ಕರ್ನಾಟಕದ ಸಂಘಟನೆಗಳ ಮತ್ತು ಧಾರ್ಮಿಕ ನೇತಾರರ ಫೆಲೆಸ್ತೀನ್ ಸಹಾನುಭೂತಿ ಒಕ್ಕೂಟದಿಂದ ಪತ್ರಿಕಾಗೋಷ್ಟಿ

0
603

ಸನ್ಮಾರ್ಗ ವಾರ್ತೆ

ಬೆಂಗಳೂರು: ಕರ್ನಾಟಕದ ಸಂಘಟನೆಗಳ ಮತ್ತು ಧಾರ್ಮಿಕ ನೇತಾರರ ಫೆಲೆಸ್ತೀನ್ ಸಹಾನುಭೂತಿ ಒಕ್ಕೂಟದಿಂದ ಅಕ್ಟೋಬರ್ 26 ರಂದು ಬಿಫ್ಟ್ ಸಂಭಾಗಣದಲ್ಲಿ ಇಸ್ರೇಲಿನ ಬರ್ಬರತೆಯನ್ನು ಖಂಡಿಸಿ ಪತ್ರಿಕಾಗೋಷ್ಟಿಯನ್ನು ಆಯೋಜಿಸಲಾಯಿತು.

ಫೆಲೆಸ್ತೀನ್ ಮತ್ತೊಮ್ಮೆ ವಿನಾಶಕಾರಿ ಯುದ್ಧದ ಜ್ವಾಲೆಯಿಂದ ಆವರಿಸಿದೆ. ತೆರೆದ ಜೈಲಿನಂತಹ ಪರಿಸ್ಥಿತಿಯಲ್ಲಿ ವಾಸಿಸುತ್ತಿರುವ ಸುಮಾರು 2.3 ಮಿಲಿಯನ್ ಬಡ ಜನರಿಗೆ ನೆಲೆಯಾಗಿರುವ ಕಿರಿದಾದ ಭೂಮಿಯ ಮೇಲೆ ನಿರಂತರವಾಗಿ ಮಾಡುತ್ತಿರುವ ಬಾಂಬ್ ದಾಳಿಯಿಂದಾಗಿ ಸಾವಿರಾರು ಅಮೂಲ್ಯ ಜೀವ ಮತ್ತು ಆಸ್ತಿಪಾಸ್ತಿಯ ನಷ್ಟಕ್ಕೆ ಕಾರಣವಾಗಿದೆ.

ಅಫ್ಘಾನಿಸ್ತಾನದ ಮೇಲೆ ನ್ಯಾಟೋ ಒಂದು ವರ್ಷದಲ್ಲಿ ಸುರಿದಿದ್ದ ಬಾಂಬುಗಳನ್ನು ಗಾಝಾಪಟ್ಟಿಯ ಮೇಲೆ ಕೇವಲ ಒಂದು ವಾರದಲ್ಲಿ ಸುರಿಯಲಾಗಿದೆ. ಇದರ ಪರಿಣಾಮವಾಗಿ ಗಾಝಾಪಟ್ಟಿಯ ಅರ್ಧದಷ್ಟು ಭಾಗವು ಅವಶೇಷವಾಗಿ ಮಾರ್ಪಟ್ಟಿದೆ. 2800 ಮಕ್ಕಳು, ಹಲವಾರು ಮಹಿಳೆಯರು ಸೇರಿದಂತೆ 6000 ಜನರು ಹುತಾತ್ಮರಾಗಿದ್ದಾರೆ ಮತ್ತು ಸುಮಾರು 16000 ಜನರು ಗಾಯಗೊಂಡಿದ್ದಾರೆ.

