✍️ ಮುಷ್ತಾಕ್ ಹೆನ್ನಾಬೈಲ್
ಭಾರತೀಯ ಕೌಟುಂಬಿಕ ವ್ಯವಸ್ಥೆ ದೊಡ್ಡಮಟ್ಟದಲ್ಲಿ ವೈಫಲ್ಯವನ್ನು ಅನುಭವಿಸುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಯಿಂದ ಪ್ರೇರಿತವಾದ ಕಡಿಮೆ ಮಕ್ಕಳನ್ನು ಹೊಂದುವ ಕೆಟ್ಟ ಗುಣ ಸಮಾಜದ ಭವಿಷ್ಯದ ಬಗ್ಗೆ ಚಿಂತೆ ಮೂಡುವಂತೆ ಮಾಡಿದೆ. ಸರಾಸರಿ ಕೇವಲ ಎರಡೇ ಮಕ್ಕಳನ್ನು ಹೊಂದುವುದರಿಂದ ಹೆಣ್ಣು ಗಂಡಿನ ಹುಟ್ಟಿನ ನೈಸರ್ಗಿಕ ಅನುಪಾತ ಭಾರೀ ಏರುಪೇರು ಕಾಣುತ್ತದೆ ಎನ್ನುವ ಸಾಮಾನ್ಯ ಜ್ಞಾನ ದಶಕಗಳ ಹಿಂದೆಯೇ ಚೀನಾ ದೇಶಕ್ಕೆ ಮಾರಿ ಕೂತ ಸಮಾಜ ನಮ್ಮದು.
ಧಾರ್ಮಿಕತೆಯ ಮೇಲಿನ ತಾತ್ಸಾರ, ಆಧುನಿಕತೆಯ ಅತೀ ಹುಚ್ಚು ಮತ್ತು ದೂರಗಾಮಿ ಪರಿಣಾಮಗಳ ಕನಿಷ್ಠ ಎಣಿಕೆಗಳನ್ನು ಮಾಡಲು ಶಕ್ತವಲ್ಲದ ಸರ್ಕಾರಗಳು ಚೀನಾ ದೇಶದ ಕುಟುಂಬ ನಿಯಂತ್ರಣ ವಿಧಾ ನಗಳನ್ನು ಭಾರತೀಯ ಸಮಾಜಕ್ಕೂ ಪ್ರೋತ್ಸಾಹಿಸಿದವು. ಅತ್ಯಂತ ಸಶಕ್ತ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ ಇರುವ ಚೀನಾ ದೇಶದಲ್ಲಿ ಈಗ ಪರಿಸ್ಥಿತಿ ಹೇಗಿದೆಯೆಂದರೆ ಸರ್ಕಾರ ಪ್ರಜೆಗಳಿಗೆ ಸವಲತ್ತುಗಳ ಆಮಿಷ ಒಡ್ಡಿ ಮಕ್ಕಳು ಮಾಡಿ ಎಂದು ಅಂಗಲಾಚುತ್ತಿದೆ.
ಆದರೆ ಭಾರತದಲ್ಲಿ ಸರ್ವಸ್ತರದ ಸರ್ಕಾರಗಳು ಇದನ್ನು ಹೇಳಲು ಹೆದರಿಕೊಳ್ಳುತ್ತಿವೆ. ಕಳೆದ ನಾಲ್ಕು ದಶಕಗಳಿಂದ ಕುಟುಂಬ ನಿಯಂತ್ರಣದ ಮೋಹದಿಂದಾದ ಪರಿಣಾಮಗಳು ಇದೀಗ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಮದುವೆಗಳ ಸ್ಥಾನವನ್ನು ಲೀವ್ ಇನ್ ರಿಲೇಶನ್ಸ್ ವ್ಯಾಪಕವಾಗಿ ಆಕ್ರಮಿಸಿಕೊಳ್ಳುತ್ತಿದೆ. ಇನ್ನು ಕೇವಲ ಒಂದೇ ದಶಕದಲ್ಲಿ ಬಹುತೇಕ ಕಲ್ಯಾಣ ಮಂಟಪಗಳು ಕೊನೆಯುಸಿರು ಎಳೆಯಲಿವೆ. ವ್ಯಭಿಚಾರ ಸಹಜ ಎನ್ನುವ ಸ್ಥಿತಿ ಈಗಲೇ ಇದೆ.
