದ್ಧ ಸಾಮಗ್ರಿಗಳ ಸೌಲಭ್ಯ, ಸಕಲ ಸಿದ್ಧತೆ, ಸರ್ವ ಸಂಪನ್ಮೂಲ ಮತ್ತು ವ್ಯಾಪಕ ಜನಬಲ ಇದ್ದಾಗಿಯೂ ಸತ್ಯನಿಷೇಧಿ ದಾಳಿಕೋರರು ಸೋತು ಸುಣ್ಣವಾಗಿ ಹೋಗಿದ್ದರು.
ಇದೆಲ್ಲ ನಡೆದ ತರುವಾಯ ಹಿಜರಿ 6ರಲ್ಲಿ ಪ್ರವಾದಿವರ್ಯರಿಗೆ(ಸ) ಪ್ರಾಣಿ ಬಲಿ ನೀಡಿ ಕೂದಲು ಕತ್ತರಿಸುವ ಕನಸು ಬೀಳುತ್ತದೆ. ಅದು ಮಕ್ಕಾ ಹಜ್ಜ್ ಯಾತ್ರೆಯ ಸೂಚನೆ ಎಂದು ಅರಿತು ಅದಕ್ಕಾಗಿ ತಯಾರಿ ನಡೆಸಿದರು. ಈ ಆರು ವರ್ಷ ಗಳಲ್ಲಿ ತಾಯ್ನಾಡಿನಿಂದ ದೂರವಿದ್ದ ಪ್ರವಾದಿವರ್ಯರು(ಸ) ಸೇರಿ ಮದೀನಕ್ಕೆ ವಲಸೆ ಹೋಗಿದ್ದ ಮುಹಾಜಿರರೆಲ್ಲರಿಗೂ ಅತೀವ ಸಂತಸವಾಗುತ್ತದೆ. ಪ್ರವಾದಿವರ್ಯರ(ಸ) ಜೊತೆ 1,400 ಮಂದಿ ಸ್ವಯಂ ಪ್ರೇರಿತರಾಗಿ ಹೊರಟರು. ಪುಣ್ಯ ಯಾತ್ರೆಯ ಸೂಚಕವಾಗಿ ಬಲಿ ಪ್ರಾಣಿಗಳ ಕೊರಳಿಗೆ ಪಟ್ಟಿಯನ್ನೂ ಕಟ್ಟಿದರು.
ಆದರೆ ಮಕ್ಕಾದ ಕುರೈಶರು ಇಕ್ಕಟ್ಟಿಗೆ ಬಿದ್ದರು. ಮುಸ್ಲಿಮರು ಕಅಬಾ ಸಂದರ್ಶನಕ್ಕೆ ಹೊರಟಿದ್ದು ದುಲ್ ಕಅದ್ ತಿಂಗಳಲ್ಲಾಗಿತ್ತು. ಅಂದರೆ ಯುದ್ಧ ನಿಷಿದ್ಧ ತಿಂಗಳು. ಈಗ ಅವರೊಂದಿಗೆ ಯುದ್ಧ ಮಾಡುವಂತೆಯೂ ಇಲ್ಲ, ಅವರನ್ನು ಮಕ್ಕಾ ಪ್ರವೇಶಿಸಲು ಬಿಡುವಂತೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ರಾಯಭಾರಿಗಳನ್ನು ಕಳುಹಿಸಿ ಅವರನ್ನು ಮನವೊಲಿಸಿ ಮರಳುವಂತೆ ಮಾಡುವುದೊಂದೇ ದಾರಿ ಇತ್ತು. ಆದರೆ ಮುಸ್ಲಿಮರ ಬಳಿಗೆ ಹೋದವರೆಲ್ಲರೂ ಮರಳಿ ಬಂದು, ಅವರನ್ನು ಕಅಬಾ ಸಂದರ್ಶನದಿಂದ ತಡೆಯಬೇಡಿರಿ. ಅವರು ಅದರ ಹೊರತು ಬೇರೆ ಯಾವುದೇ ಉದ್ದೇಶದಿಂದ ಬಂದಿಲ್ಲ ಎಂದಷ್ಟೇ ಹೇಳಿದರು. ಒಂದಿಬ್ಬರು ಇನ್ನೂ ಮುಂದೆ ಹೋಗಿ ಮುಸ್ಲಿಮರನ್ನು ತಡೆದರೆ ನಾವು ನಿಮ್ಮ ಬೆಂಬಲಕ್ಕಿಲ್ಲ ಎಂದೂ ಹೇಳಿಬಿಟ್ಟರು. ಕೊನೆಗೆ ಪ್ರವಾದಿವರ್ಯರು(ಸ) ಕುರೈಶರೊಂದಿಗೆ ಮಾತುಕತೆಗೆ ಉಸ್ಮಾನ್(ರ)ರನ್ನು ಕಳುಹಿಸಿದರು.
