ತಿರುವನಂತಪುರಂ, ಮಾ.20: ಕೇರಳದಲ್ಲಿ ರಜಾಕಾಲದಲ್ಲಿ ನಡೆಸಲಾಗುವ ಕ್ಲಾಸುಗಳನ್ನು ನಿಷೇಧಿಸಿ ಸಾರ್ವಜನಿಕ ಶಿಕ್ಷಣ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಕೇರಳಾದ್ಯಂತ ತೀವ್ರ ಉಷ್ಣತೆ ಇರುವುದರಿಂದ ಸಿಬಿಎಸ್ಇ, ಐಸಿಎಸ್ಇ ಸ್ಕೂಲ್ಗಳಿಗೂ ಆದೇಶ ಅನ್ವಯ ಎಂದು ನಿರ್ದೇಶನಾಲಯ ಆದೇಶದಲ್ಲಿ ತಿಳಿಸಿದೆ.
ಇದೇವೇಳೆ ಬೇಸಿಗೆಯಲ್ಲಿ ಆಯೋಜಿಸಲಾಗುವ ಶಿಬಿರಗಳ ಮೇಲೆಯೂ ಶಿಕ್ಷಣಾಲಯ ನಿಯಂತ್ರಣ ಹೇರಿದ್ದು ಬೇಸಿಗೆ ಶಿಬಿರಗಳನ್ನು ಆಯೋಜಿಸುವವರು ಒಂದು ವಾರ ಮೊದಲು ಅನುಮತಿ ಪಡೆದಿರಬೇಕು. ಹತ್ತು ದಿವಸಕ್ಕಿಂತ ಹೆಚ್ಚು ಕಾಲ ಶಿಬಿರಗಳು ಇರಬಾರದು. ಶಿಬಿರ ನಡೆಸುವ ಸ್ಥಳಗಳಿಗೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಶಿಬಿರ ನಡೆಸುವ ಕುರಿತು ಅನುಮತಿ ದೊರೆಯಲಿದೆ ಎಂದು ಸಾರ್ವಜನಿಕ ಶಿಕ್ಷಣಾಲಯ ತನ್ನ ಆದೇಶದಲ್ಲಿ ತಿಳಿಸಿದೆ.