ಇದು ಸಾರ್ವತ್ರಿಕ ಮನ್ನಣೆ ಪಡೆಯುವ ದಿನಗಳು ದೂರವಿಲ್ಲ. ಕಾಲಗಳ ಹಿಂದೆ, ಗಂಡಿನ ಕಿರುಕುಳದಿಂದ ಹೆಣ್ಣು ವ್ಯಾಪಕವಾಗಿ ಸಾಯುತ್ತಿದ್ದಳು. ಈಗ ಬದಲಾಗಿ ಹೆಣ್ಣಿನ ಕಿರುಕುಳದಿಂದ ಗಂಡು ಸಾಯುತ್ತಿದ್ದಾನೆ. ಜಗತ್ತಿನ ಮೇಲೆ ಮನುಷ್ಯ ಹುಟ್ಟಿದಂದಿನಿಂದ ಚರ್ಮದ ಬಣ್ಣದ ಮೇಲಿನಿಂದ ಹಿಡಿದು ಧರ್ಮದ ಕರ್ಮಗಳನ್ನೆಲ್ಲ ಕಾರಣವಾಗಿಸಿಕೊಂಡು ಹೊಡೆದಾಡಿಕೊಂಡಿದ್ದಾನೆ. ಈಗಲೂ ಅದಿದೆ. ಆದರೆ ಸದ್ಯ ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸರೂಪದ ಸಂಘರ್ಷವೆಂದರೆ ಅದು ಗಂಡು ಹೆಣ್ಣಿನ ಕಾಳಗ..
ಸಾವಿರಾರು ವರ್ಷಗಳ ಜೀವ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಎನ್ನುವಂತೆ ಮಾನವ ಸಾಂಘಿಕ ಮತ್ತು ಸಮೂಹ ಸ್ವರೂಪವು ಪುರುಷ ಪ್ರಧಾನ ವ್ಯವಸ್ಥೆಯಿಂದ ಸ್ತ್ರೀ ಪ್ರಧಾನ ವ್ಯವಸ್ತೆಗೆ ಸಾಗುತ್ತಿದೆ. ಇದನ್ನು ಒಳ್ಳೆಯದು ಕೆಟ್ಟದು ಎನ್ನುವು ದನ್ನು ವರ್ಗೀಕರಿಸುವುದಕ್ಕಿಂತ ಮುಂಚೆ ಇದರಿಂದ ಅನಗತ್ಯ ಮೇಲಾಟಗಳು ನಡೆದು ಸಮಸ್ತ ಜೀವ ಸೃಷ್ಟಿ ವ್ಯವಸ್ಥೆಯು ಅಲ್ಲೋಲಕಲ್ಲೋಕ್ಕೆ ಒಳಗಾಗುತ್ತದೆ ಎಂಬುದನ್ನು ಅರಿಯಬೇಕಿದೆ. ಪುರುಷ ಪ್ರಧಾನ ವ್ಯವಸ್ಥೆಗೆ ಶತ ಶತಮಾನಗಳ ಇತಿಹಾಸ ಕ್ರಮಿಸಿದ ಅನುಭವವಿದೆ. ಆದರೆ ಸ್ತ್ರೀ ಪ್ರಧಾನ ವ್ಯವಸ್ಥೆ ಜೀವ ಪ್ರಪಂಚಕ್ಕೆ ಹೊಸತು. ಗಂಡಿಗಿಂತ ಕಡಿಮೆ ಹುಟ್ಟುವ ಹೆಣ್ಣಿನ ಸಂತತಿ ಹೆಣ್ಣು ಗಂಡನ್ನು ಅಡಿಯಾಳಾಗಿಸಲು ದಾರಿಯಾಗಿದೆ. ಇದು ಸದ್ಯೋಭವಿಷ್ಯದಲ್ಲಿ ಗಂಭೀರ ಸ್ವರೂಪ ಪಡೆಯಲಿದೆ.
