ತಿರುವನಂತಪುರಂ, ಎ. 9: ಕಲಿಯುವ ಹಕ್ಕಿಯಾಗಿ ಅಂಗವಿಕಲ ಮುಹಮ್ಮದ್ ಆಸೀಂನ ಹೋರಾಟ ಮುಂದುವರಿದಿದ್ದು ಆತನ ವ್ಹೀಲ್ ಚೇರ್ ಯಾತ್ರೆ ಕೇರಳದ ರಾಜಧಾನಿ ತಿರುವನಂತಪುರಂಗೆ ತಲುಪಿತು. ಸರಕಾರಿ ಯುಪಿ ಸ್ಕೂಲನ್ನು ಹೈಸ್ಕೂಲಾಗಿ ಅಪ್ಗ್ರೇಡ್ ಮಾಡುವಂತೆ ಆಗ್ರಹಿಸಿ ಕಲ್ಲಿಕೋಟೆಯ ವೆಳಿಮಣ್ಣ ಯುಪಿ ಸ್ಕೂಲ್ನಲ್ಲಿ ಏಳನೆ ತರಗತಿವರೆಗೆ ಕಲಿತ ಈ ಪುಟ್ಟ ಬಾಲಕ ಮಂಗಳವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ತನ್ನ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಆಸಿಂ ಬಯಸುತ್ತಿದ್ದಾನೆ.
ಆಸೀಂನ ಜಾಥಾಕ್ಕೆ ವಿವಿಧ ಸ್ಥಳಗಳಲ್ಲಿ ಅದ್ಭುತ ಸ್ವಾಗತ ಸಿಕ್ಕಿದೆ. ಏಳನೆ ತರಗತಿಯಲ್ಲಿ ತನ್ನ ವಿದ್ಯಾಭ್ಯಾಸ ಕೊನೆಗೊಂಡಿದ್ದರಿಂದ ಆಸೀಂ ವ್ಯಾಕುಲಗೊಂಡಿದ್ದಾನೆ. ತನ್ನ ಬೇಡಿಕೆಯನ್ನು ಮುಂದಿಟ್ಟು ಮಾನವ ಹಕ್ಕು ಆಯೋಗ ಮತ್ತು ಮಕ್ಕಳ ಆಯೋಗಕ್ಕೂ ಹೈಕೋರ್ಟಿಗೂ ಮನವಿ ಸಲ್ಲಿಸಿದ್ದು ಅವುಗಳ ಆಸೀಂ ಪರ ನಿಂತಿವೆ. ಸರಕಾರ ತನಗೆ ಸಹಕರಿಸಬೇಕೆಂದು ಆಸೀಂ ಹೇಳುತ್ತಿದ್ದಾನೆ.
ಶೇ.90ರಷ್ಟು ಅಂಗವಿಕಲನಾಗಿರುವ ಆಸೀಂನ ಹೋರಾಟ ಕೇರಳಕ್ಕೆ ಅಪಮಾನವೆಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದರು. ಆತನ ಯಾತ್ರೆಯ ಸಮಾರೋಪಕ್ಕೆ ಸೆಕ್ರಟರಿಯೇಟ್ ಮುಂದೆ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಹೈಕೋರ್ಟು ಆದೇಶಿಸಿಯೂ ಈ ವರೆಗೆ ಸರಕಾರ ಯುಪಿ ಸ್ಕೂಲನ್ನು ಅಪ್ಗ್ರೇಡ್ ಮಾಡಿಲ್ಲ. ಹೈಕೋರ್ಟಿನ ಆದೇಶದ ವಿರುದ್ಧ ಸರಕಾರ ಅಫೀಲು ಸಲ್ಲಿಸಿದೆ. ಈ ಮಗುವಿಗೆ ನ್ಯಾಯ ನಿರಾಕರಿಸಿದರೆ ಸರಕಾರ ಪರಿತಪಿಸಬೇಕಾದೀತೆಂದು ಚೆನ್ನಿತ್ತಲ ಹೇಳಿದರು.
ಜವಾಹರ್ ಬಾಲವೇದಿಕೆ ಕಾರ್ಯಕರ್ತರು ಆಸೀಂಗೆ ಪಠ್ಯಪುಸ್ತಕಗಳನ್ನು ನೀಡಿ ಬೆಂಬಲ ಸೂಚಿಸಿದರು. ಆಸೀಂಗೆ ಹುಟ್ಟುವಾಗಲೇ ಎರಡು ಕೈಗಳಿಲ್ಲ. ಜೊತೆಗೆ ಕಾಲುಗಳು ಕೂಡ ದುರ್ಬಲವಾಗಿದೆ. ಆತ ವ್ಹೀಲ್ ಚೇರ್ನಲ್ಲಿ ಚಲಿಸಬೇಕಾಗಿದೆ. ಇವೆಲ್ಲವನ್ನು ಪರಿಗಣಿಸಿ ಕೇರಳ ಹೈಕೋರ್ಟು ಯುಪಿ ಸ್ಕೂಲನ್ನು ಹೈಸ್ಕೂಲನ್ನಾಗಿ ಅಪ್ಗ್ರೇಡ್ ಮಾಡಬೇಕೆಂದು ಆದೇಶಿತ್ತು. ತೀರ್ಪಿನ ವಿರುದ್ಧ ಕೇರಳ ಸರಕಾರ ಅಪೀಲು ಹೋಗಿದೆ.













