ಗಾಝಾದ ಅತಿದೊಡ್ಡ ಆಸ್ಪತ್ರೆ ಅಲ್-ಶಿಫಾದ ಮೇಲೆ ಇಸ್ರೇಲ್ ದಾಳಿ: ನೂರಾರು ಮಂದಿ ಬಲಿ

0
733

ಸನ್ಮಾರ್ಗ ವಾರ್ತೆ

ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಂದುವರಿದಿರುವಂತೆ ಗಾಝಾದ ಪ್ರಮುಖ ಆಸ್ಪತ್ರೆ ಅಲ್-ಶಿಫಾದ ಮೇಲೆ ಇಸ್ರೇಲ್ ಡ್ರೋನ್ ದಾಳಿ ನಡೆಸಿದೆ.

ಅಲ್-ಶಿಫಾ ಆಸ್ಪತ್ರೆಯ ಮುಂಭಾಗದಲ್ಲಿ ರೋಗಿಗಳನ್ನು ಚಿಕಿತ್ಸೆಗಾಗಿ ರಫಾ ಕ್ರಾಸಿಂಗ್‌ಗೆ ಕರೆದೊಯ್ಯಲು ತಯಾರಿ ನಡೆಸುತ್ತಿದ್ದಾಗಲೇ ಈ ದಾಳಿ ನಡೆಸಲಾಗಿದ್ದು, ನೂರಾರು ಮಂದಿ ಬಲಿಯಾಗಿರುವುದಾಗಿ ವರದಿಯಾಗಿದೆ. ಆದರೆ, ಇನ್ನೂ ನಿಖರವಾದ ಅಂಕಿ ಅಂಶ ತಿಳಿದು ಬಂದಿಲ್ಲ ಎಂದು ಅಲ್-ಜಝೀರಾ ವರದಿ ಮಾಡಿದೆ.

ಡ್ರೋನ್ ದಾಳಿಯಿಂದ ಅಪಾರ ಸಾವುನೋವುಗಳು ಸಂಭವಿಸಿದೆ ಎಂದು ಟೈಮ್ಸ್ ಆಫ್ ಗಾಝಾ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಅಲ್-ಶಿಫಾ ಆಸ್ಪತ್ರೆಯ ಮುಂಭಾಗದಲ್ಲಿ ನೂರಾರು ಮಂದಿ ರಕ್ತಸಿಕ್ತವಾಗಿ ಬಿದ್ದಿರುವುದು ಕಂಡು ಬಂದಿದೆ.

ಅಲ್-ಶಿಫಾ ಆಸ್ಪತ್ರೆಯು ಗಾಝಾ ಪಟ್ಟಿಯಲ್ಲಿರುವ ಅತಿದೊಡ್ಡ ಆಸ್ಪತ್ರೆಯಾಗಿದೆ. ಈಗಾಗಲೇ ಈ ಆಸ್ಪತ್ರೆಯಲ್ಲಿ ರೋಗಿಗಳು ತುಂಬಿ ತುಳುಕುತ್ತಿದ್ದಾರೆ.

ಹಾಗಾಗಿ, ಹೆಚ್ಚಿನ ಚಿಕಿತ್ಸೆ ಬೇಕಾಗಿದ್ದವರನ್ನು ರಫಾ ಗಡಿಯ ಮೂಲಕ ಈಜಿಪ್ಟ್‌ಗೆ ಆಂಬುಲೆನ್ಸ್‌ಗಳ ಮೂಲಕ ಕಳುಹಿಸಲು ಪ್ಯಾಲೇಸ್ತೀನಿಯನ್ ಆರೋಗ್ಯ ಸಚಿವಾಲಯವು ವ್ಯವಸ್ಥೆ ಮಾಡುತ್ತಿತ್ತು. ಇದೇ ವೇಳೆ ಇಸ್ರೇಲ್ ಡ್ರೋನ್ ದಾಳಿ ನಡೆಸುವ ಮೂಲಕ, ಅಮಾನವೀಯ ಕೃತ್ಯ ಎಸಗಿದೆ.

ಈ ಹಿಂದೆ ಇಸ್ರೇಲ್ ಅಲ್ ಅಹ್ಲಿ ಆಸ್ಪತ್ರೆಯ ಮೇಲೂ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ, 500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.