ಆದರೆ ಕುರೈಶರು ಅವರನ್ನು ತಡೆದಿರಿಸಿದರು. ಇತ್ತ ಉಸ್ಮಾನ್(ರ) ಕೊಲೆಯಾಯಿತೆಂಬ ವದಂತಿ ಹರಡಿತು. ರಾಯಭಾರಿಯ ಕೊಲೆ ನಡೆಸುವುದು ಅತಿ ದೊಡ್ಡ ಅಪರಾಧವಾಗಿತ್ತು. ಹಾಗಾಗಿ ಅದಕ್ಕಾಗಿ ಪ್ರತೀಕಾರ ತೀರಿಸುವುದೆಂದು ಮುಸ್ಲಿಮರೆಲ್ಲರೂ ಪ್ರವಾದಿವರ್ಯರ(ಸ) ಕೈಯಲ್ಲಿ ಬೈಅತ್ ಮಾಡಿದರು. ಏನೇ ಆಗಲಿ ಅತಿರೇಕವೆಸಗಿದ ಕುರೈಶರ ವಿರುದ್ಧ ಹೋರಾಡಿಯೇ ಸಿದ್ಧ ಎಂದು ಸಾರಿದರು. ವಿಷಯ ತಿಳಿದ ಕುರೈಶರು ಹೌಹಾರಿದರು. ಇದುವರೆಗೆ ಮದೀನದ ಮೇಲೆ ಸುಸಜ್ಜಿತ ಸೇನೆಗಳಿಂದ ದಂಡೆತ್ತಿ ಹೋಗಿಯೂ ವಿಫಲರಾಗಿ ಮರಳಿದ ಅನುಭವವಿರುವಾಗ, ಒಂದು ವೇಳೆ ಮುಸ್ಲಿಮರು ನಮ್ಮ ಮೇಲೆ ದಾಳಿ ನಡೆಸಿದರೆ ಏನಾದೀತು? ಆದರೂ ಅವರನ್ನು ಮಕ್ಕಾ ಪ್ರವೇಶಕ್ಕೆ ಅನುಮತಿ ನೀಡಿದರೂ ಸಮಾಜದ ಮುಂದೆ ತಲೆ ತಗ್ಗಿಸಬೇಕಾದೀತು ಎಂಬ ಕುಲಪ್ರತಿಷ್ಠೆಯೂ ಅವರನ್ನು ತಡೆಯುತ್ತಿತ್ತು.
