ಖದೀಜ ನುಸ್ರತ್, ಅಬು ಧಾಬಿ
ಝಕಾತ್ ಇಸ್ಲಾಮಿನ ಪ್ರಧಾನವಾದ ಸ್ತಂಭಗಳಲ್ಲಿ ಒಂದಾಗಿದೆ. ಇದು ಸಂಪತ್ತನ್ನು ಸಂಸ್ಕರಿಸುತ್ತದೆ ಮತ್ತು ವೃದ್ಧಿಸುತ್ತದೆ. ಝಕಾತ್ ನ ಮುಖ್ಯ ಉದ್ದೇಶ ಸಮಾಜದಲ್ಲಿ ಬಡತನವನ್ನು ನಿರ್ಮೂಲನಗೊಳಿಸಿ ಜನರ ನಡುವೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಉಂಟುಮಾಡುವುದಾಗಿದೆ. ಝಕಾತ್ ಆಧಾರಿತ ಆರ್ಥಿಕ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರಿಂದ ಮಾತ್ರ ಬಡತನವಿಲ್ಲದ ಒಂದು ಸಮಾಜವನ್ನು ಸೃಷ್ಟಿಸಲು ಸಾಧ್ಯ. ಇಸ್ಲಾಮ್ ಧರ್ಮವು ಬಡತನವನ್ನು ಧಾರ್ಮಿಕ ಸಮಸ್ಯೆಯಾಗಿ ಪರಿಗಣಿಸುತ್ತದೆ. ಅದರ ನಿರ್ಮೂಲನಕ್ಕಾಗಿ ಝಕಾತ್ ನ ಸಾಮೂಹಿಕ ಸಂಗ್ರಹ ಮತ್ತು ಸರಿಯಾದ ವಿತರಣೆ ಮಾಡುವ ಮೂಲಕ ಪರಿಹಾರವನ್ನು ಬಯಸುತ್ತದೆ. ಆದರೆ ಝಕಾತ್ ನ ಹಣವನ್ನು ದೈನಂದಿನ ಆವಶ್ಯಕತೆಗಳಿಗಾಗಿ ಖರ್ಚು ಮಾಡುವುದಕ್ಕಿಂತಲೂ ಅದನ್ನು ಬಂಡವಾಳ ವಾಗಿ ಉಪಯೋಗಿಸಿದರೆ ಫಲಪ್ರದವಾದ ಫಲಿತಾಂಶವನ್ನು ಕಾಣಲು ಸಾಧ್ಯ. ಈ ವರ್ಷ ಝಕಾತ್ ಪಡೆದವನು ಮುಂದಿನ ವರ್ಷ ಝಕಾತ್ ನೀಡಲು ಸಾಧ್ಯವಾಗಬೇಕು. ಇಲ್ಲದಿದ್ದರೆ ಝಕಾತ್ ನ ಹಣವನ್ನು ಪಡೆಯುವ ಬಡವರು ಬಡವರಾಗಿಯೇ ಉಳಿಯುತ್ತಾರೆ. ಝಕಾತ್ ಕುರಿತು ಸರಿಯಾದ ಜ್ಞಾನ, ಅದನ್ನು ಸಮಯಕ್ಕೆ ನೀಡಬೇಕೆಂಬುದರಲ್ಲಿ ತೋರುವ ನಿರ್ಲಕ್ಷ್ಯ, ಅದರ ಸಾಮೂಹಿಕ ನಿರ್ವಹಣಾ ವ್ಯವಸ್ಥೆ ಹಾಗು ಸಂಸ್ಥೆಗಳ ಕೊರತೆಯಿಂದ ಸಮಾಜದಲ್ಲಿ ಝಕಾತ್ ನಿಂದ ಯಾವ ಕ್ರಾಂತಿ ನಡೆಯಬೇಕಿತ್ತೋ ಅದು ಇಂದು ನಡೆಯುತ್ತಿಲ್ಲ.
