ಫೆಲಸ್ತೀನ್ ಕುಟುಂಬದ ಮೇಲೆ ಮುಖವಾಡಧಾರಿ ಇಸ್ರೇಲಿಗಳ ಕಲ್ಲೆಸೆತ

0
854

ವೆಸ್ಟ್‌ಬ್ಯಾಂಕ್,ಎ.16: ವೆಸ್ಟ್‌ಬ್ಯಾಂಕಿನಲ್ಲಿ ಅನಧಿಕೃತ ವಾಸ್ತವ್ಯ ಹೊಂದಿರುವ ಇಸ್ರೇಲಿನ ಮುಖವಾಡಧಾರಿ ದುಷ್ಕರ್ಮಿಗಳು ಫೆಲಸ್ತೀನಿನ ಕುಟುಂಬವೊಂದರ ಮೇಲೆ ಕಲ್ಲೆಸೆಯುತ್ತಿರುವ ದೃಶ್ಯ ಬಹಿರಂಗವಾಗಿದೆ. ಶನಿವಾರ ಫೆಲಸ್ತೀನಿನ ನಬ್ಲಸ್ ಗ್ರಾಮದ ಸಮೀಪದ ಉರಿಫಿ ಎಂಬಲ್ಲಿ ಮಹಿಳೆ ಮತ್ತು ಮಕ್ಕಳಿದ್ದ ಕುಟುಂಬವೊಂದರ ಮೇಲೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಮುಖವಾಡ ಧರಿಸಿದ ಇಸ್ರೇಲಿ ದುಷ್ಕರ್ಮಿಗಳು ಯಿತ್ಸಾರ್‍ನಿಂದ ಬಂದಿದ್ದರು ಎಂದು ಇಸ್ರೇಲಿನ ಮಾನವ ಹಕ್ಕು ಸಂಘಟನೆ ತಿಳಿಸಿದೆ.

ಓರ್ವ ಮಹಿಳೆ ತನ್ನ ಮಗುವನ್ನು ಎತ್ತಿಕೊಂಡು ಕಾರಿಗೆ ಹತ್ತುತ್ತಿದ್ದಾಗ ದುಷ್ಕರ್ಮಿಗಳು ಕಲ್ಲಿನ ಸುರಿಮಳೆಗೈದಿದ್ದಾರೆ. ಅಪಾಯವನ್ನರಿತ ನಂತರ ಮಹಿಳೆಯ ಪತಿ ಮತ್ತು ಇತರರು ಕಾರಿನಿಂದ ಇಳಿದು ಓಡಿ ಹೋಗಿ ಪಾರಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಕಲ್ಲೆಸೆತದಿಂದ ಇವರ ಕಾರಿನ ಸಮೀಪದಲ್ಲಿ ನಿಲ್ಲಿಸಿದ್ದ ಬೇರೆ ಕಾರುಗಳು ಹಾನಿಗೀಡಾಗಿವೆ. ದುಷ್ಕರ್ಮಿಗಳಲ್ಲಿ ಯಾರನ್ನೂ ಈವರೆಗೆ ಬಂಧಿಸಲಾಗಿಲ್ಲ ಎಂದು ವರದಿಯಾಗಿದೆ.