ಹೇಗಾದರೂ ಮಾಡಿ ಮುಸ್ಲಿಮರನ್ನು ಮರಳಿಸುವುದೆಂದು ತೀರ್ಮಾನಿಸಿ ಕುರೈಶರ ಪ್ರಖಂಡ ವಾಗ್ಮಿ ಮತ್ತು ಚತುರರಾಗಿದ್ದ ಸುಹೈಲ್ ಬಿನ್ ಅಮ್ರ್ರನ್ನು ಮಾತುಕತೆಗೆ ಕಳುಹಿಸಲಾಯಿತು. ಹೇಗೂ ಅವರು ಪ್ರವಾದಿ ವರ್ಯರ(ಸ) ಮನವೊಲಿಸಿ ಒಂದು ಒಪ್ಪಂದವನ್ನು ರಚಿಸಿದರು. ಅದರ ಪ್ರಕಾರ, ಮುಂದಿನ ಹತ್ತು ವರ್ಷಗಳ ವರೆಗೆ ಉಭಯ ಕಕ್ಷಿಗಳ ನಡುವೆ ಯುದ್ಧ ವಿರಾಮವಿರುವುದು. ಶಾಂತಿ ಪಾಲನೆಯಾಗುವುದು. ಮುಸ್ಲಿಮರು ಈ ವರ್ಷ ಮರಳಿ ಹೋಗಬೇಕು ಮತ್ತು ಮರುವರ್ಷ ಬಂದು ಕೇವಲ ಮೂರು ದಿನ ಮಕ್ಕಾದಲ್ಲಿದ್ದು ಉಮ್ರಾ ನಿರ್ವಹಿಸಬಹುದು. ಅಷ್ಟೂ ಸಮಯ ಕುರೈಶರಾರೂ ಅವರ ತಂಟೆಗೆ ಬರಲಾರರು. ಆತ್ಮರಕ್ಷಣಾರ್ಥ ಒರೆಯಲ್ಲಿ ಖಡ್ಗವನ್ನು ಬಿಟ್ಟು ಬೇರೆ ಯಾವುದೇ ಆಯುಧ ಇರಬಾರದು. ಅರಬ್ ಗೋತ್ರಗಳ ಪೈಕಿ ಯಾರಿಗೂ ಯಾರೊಡನೆ ಬೇಕಾದರೂ ಮೈತ್ರಿ ಒಪ್ಪಂದ ಮಾಡಬಹುದು. ಕುರೈಶರ ಯಾವ ವ್ಯಕ್ತಿಯೂ ಮಕ್ಕಾದಿಂದ ಪಲಾಯನ ಮಾಡಿ ಮದೀನಕ್ಕೆ ಬಂದರೆ ಅವನನ್ನು ಮರಳಿಸುವುದು ಮತ್ತು ಮದೀನದಿಂದ ಮಕ್ಕಾಗೆ ಯಾರಾದರೂ ಪಲಾಯನ ಮಾಡಿದರೆ ಅವನನ್ನು ಮರಳಿಸಲಾಗದು.
ಈ ಕೊನೆಯ ಶರ್ತವು ಮುಸ್ಲಿಮರನ್ನು ಕೆರಳಿಸಿತ್ತು. ಅಷ್ಟರಲ್ಲಿ ಸುಹೈಲ್ರ ಮಗ ಅಬೂ ಜಂದಲ್ ಮರ್ದನದಿಂದ ಜರ್ಝರಿತಗೊಂಡ ಸ್ಥಿತಿಯಲ್ಲಿ ಓಡೋಡಿ ಬಂದರು. ಸತ್ಯವಿಶ್ವಾಸ ಸ್ವೀಕರಿಸಿದ ಕಾರಣಕ್ಕೆ ಹಿಂಸಿಸಲ್ಪಡುತ್ತಿದ್ದರು. ಆದರೆ ಸುಹೈಲ್ ಒಡಂಬಡಿಕೆಯ ನಿಬಂದನೆಯನ್ನು ಮುಂದಿರಿಸಿ ತನ್ನ ಮಗನನ್ನು ಹಿಂದಕ್ಕೆ ಕರಕೊಂಡು ಹೋದರು. ಪ್ರವಾದಿವರ್ಯರ(ಸ) ದೂರದರ್ಶಿ ದೃಷ್ಟಿಯು ಒಡಂಬಡಿಕೆಯ ನಿಬಂದನೆಗಳ ಪರಿಣಾಮಗಳನ್ನು ಕಾಣುತ್ತಿತ್ತು.