ಸದ್ಯಕ್ಕೆ ಭಾರತೀಯ ಸಮಾಜದ ದಾಂಪತ್ಯಗಳಲ್ಲಿ ಹೆಣ್ಣಿನದ್ದೇ ಹೆಚ್ಚು ಪಾರಮ್ಯವಿದೆ. ದಾಂಪತ್ಯದ ವೈಮನಸ್ಸುಗಳಿಗೆ ಗಂಡು ಆತ್ಮಹತ್ಯೆ ಮತ್ತು ಖಿನ್ನತೆಗಳಿಗೆ ಒಳಗಾಗಿ ಬದುಕು ಕಳೆದುಕೊಳ್ಳುವುದು ನಿತ್ಯವೂ ಸಹಜವೆಂಬಂತೆ ಕಾಣುತ್ತೇವೆ. ಹೆತ್ತ ಮಗನ ಹೆಂಡತಿ ಮನೆಯ ಒಡತಿಯಾಗಿ ಅವಳ ಅಣತಿಯಂತೆ ಬದುಕುವ ಕಡಿಮೆ ಮಕ್ಕಳು ಪಡೆವ ಹುಚ್ಚಿನ ಅಪ್ಪ ಅಮ್ಮನ ಅವಸ್ಥೆ ಅಕ್ಷರಶ: ಅರಣ್ಯರೋದನ..
ಹೆಚ್ಚು ಕಡಿಮೆ ಒಂದೆರಡು ಮಕ್ಕಳು ಹೊಂದಿರುವ ಎಲ್ಲ ಮಕ್ಕಳ ತಂದೆ ತಾಯಂದಿರು ತಾವು ದುಡಿಯುವ ಶಕ್ತಿ ಕಳೆದುಕೊಳ್ಳುತ್ತಿದ್ದಂತೆ ವೃದ್ಧಾಶ್ರಮದ ಬದುಕನ್ನು ಆಯ್ದುಕೊಳ್ಳುವ ಅನಿವಾರ್ಯತೆ ಇದೆ. ಇದೆಲ್ಲ ನೋಡುವಾಗ ಎಲ್ಲೋ ಎಲ್ಲವೂ ಹಳಿ ತಪ್ಪಿದಂತೆ ಭಾಸವಾಗುತ್ತಿರುವುದು ಸುಳ್ಳಲ್ಲ. ಹಾಗಾದರೆ ಇಂತಹ ಸಾಮಾಜಿಕ ಪತನಕ್ಕೆ ಪರಿಹಾರ ಯಾರು ಮಾಡಬೇಕು? ರಾಜಕೀಯದಿಂದ ಇದೆಲ್ಲ ಸುಧಾರಿಸಲು ಸಾಧ್ಯವಿಲ್ಲ. ಧರ್ಮ ಅದೆಂದೋ ತಾತ್ಸಾರಕ್ಕೆ ಒಳಗಾಗಿದೆ. ಮುಂದೇನು? ಏನೂ ಇಲ್ಲ, ಹೆಣ್ಣಿನ ಗುಲಾಮಿತನವೇ ಭವಿಷ್ಯದ ಬದುಕು.
