ಮೈಸೂರು,ಎ,28:ಶ್ರೀಲಂಕಾದಲ್ಲಿ ಕಳೆದ ವಾರ ನಡೆದ ಸರಣಿ ಸ್ಫೋಟದಲ್ಲಿ ನೂರಾರು ಮಂದಿ ಸಾವನ್ನಪ್ಪಿದ ಘಟನೆಯನ್ನು ಖಂಡಿಸಿದ್ದಲ್ಲದೇ, ಇಂದು ನಗರದ ಇತಿಹಾಸ ಪ್ರಸಿದ್ಧ ಸೈಂಟ್ ಫಿಲೋಮಿನಾ ಚರ್ಚ್ ನಲ್ಲಿ ಇಂದು ಬೆಳಗ್ಗೆ ನಡೆದ ಪ್ರಾರ್ಥನೆಯ ಸಂದರ್ಭದಲ್ಲಿ ಚರ್ಚ್ ನ ಹೊರಗಡೆ ನಿಂತು ಮೈಸೂರು ಜಮಾಅತೆ ಇಸ್ಲಾಮೀ ಹಿಂದ್ ನವರು “ಕ್ರೈಸ್ತ ಸಮುದಾಯದ ಜೊತೆಗೆ ನಾವಿದ್ದೇವೆ” ಎಂದು ಸಾರಿದರು.
ದ್ವೀಪ ರಾಷ್ಟ್ರವಾದ ಶ್ರೀಲಂಕಾದಲ್ಲಿ ಕಳೆದ ರವಿವಾರ ಚರ್ಚ್, ಹೊಟೇಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 250ಕ್ಕೂ ಅಧಿಕ ಮಂದಿ ಪ್ರಾಣತೆತ್ತಿದ್ದರು. ಈ ಘಟನೆಯನ್ನು ವಿವಿಧ ದೇಶದ ನಾಯಕರು ಖಂಡಿಸಿ, ಭಯೋತ್ಪಾದನೆಯನ್ನು ಮಟ್ಟ ಹಾಕಲು ಕರೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಸೈಂಟ್ ಫಿಲೋಮಿನಾ ಚರ್ಚ್ ನ ಆವರಣದಲ್ಲಿ ಮೈಸೂರು ಘಟಕದ ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಮುನವ್ವರ್ ಪಾಷಾ ರವರ ನೇತೃತ್ವದಲ್ಲಿ ಒಂದು ಗೂಡಿದ ಮುಸ್ಲಿಮರು, ಶ್ರೀಲಂಕಾದ ಘಟನೆಯನ್ನು ಖಂಡಿಸಿದ್ದಲ್ಲದೇ, “ಕ್ರೈಸ್ತ ಸಮುದಾಯದ ಜನರೊಂದಿಗೆ ನಾವಿದ್ದೇವೆ. ನಾವೆಲ್ಲರೂ ಜೊತೆಯಾಗಿದ್ದೇವೆ. ದ್ವೇಷದ ಭಾಷೆಯಿಂದ ನಮ್ಮನ್ನು ಪ್ರತ್ಯೇಕ ಮಾಡಲಾಗದು. ಘಟನೆಯನ್ನು ಎಲ್ಲಾ ಮುಸ್ಲಿಮರು ಖಂಡಿಸಿದ್ದಾರೆ. ಭಯೋತ್ಪಾದಕರಿಗೆ ಧರ್ಮ ಎಂಬುದಿಲ್ಲ. ಆದ್ದರಿಂದ ಭಯೋತ್ಪಾದನೆ ವಿರುದ್ಧ ನಾವೆಲ್ಲ ಒಂದಾಗಿದ್ದೇವೆ.” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ(ಡಬ್ಲ್ಯು ಪಿ ಐ) ಮೈಸೂರು ಅಧ್ಯಕ್ಷ ಶೇಖ್ ಝಬೀವುಲ್ಲಾ ಮಾತನಾಡಿದರು. ಚರ್ಚ್ ನ ಹೊರಗಡೆ ಈ ರೀತಿಯ ಏಕತೆಯ ಪ್ರದರ್ಶನವನ್ನು ಮಾಡಿದ ಮುಸ್ಲಿಂ ಸಮುದಾಯದ ಈ ನಡೆಗೆ ಕ್ರಿಶ್ಚಿಯನ್ನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸೈಂಟ್ ಫಿಲೋಮಿನಾ ಚರ್ಚ್ ನ ಧರ್ಮ ಗುರು ಫಾದರ್ ವಿಲಿಯಮ್ಸ್, ಭಯೋತ್ಪಾದನೆಯ ವಿರುದ್ಧ ಈ ರೀತಿಯ ಸಂದೇಶ ನೀಡಬೇಕಾದುದು ಇಂದಿನ ಅಗತ್ಯ. ಎಲ್ಲಾ ಭಿನ್ನತೆಗಳ ನಡುವೆ ಏಕತೆಯನ್ನು ಪ್ರದರ್ಶಿಸಿದ್ದಕ್ಕೆ ಮುಸ್ಲಿಂ ಸಮುದಾಯದ ನಡೆಗೆ ಧನ್ಯವಾದ” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಟಿ.ಎಸ್. ಅನ್ಸಾರ್ ಉಡುಪಿ, ಪ್ರೊಫೆಸರ್ ನೂರ್ ಅಹ್ಮದ್ ಖಾನ್, ಖಲೀಲುರ್ರಹ್ಮಾನ್, ಮುಹಮ್ಮದ್ ಅಸ್ಲಂ, ಫಝಲುರ್ರಹ್ಮಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.