31 ಮಸೀದಿಗಳು, 4 ಚರ್ಚುಗಳು, ಹಲವಾರು ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಲಾಗಿದೆ. ಆಹಾರ, ನೀರು, ಇಂಧನ, ವಿದ್ಯುತ್ ಮತ್ತು ಔಷಧಿಗಳ ಮೇಲೆ ಸಂಪೂರ್ಣ ದಿಗ್ಧಂಧನ ಹೇರಲಾಗಿದೆ. ಇಸ್ರೇಲ್‌ನ ಈ ಸಾಮೂಹಿಕ ಶಿಕ್ಷೆಯಿಂದಾಗಿ ಮಾನವ ಕುಲವೇ ನಾಚಿಕೆಪಟ್ಟುಕೊಳ್ಳುವಂತಾಗಿದೆ. ಇಸ್ರೇಲ್‌ನ ಈ ಕ್ರೌರ್ಯ ಮತ್ತು ಬರ್ಬರತೆಯ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಜಗತ್ತಿನಾಧ್ಯಂತ ಬೃಹತ್‌ ಪ್ರತಿಭಟನೆಗಳು ನಡೆಯುತ್ತಿದೆ.

ಇಸ್ರೇಲ್ 75 ವರ್ಷಗಳ ಹಿಂದೆ ಫೆಲೆಸ್ತೀನ್ ಮೇಲೆ ಅತಿಕ್ರಮಣ ಮಾಡಿರುವುದೇ ಈ ಸಮಸ್ಯೆಗೆ ಮೂಲ ಕಾರಣ. 2500 ವರ್ಷಗಳಿಗಿಂತಲೂ ಹೆಚ್ಚು ಕಾಲ ಅಲ್ಲಿ ವಾಸಿಸುತ್ತಿದ್ದ ಫೆಲೆಸ್ತೀನಿ ಅರಬ್ ಮೂಲ ನಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ನಡೆಸಿ, ಅವರ ತಾಯ್ನಾಡಿನಿಂದಲೇ ಹೊರಹಾಕಲ್ಪಟ್ಟಿದ್ದಾರೆ. ಅಂದಿನಿಂದ ಇಸ್ರೇಲ್ ವಿಸ್ತರಣೆ, ಹಿಂಸಾತ್ಮಕ ಹೊರಹಾಕುವಿಕೆ, ವಸಾಹತು ನಿರ್ಮಾಣ, ಜನಾಂಗೀಯತೆ ಮತ್ತು ನರಮೇಧದ ನೀತಿಯನ್ನು ಅಭ್ಯಾಸ ಮಾಡಿಕೊಂಡು ಬಂದಿದೆ. ಜೆರುಸಲೇಮ್‌ನಲ್ಲಿರುವ ಪವಿತ್ರ ಆರಾಧನಾಲಯ ಅಲ್-ಕುದ್ಸ್ ಅನ್ನು ಪದೇ ಪದೇ ಅಪವಿತ್ರಗೊಳಿಸಲಾಗಿದೆ. ಇಸ್ರೇಲ್ ತನ್ನ ಗ್ರೇಟರ್ ಇಸ್ರೇಲ್ ಎಂಬ ಗುರಿಯನ್ನು ಸಾಧಿಸುವ ಇರಾದೆಯಿಂದ ಅಂತಾರಾಷ್ಟ್ರೀಯ ಕಾನೂನು, ನ್ಯಾಯ ಮತ್ತು ವಿಶ್ವಸಂಸ್ಥೆಯ ನಿರ್ಣಯಗಳಿಗೆ ಬಹಿರಂಗ ವಿರೋಧ ತೋರುತ್ತಾ ಫೆಲೆಸ್ತೀನ್ ಗಡಿ ಮತ್ತು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ.
ಆದ್ದರಿಂದ ನಿಜವಾದ ಸಮಸ್ಯೆ ಅತಿಕ್ರಮಣವೇ ಹೊರತು ಪ್ರತಿರೋಧವಲ್ಲ. ಅಂತಾರಾಷ್ಟ್ರೀಯ ಸಮುದಾಯ, ಅದರಲ್ಲೂ ವಿಶೇಷವಾಗಿ ಮುಸ್ಲಿಮ್ ರಾಷ್ಟ್ರಗಳು ಒಗ್ಗೂಡಿ ಈ ಅನ್ಯಾಯ ಮತ್ತು ದಬ್ಬಾಳಿಕೆಯನ್ನು ಕೊನೆಗಾಣಿಸಲು ನಿರಂತರ ಒತ್ತಡವನ್ನು ಹಾಕಬೇಕಿದೆ.