ಝಕಾತ್ ನ್ನು ಶ್ರೀಮಂತರು ಹಣದಲ್ಲಿರುವ ಬಡವರ ಮತ್ತು ದುರ್ಬಲರ ಹಕ್ಕುಗಳೆಂದು ಪರಿಗಣಿಸಬೇಕು. ಬಡವರಿಗೆ ಕಡ್ಡಾಯವಾಗಿ ಪಾವತಿಸಬೇಕಾದ ಹಣವನ್ನು ನಾವು ಅವರೊಂದಿಗೆ ಮಾಡುವ ಔದಾರ್ಯ ಎಂದು ಚಿಂತಿಸಬಾರದು. ಇಂದು ರಮಝಾನಿನಲ್ಲಿ ನಮ್ಮ ಸಮುದಾಯದ ಜನರು ಟೋಪಿ ಹಾಗು ಬುರ್ಖ ಧರಿಸಿ ಶ್ರೀಮಂತರು ಎಸೆಯುವ ನಾಣ್ಯಗಳಿಗಾಗಿ ಪಟ್ಟಣದ ಬೀದಿ ಬೀದಿ ಸುತ್ತಾಡುತ್ತ ಬೇಡುವ ವ್ಯವಸ್ಥೆಯನ್ನು ಕೆಲವರು ಝಕಾತೆಂದು ಪರಿಗಣಿಸುತ್ತಾರೆ. ಆದರೆ ಇದು ಝಕಾತ್ ನ ಹೆಸರಿನಲ್ಲಿ ಭಿಕ್ಷುಕರನ್ನು ಪ್ರೊತ್ಸಾಹಿಸುತ್ತಿದ್ದೇವೆ. ನಾವು ನೀಡುವಂತಹ ಝಕಾತ್ ಸಮುದಾಯದ ಜನರ ಘನತೆ ಮತ್ತು ಆತ್ಮಾಭಿಮಾನವನ್ನು ರಕ್ಷಿಸುವಂತಿರಬೇಕು.
ನಮ್ಮಲ್ಲಿ ಇರುವ ಎಲ್ಲ ಹಣವನ್ನು ದಾನ ಮಾಡಲು ಯಾರೂ ನಿರ್ಬಂಧಿಸುವುದಿಲ್ಲ. ಹಣ್ಣು ತಿನ್ನುವಾಗ ನಾವು ಅದರ ಬೀಜವನ್ನು ಪುನಃ ಭೂಮಿಗೆ ಹಾಕಿದಾಗ ಅದರಲ್ಲಿ ಸಮೃದ್ಧಿಯುಂಟಾಗಿ ಸಾವಿರಾರು ಫಲಗಳು ಬಂದ ಹಾಗೆ ನಾವು ಮಡುವ ದಾನ ಧರ್ಮಗಳಿಂದ ಸಂಪತ್ತಿನಲ್ಲಿ ಸಮೃದ್ಧಿಯುಂಟಾಗುತ್ತದೆ.
“ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತನ್ನು ಖರ್ಚು ಮಾಡುವವರ ಖರ್ಚಿನ ಉಪಮೆ, ಒಂದು ಕಾಳನ್ನು ಬಿತ್ತಿ ಅದರಿಂದ ಏಳು ತೆನೆಗಳು ಹೊರಟು, ಪ್ರತಿಯೊಂದು ತೆನೆಯಲ್ಲಿ ನೂರು ಕಾಳುಗಳಿರುವಂತಿದೆ. ಇದೇ ರೀತಿಯಲ್ಲಿ ಅಲ್ಲಾಹ್ ತಾನುದ್ದೇಶಿಸಿದವನ ಕರ್ಮಗಳಿಗೆ ವೃದ್ಧಿಯನ್ನು ದಯಪಾಲಿಸುತ್ತಾನೆ. ಅವನು ಅತ್ಯಂತ ಉದಾರಿಯೂ ಸರ್ವಜ್ಞನೂ ಆಗಿರುತ್ತಾನೆ.” (ಅಲ್ ಬಕರಃ :261)
ದಾನಧರ್ಮ ಮಾಡಿದ ನಂತರ ಸಂಪತ್ತು ಕಡಿಮೆಯಾಗುವುದು ಅಥವಾ ನೀವು ದರಿದ್ರರಾಗುವಿರಿ ಎಂದು ಭಾವಿಸಬೇಡಿರಿ. ಪ್ರವಾದಿ ಮುಹಮ್ಮದ್(ಸ) ಹೇಳಿರುವರು: “ದಾನದಿಂದ ಸೊತ್ತಿನಲ್ಲಿ ಕೊರತೆ ಉಂಟಾಗುವುದಿಲ್ಲ.”
