11 ತಿಂಗಳಿನಿಂದ ಸಂಬಳ ಇಲ್ಲ: ಸೌದಿ ಅರೇಬಿಯದಲ್ಲಿ ಸಂಕಷ್ಟಕ್ಕೆ ತುತ್ತಾದ 200 ಕಾರ್ಮಿಕರು

0
794

ಅಲ್‍ಕೋಬರ್,ಎ.6: ಕೆಲಸ ಮಾಡುವ ಕಂಪೆನಿ ನಷ್ಟಕ್ಕೊಳಗಾಗಿದ್ದು ಕಳೆದ ಹನ್ನೊಂದು ತಿಂಗಳಿನಿಂದ ಸಂಬಳ ಸಿಗದೆ ಕಂಪೆನಿಯ 200 ಕಾರ್ಮಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಅಲ್‍ಕೋಬರ್ ರಾಕ್ಕದಲ್ಲಿರುವ ಒಂದು ಕಂಪೆನಿಯ ಸಂಕಷ್ಟ ಇದು. ಈ ಹಿಂದೆ ಲಾಭದಲ್ಲಿ ನಡೆಯುತ್ತಿದ್ದ ದೊಡ್ಡ ಕಂಪೆನಿ, ಅದರ ಮಾಲಕರ ನಿಧನಾನಂತರ ಮಕ್ಕಳ ಕೈಗೆ ಬಂದಾಗ ಅಸ್ತವ್ಯವಸ್ತ ನಿರ್ವಹಣೆಯಿಂದ ದಿವಾಳಿಯೆದ್ದಿದೆ. ನಂತರ ಕೆಲಸಗಾರರಿಗೆ ಸಂಬಳ, ಸೌಲಭ್ಯಗಳಿಲ್ಲ ಮಾತ್ರವಲ್ಲ ಕಂಪೆನಿ ಮುಚ್ಚುವ ಹಂತಕ್ಕೆ ಬಂದು ನಿಂತಿದೆ. ಭಾರತ, ನೇಪಾಳ, ಫಿಲಿಪ್ಪೀನ್ಸ್, ಬಾಂಗ್ಲಾದೇಶ ಮುಂತಾದ ಕಡೆಯ 200ರಷ್ಟು ಕಾರ್ಮಿಕರು ಸೌದಿಯ ವಿವಿಧ ಕಡೆಗಳ ಕ್ಯಾಂಪ್‍ಗಳಲ್ಲಿ ಆಹಾರಕ್ಕೂ ಗತಿಯಿಲ್ಲದೆ ನರಳುವಂತಾಗಿದೆ.

ಇನ್ಶೂರೆನ್ಸ್ ನವೀಕರಣಗೊಳ್ಳದ್ದರಿಂದ ರೋಗಿಗಳಿಗೆ ಚಿಕಿತ್ಸೆ ಲಭಿಸುತ್ತಿಲ್ಲ. ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ ಹಲವು ಕಾರ್ಮಿಕರು ಲೇಬರ್ ಕೋರ್ಟಿನಲ್ಲಿ ಕೇಸು ದಾಖಲಿಸಿದ್ದಾರೆ. ಆದರೆ ಕಂಪೆನಿ ಕೋರ್ಟಿನಲ್ಲಿ ಪಾಪರ್ ಅರ್ಜಿ ಸಲ್ಲಿಸಿ ಸಮಯವಕಾಶ ಕೇಳಿದೆ. ಕೇಸು ವಿಳಂಬವಾಗುತ್ತಾ ಹೋಗುತ್ತಿದೆ. ಕಾರ್ಮಿಕರ ಬವಣೆಯನ್ನು ಭಾರತದ ದೂತವಾಸದ ಗಮನಕ್ಕೆ ತರಲಾಗಿದ್ದು, ಅದು ಮತ್ತು ಸೌದಿ ಕಾರ್ಮಿಕ ಸಚಿವಾಲಯ ಸೇರಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸುತ್ತಿದೆ.