ಕೂಡಲೇ ಕದನ ವಿರಾಮ ಘೋಷಿಸುವುದು, ಮುತ್ತಿಗೆಯನ್ನು ತೆಗೆದು ಹಾಕುವುದು, ಮಾನವೀಯ ಪರಿಹಾರವನ್ನು ಒದಗಿಸುವುದು, ಮೂಲಭೂತ ಸೌಕರ್ಯಗಳ ಮರುಸ್ಥಾಪನೆ, ನಾಗರಿಕರಿಗೆ ರಕ್ಷಣೆ, ಅಂತಾರಾಷ್ಟ್ರೀಯ ಕಾನೂನಿಗೆ ಗೌರವ ಮತ್ತು ಪರಸ್ಪರ ಸಮಾಲೋಚನೆಯ ಕೆಲಸವನ್ನು ಯಾವುದೇ ರೀತಿಯ ತಡ ಮಾಡದೆ ಶೀಘ್ರವಾಗಿ ಕಾರ್ಯಗತ ಮಾಡಬೇಕು. ಸ್ವತಂತ್ರ ಫೆಲೆಸ್ತೀನ್ ದೇಶವನ್ನು ಸ್ಥಾಪಿಸುವುದು ಮತ್ತು ಅನ್ಯಾಯ ಅಕ್ರಮಣವನ್ನು ಕೊನೆಗೊಳಿಸುವುದು ಶಾಂತಿ ಸ್ಥಾಪನೆಗೆ ಏಕೈಕ ಶಾಶ್ವತ ಮಾರ್ಗವಾಗಿದೆ.

ಭಾರತವು ದೀರ್ಘಾವಧಿಯಿಂದ ಫೆಲೆಸ್ತೀನ್ ಹಿತಾಸಕ್ತಿಯನ್ನು ಬೆಂಬಲಿಸುವ ಮತ್ತು ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವ ನೀತಿಯನ್ನು ಅನುಸರಿಸಿದೆ. ವಿಶ್ವಸಂಸ್ಥೆಯ ನಿರ್ಣಯಗಳು ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ನಮ್ಮ ದೇಶವು ಮಧ್ಯವರ್ತಿಯ ಪಾತ್ರವನ್ನು ವಹಿಸಬೇಕು. ಗಾಝಾದ ದುಃಖಿತ ಸಂತ್ರಸ್ತರಿಗೆ ನೆರವಿನ ರವಾನೆಯು ಸ್ವಾಗತಾರ್ಹ ಹೆಜ್ಜೆಯಾಗಿದೆ. ಸಂತ್ರಸ್ತರನ್ನು ಬೆಂಬಲಿಸುವುದು ಮತ್ತು ದಬ್ಬಾಳಿಕೆ ಮಾಡುವವರನ್ನು ವಿರೋಧಿಸುವುದು ನಾಗರಿಕರ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಾಗಿದ್ದು, ಅದನ್ನು ರಕ್ಷಿಸಬೇಕು ಎಂದು ಆಗ್ರಹಿಸಲಾಯಿತು.

ಡಾ. ಬೆಳಗಾಮಿ ಮುಹಮ್ಮದ್ ಸಾದ್, ಅಧ್ಯಕ್ಷರು, (ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ)
ಶ್ರೀ ಬಿ. ಟಿ. ವೆಂಕಟೇಶ್ (ನ್ಯಾಯವಾದಿ)REACH ಲಾಯರ್ಸ್
ಮೌಲಾನಾ ಮನ್ಸೂದ್ ಇಮಾನ್ ರಶಾದಿ, (ಇಮಾಮ್, ಬೆಂಗಳೂರು ಸಿಟಿ ಜಾಮಿಯಾ ಮಸೀದಿ)
ಮೌಲಾನಾ ಇಪ್ತಿಕಾರ್ ಖಾಸ್ಮಿ, (ಅಧ್ಯಕ್ಷರು, ಜಮೀಯತುಲ್ ಉಲಮಾ ಕರ್ನಾಟಕ)
ಶ್ರೀ ಅಕ್ಬರ್ ಅಲಿ. (ಮಾಸ್ ಮೀಡಿಯಾ)
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.