ಜೆರುಸಲೇಂ,ಮೇ 10: ಕಳೆದ ತಿಂಗಳು ಇಸ್ರೇಲಿನ ಸೇನೆ ನಡೆಸಿದ ಗುಂಡು ಹಾರಾಟದಲ್ಲಿ ಗಾಯಗೊಂಡ 1700 ಗಾಝ ನಿವಾಸಿಗಳ ಕಾಲನ್ನು ಕತ್ತರಿಸಬೇಕಾದೀತೆಂದು ವರದಿಯಾಗಿದೆ. ಗಾಝ ಆರೋಗ್ಯ ಕ್ಷೇತ್ರಕ್ಕೆ ಆವಶ್ಯಕವಾದ ನಿಧಿ ಇಲ್ಲ ಆದ್ದರಿಂದ ಸೂಕ್ತ ಚಿಕಿತ್ಸೆ ನೀಡಿ ಕಾಲು ಉಳಿಸಿಕೊಳ್ಳುವುದು ಕಷ್ಟವಾಗಿದೆ ಎಂದು ಫೆಲಸ್ತೀನಿನ ವಿಶ್ವಸಂಸ್ಥೆಯ ಹ್ಯೂಮನಿರೇಟಿಯನ್ ಕೋ-ಆರ್ಡಿನೇಟರ್ ಜೇಯ್ಮಿ ಮಕ್ಗೋಲ್ಡ್ರಿಕ್ ಹೇಳಿದರು. ಒಂದು ವರ್ಷದಲ್ಲಿ 29000 ಫೆಲಸ್ತೀನಿಯರು ಇಸ್ರೇಲಿನ ದಾಳಿಯಿಂದ ಗಾಯಗೊಂಡಿದ್ದಾರೆ ಎಂದರು. 7000 ಮಂದಿಗೆ ಗುಂಡೇಟಾಗಿದೆ. ಇವರಲ್ಲಿ ಹೆಚ್ಚಿನವರಿಗೆ ಕಾಲಿಗೆ ಗಾಯಗಳಾಗಿವೆ. ಇವರಲ್ಲಿ 1700 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ತುರ್ತಾಗಿ ಇವರಿಗೆ ಮಾಡಬೇಕಾಗುತ್ತದೆ.ಆದರೆ ಎರಡು ವರ್ಷದಿಂದ ಎಲುಬು ಮರುಸ್ಥಾಪನೆ ಶಸ್ತ್ರಕ್ರಿಯೆ ಸ್ಥಗಿತವಾಗಿದೆ ಎಂದು ಮಕ್ಗೋಲ್ಡ್ರಿಕ್ ಹೇಳಿದರು.
ಶಸ್ತ್ರಕ್ರಿಯೆ ಮಾಡಲಾಗದಿದ್ದರೆ ಇವರ ಕಾಲುಗಳನ್ನು ಕತ್ತರಿಸಬೇಕಾಗಬಹುದು. ನಿಧಿಯಿಲ್ಲ, ಮಾತ್ರವಲ್ಲ ಈ ಗಂಭೀರ ಚಿಕಿತ್ಸೆ ನಡೆಸುವ ನುರಿತ ವೈದ್ಯಕೀಯ ವಿಭಾಗವೂ ಗಾಝದಲ್ಲಿಲ್ಲ. ಒಂದು ವರ್ಷದಲ್ಲಿ 120 ಮಂದಿಯ ಕಾಲುಗಳನ್ನು ಕತ್ತರಿಸಲಾಯಿತು. ಇದರಲ್ಲಿ 20 ಮಕ್ಕಳೂ ಇದ್ದಾರೆ.ನಿಧಿಯ ಕೊರತೆ ಗಾಝದ ಆಸ್ಪತ್ರೆಯ ಚಿಕಿತ್ಸೆಯಲ್ಲಿ ಕೆಟ್ಟ ಪರಿಣಾಮ ಬೀರಿದೆ. ವಿಶ್ವಸಂಸ್ಥೆ 20 ದಶಲಕ್ಷ ಡಾಲರ್ನ ತುರ್ತು ನೆರವು ಕೇಳುತ್ತಿದೆ. ಫೆಲಸ್ತೀನಿಯರ ವರ್ಲ್ಡ್ ಫುಡ್ ಪ್ರೋಗ್ರಾಂನಲ್ಲಿಯೂ ಫಂಡ್ನ ಕೊರತೆ ಇದೆ. ಗಾಝದ 10 ಲಕ್ಷ ಮಂದಿಗೆ ಆಹಾರ ವಿತರಣೆಗೂ ಕೂಡ ಇದರಿಂದಾಗಿ ಅಡಚಣೆಯಾಗಿದೆ. ಫಂಡ್ ಕೊರತೆಯಿಂದ ವೆಸ್ಟ್ಬ್ಯಾಂಕ್, ಗಾಝದಲ್ಲಿ 1,93,00 ಮಂದಿಗೆ ಆಹಾರ ವಿತರಣೆಯನ್ನು ಕಡಿತಗೊಳಿಸಬೇಕಾಯಿತೆಂದು ವರ್ಲ್ಡ್ ಫುಡ್ ಪ್ರೋಗ್ರಾಂ ವಕ್ತಾರ ಹೆರ್ವಿ ವೆರ್ಹೂಸೆಲ್ ಹೇಳಿದರು. 27,000 ಮಂದಿಗೆ ಯಾವುದೂ ಸಿಕ್ಕೇ ಇಲ್ಲ. ಉಳಿದವರಿಗೆ ತಿಂಗಳಿಗೆ ಹತ್ತು ಡಾಲರ್ ಸಹಾಯದ ಬದಲು ಎಂಟು ಡಾಲರ್ ಸಿಕ್ಕಿದೆ. ಸರಾಸರಿ 4000 ಡಾಲರ್ ಸಾಲದಲ್ಲಿ ಗಾಝದ ಪ್ರತಿಯೊಂದೂ ಕುಟುಂಬ ಇವೆ. ಸರಾಸರಿ ಸಂಬಳ 400 ಡಾಲರ್ ಮಾತ್ರ ಆಗಿದೆ. ಇಲ್ಲಿ ಶೇ. 54ರಷ್ಟು ಜನರು ನಿರುದ್ಯೋಗಿಗಳು. ಸಂಬಳ ಸರಿಯಾಗಿ ಸಿಗದ್ದರಿಂದ ಆರೋಗ್ಯ ಕ್ಷೇತ್ರದಲ್ಲಿ ದುಡಿಯುವವರು ಕೂಡ ಕೆಲಸ ಬಿಟ್ಟು ಬೇರೆ ಕಡೆಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ ಎಂದು ಮೆಕ್ಗೋಲ್ಡ್ರಿಕ್ ಹೇಳಿದರು.