ದಾನಧರ್ಮ ನೀಡಬೇಕೆಂದು ದೃಢ ಸಂಕಲ್ಪ ಮಾಡಿದವರಿಗೆ ಮಾತ್ರ ಅದು ನೀಡಲು ಸಾಧ್ಯವಾಗುತ್ತದೆ. ಅಲ್ಲಾಹನು ಅವರಿಗೆ ನೀಡಿದುದರಲ್ಲಿ ಸಂತೃಪ್ತರಾಗುವರು. ಅವರಿಗೆ ಲೌಖಿಕ ವ್ಯಾಮೋಹವು ಕಡಿಮೆಯಾಗುವುದು. ಅವರ ಅನಾವಶ್ಯಕ ಖರ್ಚುಗಳು ಕಡಿಮೆಯಾಗುತ್ತಾ ಹೋಗುವುದು. ಅವರು ಸರಳ ಜೀವನವನ್ನು ಇಷ್ಟಪಡುವರು. ಕೊಡುವ ಕೈ ಯಾವಾಗಲು ಪಡೆಯುವ ಕೈಗಿಂತ ಶ್ರೇಷ್ಠವಾಗಿದೆ. ಇಹಲೋಕದಲ್ಲಿ ಒಬ್ಬನಿಗೆ ದಾನಧರ್ಮ ನೀಡುವಂತಹ ಸ್ಥಾನಮಾನ ಲಭಿಸುವುದು ಅತಿ ದೊಡ್ಡ ಅನುಗ್ರಹಗಳಲ್ಲಿ ಒಂದಾಗಿದೆ. ಆದರೆ ಅತಿಯಾಸೆ, ಅನಗತ್ಯ ಖರ್ಚುಗಳಿಂದ ಆ ಸ್ಥಾನವನ್ನು ಉಳಿಸಿಕೊಳ್ಳಲು ಎಷ್ಟೋ ಜನರು ವಿಫಲರಾಗುತ್ತಿದ್ದಾರೆ. ಖರ್ಚು ಮಾಡುವಾಗ ಅಗತ್ಯ, ಅನಗತ್ಯ ಯಾವುದು ಎಂದು ನೋಡಿ ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು. ನಮ್ಮಲ್ಲಿರುವ ವಾಹನ, ಮನೆ ಉಪಯೋಗಿ ಅಥವಾ ಇನ್ನಿತರ ಯಾವುದೇ ವಸ್ತುಗಳು ಕಡಿಮೆ ಬೆಲೆ ಅಥವಾ ಹಳೆ ಮಾಡೆಲ್ ಗಳಾಗಿದ್ದರೂ ಅದರಲ್ಲಿ ಸಮೃದ್ಧಿಯಿರುವುದು. ಯಾರ ಮುಂದೆ ಬೇಡಿ, ಬ್ಯಾಂಕ್ ನ ಮುಂದೆ ಕೈ ಚಾಚಿ ದಾರಿದ್ರ್ಯದ ಬಾಗಿಲನ್ನು ತೆರೆಯಬೇಡಿರಿ. ಈಗಾಗಲೇ ನಮ್ಮ ಸುತ್ತಮುತ್ತಲಿರುವ ಒಂದು ವಿಭಾಗ ಶ್ರೀಮಂತರು ತಮ್ಮಲ್ಲಿರುವ ಹಣವನ್ನು ತೋರಿಕೆಗಾಗಿ ಆಡಂಭರದ ವಿವಾಹ, ಮನೆಯ ಮೇಲ್ಛಾವಣಿ, ಗೋಡೆಯ ಅಲಂಕಾರ, ಕಪಾಟ್, ಕಪಾಟಿನಲ್ಲಿರುವ ವಸ್ತುಗಳಿಗೆ ಖರ್ಚು ಮಾಡಿ ತಮ್ಮ ಶ್ರೀಮಂತಿಕೆಯ ಪದವಿಯನ್ನು ಕಳೆದುಕೊಂಡಿದ್ದಾರೆ. ಉತ್ತಮ ಮನೆಯಲ್ಲಿ ವಾಸಿಸುವ, ಉತ್ತಮ ವಸ್ತ್ರ ಧರಿಸುವ, ಉತ್ತಮ ಆಹಾರ ತಿನ್ನುವವರೆಲ್ಲರೂ ಶ್ರೀಮಂತರಲ್ಲ. ತಮ್ಮ ಸಂಪಾದನೆಯಲ್ಲಿರುವ ಬಡವರ ಹಕ್ಕುಗಳನ್ನು ಸರಿಯಾಗಿ ನೀಡುವವರೇ ನಿಜವಾದ ಶ್ರೀಮಂತರು.