ಅಬೂಜಂದಲ್ರೊಡನೆ, “ಅಲ್ಲಾಹನು ನಿನಗೆ ದಾರಿ ತೋರಿಸುವನು” ಎಂದಷ್ಟೇ ಹೇಳಿದರು. ಉಳಿದಂತೆ ಆಘಾತಗೊಂಡಿದ್ದ ಅನುಚರರನ್ನು ಸಮಾಧಾನಪಡಿಸಿ ಮದೀನಕ್ಕೆ ಮರಳಿದರು.
ಎರಡನೆಯ ಶರ್ತದ ಪ್ರಕಾರ, ಮರುವರ್ಷ ಮಕ್ಕಾ ಸಂದರ್ಶನಕ್ಕೆ ಅವಕಾಶ ದೊರೆತ ಮುಸ್ಲಿಮರು ಬಹಳ ಗಾಂಭೀರ್ಯದಿಂದ ಬಂದು ಉಮ್ರಾ ನಿರ್ವಹಿಸಿ ಹೋದರು. ಆ ಮೂರು ದಿನಗಳಲ್ಲಿ ಮಕ್ಕಾಗೆ ಮಕ್ಕಾವೇ ಖಾಲಿಯಾಗಿ ಮುಕ್ತ ಅವಕಾಶ ಒದಗಿಸಿ ಕೊಟ್ಟಿತ್ತು. ಒಂದರ್ಥದಲ್ಲಿ ಮುಸ್ಲಿಮರಿಗೆ ಸಂಪೂರ್ಣ ಸ್ವಾಯತ್ತೆ ನೀಡಲಾಗಿತ್ತು. ನಿಬಂದನೆಯ ಕಾರಣದಿಂದಾಗಿ ಮಕ್ಕಾದ ಯಾವೊಬ್ಬ ವ್ಯಕ್ತಿಗೂ ಮುಸ್ಲಿಮರ ವಿರುದ್ಧ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿತ್ತು.
ಈ ಮಧ್ಯೆ ಒಡಂಬಡಿಕೆಯ ಮೊದಲ ನಿಬಂದನೆಯ ದೆಸೆ ಯಿಂದ ಸಂಘರ್ಷದ ಕರಿಮೋಡ ಕರಗಿ, ಸಂದೇಶ ಪ್ರಚಾರದ ದಾರಿ ಸ್ಪಷ್ಟವಾಗಿ ಕಾಣತೊಡಗಿತ್ತು. ಮುಸ್ಲಿಮರು ಅರೇಬಿಯದ ಇತರ ಗೋತ್ರಗಳ ಕಡೆಗೆ ಮುಕ್ತವಾಗಿ ಸಂಚರಿಸುವಂತಾಯಿತು. ದೇಶ ವಿದೇಶಗಳ ಅರಸರುಗಳಿಗೆ ಪತ್ರ ಮುಖೇನ ಇಸ್ಲಾಮಿನ ಸಂದೇಶ ರವಾನೆಯಾಗತೊಡಗಿತು. ಇದೆಲ್ಲವೂ ಒಡಂಬಡಿಕೆಯ ಜಾಡಿನಲ್ಲಿ ಮುಸ್ಲಿಮರನ್ನು ಕಟ್ಟಿ ಹಾಕಿದೆವೆಂದು ಬೀಗುತ್ತಿದ್ದ ಕುರೈಶರಿಗೆ ಸ್ಪಷ್ಟವಾಗಿ ಕಾಣಿಸುತ್ತಲೂ ಇತ್ತು. ಮುಂದಿನ ವರ್ಷ ಅವರ ಜಂಘಾ ಬಲವೇ ಉಡುಗಿ ಹೋಗುವಷ್ಟು ಮುಸ್ಲಿಮರು ಬೆಳೆದು ನಿಂತರು. ಯುದ್ಧ ವಿರಾಮ ಎಂದರೆ ಇತರೆಲ್ಲ ಚಟುವಟಿಕೆಗಳಿಗೆ ದಾರಿ ಎಂಬುದನ್ನು ಅರಿಯದಾದರು. ಇಸ್ಲಾಮೀ ಸಂದೇಶ ಪ್ರಚಾರ ಮಾತ್ರವಲ್ಲ, ಇತರ ದೇಶಗಳೊಂದಿಗೆ ವ್ಯಾಪಾರಿ ಸಂಬಂಧವೂ ಉತ್ತಮ ಗೊಂಡು ಮದೀನ ಮೊದಲಿಗಿಂತಲೂ ಸುಭಿಕ್ಷವಾಗ ತೊಡಗಿತು.
