ಇಸ್ರೇಲ್ ಕಡೆಗೆ ಡ್ರೋನ್‌ಗಳನ್ನು ಹಾರಿಸಿದ ಇರಾನ್

0
806

ಸನ್ಮಾರ್ಗ ವಾರ್ತೆ

ಇಸ್ರೇಲ್‌ ಮೇಲೆ ಇರಾನ್‌ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಅಮೇರಿಕ ಹೇಳಿಕೆ ನೀಡಿದ ಬೆನ್ನಲ್ಲೇ ಇಸ್ರೇಲ್ ಕಡೆಗೆ ಇರಾನ್ ಹಲವು ಡ್ರೋನ್‌ಗಳನ್ನು ಹಾರಿಸಿದ್ದು, ಕೆಲವೇ ಗಂಟೆಗಳಲ್ಲಿ ಅದು ತಲುಪಲಿದೆ ಎಂದು ವರದಿಯಾಗಿದೆ.

ಅಲ್ಲದೇ, ಇರಾನ್ ಹಾರಿಸಿರುವ ಡ್ರೋನ್‌ಗಳು ಇಸ್ರೇಲ್ ಅನ್ನು ಗುರಿಯಾಗಿಸಿ ಬರುತ್ತಿರುವುದನ್ನು ಇಸ್ರೇಲ್ ಸೇನೆಯು ಖಚಿತಪಡಿಸಿದೆ.

ಈ ಬಗ್ಗೆ ಐಡಿಎಫ್ ಅಧಿಕೃತ ಹೇಳಿಕೆ ನೀಡಿದ್ದು, “ಇರಾನ್ ತನ್ನ ಭೂಪ್ರದೇಶದಿಂದ ಇಸ್ರೇಲ್ ಕಡೆಗೆ ಮಾನವರಹಿತ ಡ್ರೋನ್‌ಗಳನ್ನು ಹಾರಿಸಿದೆ‌. ಇವು ಇಸ್ರೇಲಿನ ಭೂಭಾಗವನ್ನು ತಲುಪಲು ಹಲವಾರು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಸಾರ್ವಜನಿಕರು ಜಾಗರೂಕರಾಗಿರಬೇಕು ಮತ್ತು ಸೇನೆಯ ಅಧಿಕಾರಿಗಳು ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಇರಾನಿನ ಡ್ರೋನ್‌ಗಳು ಇಸ್ರೇಲಿನ ಪ್ರದೇಶವನ್ನು ತಲುಪದಂತೆ ತಡೆಯಲು ನಾವು ಪ್ರಯತ್ನಿಸುತ್ತೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇರಾನ್ ಕೇವಲ ಡ್ರೋನ್‌ಗಳು ಮಾತ್ರವಲ್ಲದೇ, ಕ್ಷಿಪಣಿಗಳನ್ನು ಕೂಡ ಹಾರಿಸಿರುವುದಾಗಿ ವರದಿಯಾಗಿದೆ.

ಈ ಡ್ರೋನ್‌ಗಳ ದಾಳಿಯ ಬೆನ್ನಲ್ಲೇ ಟೆಹ್ರಾನ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜೋರ್ಡಾನ್ ಕೂಡ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿರುವುದಾಗಿ ರಾಯಿಟರ್ಸ್‌‌‌ ವರದಿ ಮಾಡಿದೆ.

ಕ್ಷಿಪಣಿ ಮತ್ತು ಡ್ರೋನ್‌ ಮೂಲಕ ಇರಾನ್‌ ಇಸ್ರೇಲ್‌ ಮೇಲೆ ದಾಳಿ ಮಾಡಿದೆ. ಇರಾನ್‌ ಬಳಿ ಬ್ಯಾಲಿಸ್ಟಿಕ್‌ ಮತ್ತು ಕ್ರೂಸ್‌ ಕ್ಷಿಪಣಿಗಳಿದ್ದು, ಇವು 2 ಸಾವಿರ ಕಿ.ಮೀ ದೂರದಲ್ಲಿರುವ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.

ಡಮಾಸ್ಕಸ್‌ನಲ್ಲಿನ ದೂತಾವಾಸದಲ್ಲಿ ಕಳೆದ ವಾರ ಇರಾನಿನ ಹಿರಿಯ ಸೇನಾಧಿಕಾರಿಯೊಬ್ಬರನ್ನು ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ ಇರಾನ್, ಇಸ್ರೇಲ್ ಮೇಲೆ ದಾಳಿ ನಡೆಸಲು ಮುಂದಾಗಿದೆ.

ರವಿವಾರದೊಳಗೆ ಪ್ರತೀಕಾರದ ದಾಳಿ ನಡೆಯಬಹುದು ಎಂದು ಅಮೆರಿಕ ಹಾಗೂ ಗುಪ್ತಚರ ಮೂಲಗಳು ಮುನ್ನೆಚ್ಚರಿಕೆ ನೀಡಿದ್ದವು. ಈ ದಾಳಿಯು ಪೂರ್ಣ ಪ್ರಮಾಣದ ಪ್ರಾಂತೀಯ ಯುದ್ಧಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಮಾಹಿತಿ ನೀಡಿದ್ದ ಅಮೆರಿಕವು ಈಗಾಗಲೇ ತನ್ನ ಯುದ್ಧ ನೌಕೆಯನ್ನು ಇಸ್ರೇಲ್‌ಗೆ ಕಳುಹಿಸಿದೆ.