ಮೋದಿ ಯುಗ ಮುಗಿಯಿತು, ಮುಂದೆ ನೀವು ಪ್ರಧಾನಿಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ಯೋಗಿ ಆದಿತ್ಯನಾಥ್

0
1726

ಸನ್ಮಾರ್ಗ ವಾರ್ತೆ

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಾವು ಭವಿಷ್ಯದಲ್ಲಿ ಪ್ರಧಾನಿಯಾಗುವ ಬಗ್ಗೆ ಕೇಳಿದ ಪ್ರಶ್ನೆಗೆ, ರಾಜಕೀಯವು ಅವರ ಪೂರ್ಣಕಾಲಿಕ ಕೆಲಸವಲ್ಲ ಎಂದು ಉತ್ತರಿಸಿದರು. “ನಾನು ಪ್ರಸ್ತುತ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದು, ಪಕ್ಷವು ನನಗೆ ಜನರ ಸೇವೆ ಮಾಡುವ ಜವಾಬ್ದಾರಿ ನೀಡಿದೆ. ನಾನು ರಾಜಕೀಯವನ್ನು ಪೂರ್ಣಕಾಲಿಕ ಕೆಲಸವೆಂದು ಪರಿಗಣಿಸುತ್ತಿಲ್ಲ,” ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ, ಅವರು ತಾನೊಬ್ಬ ಸನ್ಯಾಸಿ ಎಂದು ಪುನರುಚರಿಸಿದ್ದು,ಈ ಹೇಳಿಕೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್‌ನಲ್ಲಿ ಅಧಿಕಾರ ತ್ಯಜಿಸಬಹುದು ಎಂಬ ಶಿವಸೇನಾ (ಉದ್ಧವ್ ಬಣ) ನಾಯಕ ಸಂಜಯ್ ರಾವತ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.

ಸಂಜಯ್ ರಾವತ್, “ಮೋದಿ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿ, ನಿವೃತ್ತಿ ಕುರಿತು ಮಾತುಕತೆ ನಡೆಸಿದ್ದಾರೆ. ಮೋದಿ ಯುಗ ಮುಗಿಯುತ್ತಿದೆ. ಆರ್‌ಎಸ್‌ಎಸ್ ಹೊಸ ನಾಯಕತ್ವವನ್ನು ಮುನ್ನಡೆಸಲು ಸಿದ್ಧವಾಗಿದೆ,” ಎಂದು ಆರೋಪಿಸಿದ್ದರು.

ಈ ಹೇಳಿಕೆಗಳಿಗೆ ಪ್ರತಿಯಾಗಿ, ಬಿಜೆಪಿ ಹಿರಿಯ ನಾಯಕ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ಮೋದಿ ಇನ್ನೂ ಹಲವಾರು ವರ್ಷಗಳ ಕಾಲ ದೇಶವನ್ನು ಮುನ್ನಡೆಸುತ್ತಾರೆ. 2029ರಲ್ಲೂ ಅವರೇ ಪ್ರಧಾನಿಯಾಗಲಿದ್ದಾರೆ,” ಎಂದು ಸ್ಪಷ್ಟನೆ ನೀಡಿದ್ದಾರೆ.