ಒಂದು ಮನೆಯಲ್ಲಿ ಇಬ್ಬರಿಗೆ ಮದುವೆಯಿಲ್ಲ. ಹೆಣ್ಣು ಅಪ್ಪ ಅಮ್ಮನೊಂದಿಗೆ ಬದುಕುವ ಹುಡುಗ ಬೇಡ ಅನ್ನುತ್ತಾಳೆ. 50000 ಕ್ಕಿಂತ ಕಡಿಮೆ ಸಂಬಳ ಸಂಬಳವೇ ಅಲ್ಲ. ಮಕ್ಕಳು ಈಗಲೇ ಬೇಡ. ನೀನಲ್ಲದಿದ್ದರೆ ಮತ್ತೊಬ್ಬ. ವರ್ತಮಾನ ಮತ್ತು ಭವಿಷ್ಯದಲ್ಲಿ ಮನೆ ಮನೆಗಳಲ್ಲಿ ಕಾಣುವ ಮನಸ್ಥಿತಿ ಇದು. ಇಲ್ಲಿಯ ವರೆಗಿನ ಸಾಮಾಜಿಕ-ಕೌಟುಂಬಿಕ ವ್ಯವಸ್ಥೆಯಲ್ಲಿ ಪುರುಷನೇ ಪ್ರಧಾನನಾದರೂ, ನಾರಿ ನಿರ್ಣಾಯಕಳಾಗಿದ್ದಳು. ಆದರೆ ಈಗಿನ ವ್ಯವಸ್ಥೆಯಲ್ಲಿ ಪ್ರಧಾನ ಮತ್ತು ನಿರ್ಣಾಯಕ ಎಲ್ಲವೂ ಕೂಡ ಸ್ತ್ರೀಯೇ ಆಗಿದ್ದಾಳೆ ಎನ್ನುವುದು ನೇರವಾಗಿ ಹೇಳದಿದ್ದರೂ ಎಲ್ಲರಿಗೂ ತಿಳಿದಿರುವ ಸತ್ಯ ಇದು..
ಭಾರತೀಯ ಸಮಾಜ ಅಪಾಯ ಮತ್ತು ಪರೀಕ್ಷೆ ಎರಡನ್ನೂ ಏಕಕಾಲಕ್ಕೆ ಎದುರಿಸುತ್ತಿದೆ. ಹುಡುಗರೆಲ್ಲ ಕಲ್ಯಾಣ ಮಂಟಪದಲ್ಲಿ ಸ್ವಯಂವರಕ್ಕೆ ಹೋಗಬೇಕಾದ ದಿನ ದೂರವಿಲ್ಲ. ಈ ಸಾಮಾಜಿಕ ಅರಾಜಕತೆಯಿಂದಾಗಿ ಬರೀ ಗಂಡಸರು ಮಾತ್ರ ಬಲಿಪಶುವಾಗುತ್ತಿಲ್ಲ. ಗಂಡಿಗೆ ಅಕ್ಕ, ತಂಗಿ, ಅಮ್ಮ, ಮಗಳಾಗುವ ಹೆಣ್ಣು ಕೂಡ ಕಾಲ ಕಾಲಕ್ಕೆ ಇದನ್ನು ಎದುರಿಸಬೇಕಿದೆ. ಇದೆಲ್ಲವನ್ನು ಎದುರಿಸಿ ಬದುಕುವುದು ಅಷ್ಟು ಸುಲಭವಿಲ್ಲ.
ಮನುಕುಲ ಹಿಂದೆಂದೂ ಕಾಣದ ಮಾನಸಿಕ ರೋಗಗಳ ಉಲ್ಬಣಕ್ಕೆ ಈಗಿನ ಸಾಮಾಜಿಕ ಮತ್ತು ಕೌಟುಂಬಿಕ ಪರಿಸ್ಥಿತಿ ಹೆಚ್ಚು ಕಾರಣವಾಗಿದೆ. ಕುಟುಂಬ ವ್ಯವಸ್ಥೆ ದುರ್ಬಲಗೊಂಡರೆ ಸಮಾಜ ಸಹಜವಾಗಿಯೇ ಬಡವಾಗುತ್ತದೆ. ಸಮಾಜದ ಶಕ್ತಿ ಕುಂದಿದರೆ ದೇಶಕ್ಕೆ ಅದು ಎಲ್ಲಕ್ಕಿಂತ ಹೆಚ್ಚು ಮಾರಕ. ದಿನ ಬೆಳಗೆದ್ದು ಹಿಂದೂ ಮುಸ್ಲಿಮ್ ಜಪಮಾಡುವ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗೆ ಇದೆಲ್ಲ ಅರ್ಥವಾಗುವುದು ಅಷ್ಟರಲ್ಲೇ ಇದೆ.