ಒಂದಕ್ಕಿಂತ ಹೆಚ್ಚು ಬಾರಿ ಹಜ್ಜ್ ಹಾಗೂ ಉಮ್ರ ಮಾಡಲು ಪೈಪೋಟಿ ನಡೆಯುತ್ತಿರುವ ಈ ಕಾಲದಲ್ಲಿ ಝಕಾತ್ ಹಾಗೂ ಸದಕಾ ನೀಡಲು ನಾವೇಕೆ ಪೈಪೋಟಿ ನಡೆಸುತ್ತಿಲ್ಲ? ಝಕಾತ್ ನ ಅರ್ಹ ಜನರ ಬಗ್ಗೆ ನಮಗೆ ಅನುಕಂಪ, ಕರುಣೆ ಇಲವೇ? ಅಥವಾ ಅದರ ಪ್ರತಿಫಲದ ಬಗ್ಗೆ ನಮಗೆ ತಿಳಿದಿಲ್ಲವೇ? ಕಿಲೋಗಟ್ಟಲೆ ಸ್ವರ್ಣ ವಿರುವ ಸಮುದಾಯದ ಶ್ರೀಮಂತರು ಸರಿಯಾಗಿ ಝಕಾತ್ ನೀಡುತ್ತಿದ್ದರೆ ಬಡತನ ಇರಲು ಸಾಧ್ಯವೇ ಎಂದು ಚಿಂತಿಸಲು ಸಕಾಲವಾಗಿದೆ.
ಹೆಚ್ಚಿನ ಮಾತಾಪಿತರು ತಮಗೆ ಸಿಗದಿರುವುದೆಲ್ಲವೂ ತಮ್ಮ ಮಕ್ಕಳಿಗೆ ಸಿಗಬೇಕೆಂದು ಬಯಸಿ ಅಥವಾ ತಮ್ಮ ಮರಣಾನಂತರ ಮಕ್ಕಳು ದರಿದ್ರರಾಗಬಾರದೆಂದು ತಮ್ಮ ವರಮಾನವನ್ನೆಲ್ಲಾ ಮಕ್ಕಳಿಗಾಗಿಯೇ ಖರ್ಚು ಮತ್ತು ಉಳಿತಾಯ ಮಾಡುತ್ತಾರೆ. ಆದರೆ ಹಣ ಮತ್ತು ಸ್ವದುಡಿಮೆಯ ಮಹತ್ವವನ್ನು ಅರಿಯದ ಮಕ್ಕಳಿಗೆ ಆ ಸಂಪತ್ತನ್ನು ಉಳಿಸಿಕೊಳ್ಳಲೂ ಸಾಧ್ಯವಾಗದ ಅದೆಷ್ಟೋ ಪ್ರತ್ಯಕ್ಷ ಘಟನೆಗಳೂ ಇವೆ. ನಾವು ಬದುಕಿರುವಷ್ಟು ಕಾಲಮಾತ್ರ ನಮ್ಮ ಸಂಪತ್ತಿನ ಒಡೆಯರಾಗಿರುತ್ತೇವೆ. ನಮ್ಮ ಭವಿಷ್ಯಕ್ಕಾಗಿ ಸಂಪತ್ತು ನಮ್ಮ ಅಧೀನದಲ್ಲಿರುವಾಗಲೇ ಉಳಿತಾಯ ಮಾಡಬೇಕು ಮತ್ತು ನಾವು ಇಂದು ನೀಡುವ ದಾನ ಧರ್ಮಗಳು ಮಾತ್ರ ಪರಲೊಕದಲ್ಲಿ ನಮಗೆ ಪತಿಫಲವಾಗಿ ಲಭಿಸುವುದು.
