ತಿರುವನಂತಪುರಂ,ಮೇ 15: ನೆಯ್ಯಾಟ್ಟಿಕರದಲ್ಲಿ ಜಪ್ತಿಗೆ ಹೆದರಿ ಪುತ್ರಿಯು ಆತ್ಮಹತ್ಯೆ ಮಾಡಿದ ನಂತರವೂ ಬ್ಯಾಂಕಿನಿಂದ ಫೋನ್ ಕರೆ ಮಾಡಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ವೈಷ್ಣವಿಯ ತಂದೆ ಚಂದ್ರನ್ ಹೇಳಿದರು. ಇದನ್ನು ಖಚಿತ ಪಡಿಸಿಕೊಳ್ಳಲು ಪುತ್ರಿಯ ಮೊಬೈಲ್ ಫೋನ್ ನೋಡಿದರೆ ಸಾಲುತ್ತದೆ. ಅವರು ಮಗಳ ಸಾವಿನ ಬಳಿಕವೂ ಜಫ್ತಿಯ ಬೆದರಿಕೆಯೊಡ್ಡಿ ಕರೆ ಮಾಡಿದರು ಎಂದು ಚಂದ್ರನ್ ಹೇಳಿದರು. ನಿನ್ನೆ ಸಂಜೆ ಬ್ಯಾಂಕಿನ ವಕೀಲರು ಕರೆ ಮಾಡಿದ್ದರು. ಆದರೆ ನಿನ್ನೆ ಬೆಳಗ್ಗೆ ಹನ್ನೊಂದು ಗಂಟೆಯಿಂದಲೇ ಫೋನ್ ಶುರುಮಾಡಿದ್ದಾರೆ. ಸಾಲದ ಹಣಕಟ್ಟದಿದ್ದರೆ ಮನೆ ಜಪ್ತಿ ಮಾಡುವುದಾಗಿ ಹೇಳಿದ್ದಾರೆ ಎಂದು ಚಂದ್ರನ್ ಹೇಳಿದರು.
ನೆಯ್ಯಾಟ್ಟಿಕರದಲ್ಲಿ ಜಪ್ತಿಗೆ ಹೆದರಿ ಸೋಮವಾರ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಧ್ಯಾಹ್ನ ಮೂರು ಗಂಟೆಗೆ ಮೈ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ಚಂದ್ರನ್ರ ಮಗಳು ವೈಷ್ಣವಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಅವರ ಪತ್ನಿ ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಂತರ ಕೊನೆಯುಸಿರೆಳೆದರು.
ಘಟನೆಯಲ್ಲಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಲು ಕೇರಳ ಸರಕಾರ ನಿರ್ಧರಿಸಿದ್ದು ಜಿಲ್ಲಾಧಿಕಾರಿಯ ವರದಿಯನ್ನು ಕಾಯುತ್ತಿದೆ. ಇಂದು ಇಬ್ಬರ ಮೃತದೇಹ ಸಂಸ್ಕಾರ ಕಾರ್ಯ ನಡೆಯಲಿದೆ.