ಒಟ್ಟಿನಲ್ಲಿ ಪ್ರವಾದಿವರ್ಯರು(ಸ) ದೇಶ ರಕ್ಷಣೆಗಾಗಿ ಮದೀನಾ ಮತ್ತು ಪರಿಸರದ ಗೋತ್ರಗಳೊಂದಿಗೂ ಯಹೂದಿ ಸಮುದಾಯದೊಂದಿಗೂ ಮೈತ್ರಿ ಒಪ್ಪಂದ ಮಾಡಿಕೊಂಡಿದ್ದರು. ಇತರ ಗೋತ್ರಗಳೊಂದಿಗೆ ಸಂಘರ್ಷ ತಪ್ಪಿಸಲೋಸುಗ ಒಪ್ಪಂದವನ್ನೂ ಮಾಡಿದ್ದರು. ಕೊನೆಗೆ ಹುದೈಬಿಯಾ ಸಂಧಿಯೂ ಅವರ ಇಚ್ಛೆ ಯನ್ನು ಈಡೇರಿಸುವ ರೀತಿಯಲ್ಲಿ ಶತ್ರುಗಳೇ ಶರ್ತಗಳನ್ನು ವಿಧಿಸಿದ್ದರು. ಅದರ ದೂರಗಾಮಿ ಪರಿಣಾಮವನ್ನು ಅರಿತೇ ಅದಕ್ಕೆ ಅನುಮೋದನೆ ನೀಡಿದ್ದರು. ಏನಿದ್ದರೂ ಪ್ರವಾದಿವರ್ಯರು(ಸ) ತನ್ನ ದೌತ್ಯ ನಿರ್ವಹಣೆಗಾಗಿ ಮಕ್ಕಾದಿಂದ ಮದೀನಕ್ಕೆ ವಲಸೆ ಹೋದುದು, ಪರಿಸರದ ಗೋತ್ರಗಳೊಂದಿಗೆ ಮೈತ್ರಿ ಮಾಡಿದುದು, ರಾಜಕೀಯ ಮಾತ್ರವಲ್ಲ ರಕ್ಷಣಾ ಕರಾರನ್ನೂ ಮಾಡಿದುದು, ಹುದೈಬಿಯಾದಲ್ಲಿ ಮೇಲ್ನೋಟಕ್ಕೆ ಅವಮಾನಕರವಾಗಿ ಕಾಣುವಂತಹ ಒಡಂಬಡಿಕೆಯ ನ್ನು ಒಪ್ಪಿದುದು ಎಲ್ಲವೂ ಸಂಘರ್ಷದ ವಾತಾವರಣವನ್ನು ತಿಳಿಯಾಗಿಸಲಿಕ್ಕಾಗಿತ್ತು. ಏಕೆಂದರೆ ಶಾಂತಿಯ ವಾತಾವರಣದಲ್ಲಿಯೇ ಎಲ್ಲ ಒಳಿತುಗಳಿಗೆ ದಾರಿ ಸುಗಮವಾಗುವುದು.