ನಮ್ಮ ಹಣದ ಬಗ್ಗೆ ಒಮ್ಮೆ ಅವಲೋಕನ ನಡೆಸುವ. ನನ್ನ ವಾರ್ಷಿಕ ವರಮಾನವೆಷ್ಟು? ಉಳಿತಾಯವೆಷ್ಟು? ಝಕಾತ್ ಅಥವಾ ದಾನಧರ್ಮ ನೀಡುವಷ್ಟು ಹಣ ನನ್ನಲಿದೆಯೇ? ನನ್ನ ಸಂಪಾದನೆಯಲ್ಲಿ ಒಂದು ಭಾಗವು ದಾನಧರ್ಮಕ್ಕೆ ಖರ್ಚಾಗುತ್ತಿದೆಯೇ? ಅಥವಾ ಅಗತ್ಯವಿಲ್ಲದೆ ದುಂದುವೆಚ್ಚವಾಗುತ್ತಿದೆಯೇ? ಅಥವಾ ಬಡ್ಡಿಯ ರೂಪದಲ್ಲಿ ಬ್ಯಾಂಕ್ ಸೇರುತ್ತಿದೆಯೇ?
“ಅಲ್ಲಾಹ್ ಬಡ್ಡಿಯ ವ್ಯವಹಾರವನ್ನು ಅಳಿಸಿಬಿಡುತ್ತಾನೆ ಮತ್ತು ದಾನಧರ್ಮಗಳನ್ನು ವೃದ್ಧಿಸುತ್ತಾನೆ.” (ಅಲ್ ಬಕರಃ :276)
ನನ್ನ ಭವಿಷ್ಯಕ್ಕಾಗಿ ಏನಾದರೂ ಉಳಿತಾಯ ಮಾಡುತ್ತಿದ್ದೇನೆಯೇ? ನಮ್ಮ ಮರಣಾನಂತರ ಜೀವನವೇ ನಮ್ಮ ನಿಜವಾದ ಭವಿಷ್ಯ. ಬಡಬಗ್ಗರಿಗೆ ಖರ್ಚು ಮಾಡಿ ಅವರಿಗೆ ಉತ್ತಮ ಭವಿಷ್ಯ ನೀಡಿರಿ. ನಿಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡಿರಿ.
“ನಿಮ್ಮ ಪ್ರಭುವಿನ ಕ್ಷಮೆಯ ಕಡೆಗೆ ಮತ್ತು ಭೂಮಿ-ಆಕಾಶಗಳಷ್ಟು ವಿಶಾಲವಾಗಿರುವ ಸ್ವರ್ಗದ ಕಡೆಗೆ ಧಾವಿಸಿರಿ. ಅದು ದೇವಭಯವುಳ್ಳವರಿಗಾಗಿ ಸಿದ್ಧಗೊಳಿಸಲ್ಪಟ್ಟಿರುತ್ತದೆ. ಅವರು ಸ್ಥಿತಿವಂತರಾಗಿರುವಾಗಲೂ ದುಸ್ಥಿತಿಯಲ್ಲಿರುವಾಗಲೂ ತಮ್ಮ ಸಂಪತ್ತನ್ನು ಖರ್ಚು ಮಾಡುತ್ತಾರೆ………” ಆಲಿ ಇಮ್ರಾನ್ : (133 -134)












