ದುಬೈ,ಜೂ.10: ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಭಾರತದ ಯುವತಿಗೆ ಸುಖ ಹೆರಿಗೆಗೆ ಸೌಕರ್ಯ ಮಾಡಿಕೊಟ್ಟ ಮಹಿಳಾ ಪೊಲೀಸ್ ಅಧಿಕಾರಿಗೆ ಭಡ್ತಿ ನೀಡಲಾಗಿದೆ. ಈ ವರ್ಷ ಎಪ್ರಿಲ್ನಲ್ಲಿ ಟರ್ಮಿನಲ್ ಎರಡರಲ್ಲಿ ನಡೆದ ಘಟನೆಯಲ್ಲಿ ಜವಾಬ್ದಾರಿ ಪ್ರಜ್ಞೆ ಮೆರೆದ ಮತ್ತು ಮಾನವೀಯ, ತಾಯಿ ಪ್ರೀತಿ ತೋರಿಸಿ ಮಾದರಿಯಾದ ಕಾರ್ಪೊರಲ್ ಹನಾನ್ ಹುಸೈನ್ ಮುಹಮ್ಮದ್ರಿಗೆ ಉನ್ನತ ರ್ಯಾಂಕ್ಗೆ ಭಡ್ತಿ ನೀಡಲಾದ ವಿವರವನ್ನು ದುಬೈ ಪೊಲೀಸ್ ಕಮಾಂಡರ್ ಇನ್ ಚೀಫ್ ಮೇಜರ್ ಜನರಲ್ ಅಬ್ದುಲ್ಲ ಖಲೀಫಾ ಅಲ್ ಮರಿ ತಿಳಿಸಿದರು. ಹನಾನ್ರಿಗೆ ಸಹಾಯ ಮಾಡಿದ ಕೇರಳದ ಪ್ಯಾರಾಮೆಡಿಕ್ ಬಿನೀಷ್ ಚಾಕೋ ಎಂಬವರನ್ನೂ ದುಬೈ ಪೊಲೀಸ್ ಇಲಾಖೆ ಗೌರವಿಸಿತು.
ಎಪ್ರಿಲ್ 20ರಂದು ಡ್ಯೂಟಿ ಮುಗಿಸಿ ಹನಾನ್ ಮರಳಲು ಸಿದ್ಧರಾಗಿದ್ದರು. ಆ ವೇಳೆ ವಿಮಾನ ನಿಲ್ದಾಣಕ್ಕೆ ಬಂದ ಯುವತಿ ಹೆರಿಗೆ ನೋವಿನಿಂದ ಅಳುವುದನ್ನು ಕಂಡು ಓಡಿ ಬಂದಿದ್ದರು. ಯುಎಇಯಲ್ಲಿ ಹೆರಿಗೆ ವೆಚ್ಚ ಸಹಿಸಲು ಅಸಾಧ್ಯವಾದಷ್ಟು ಆಗುತ್ತದೆ. ಆದ್ದರಿಂದ ಊರಿಗೆ ಹೊರಟು ಹೋಗಲು ಯುವತಿ ನಿರ್ಧರಿಸಿದ್ದರು. ಅವರ ಉಡುಪಿನಲ್ಲಿ ರಕ್ತ ಹರಿಯುತ್ತಿತ್ತು. ಇದನ್ನು ನೋಡಿದ ಹನಾನ್ ಕೂಡಲೇ ಮಿಮಾನ ನಿಲ್ದಾಣದ ಕೋಣೆಗೆ ಕರೆದುಕೊಂಡು ಹೋಗಿ ಆಂಬುಲೆನ್ಸ್ಗೆ ಕರೆ ಮಾಡಿದರು. ಆದರೆ ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟು ಸಮಯ ಇರಲಿಲ್ಲ. ಅಲ್ಲಿಯೇ ಮಗುವಿಗೆ ಯುವತಿ ಜನ್ಮವಿತ್ತರು.
ಆದರೆ ತಿಂಗಳು ತುಂಬದೆ ಮಗು ಹೊರಬಂದಿತ್ತು. ಸ್ವಲ್ಪ ಸಮಯ ಅದು ಲುಗಾಡದೆ ನಿಶ್ಚಲವಾಗಿತ್ತು. ಸಿಪಿಆರ್ ನೀಡಿದೊಡನೆ ಕೂಡಲೇ ಮಗುವಿನ ಅಳು ಕೋಣೆಯಿಂದ ಕೇಳಿಸಿತು. ಬಿನೀಶ್ ಚಾಕೊ ಸಹಾಯದಲ್ಲಿ ಪ್ರಾಥಮಿಕ ಸುಶ್ರೂಷೆ ನಿರ್ವಹಿಸಿ ಲತೀಫಾ ಆಸ್ಪತ್ರೆಗೆ ಯುವತಿ ಮತ್ತು ಮಗುವನ್ನು ದಾಖಲಿಸಲಾಯಿತು. ಏಳು ವರ್ಷದಿಂದ ಹನಾನ್ ದುಬೈ ಪೊಲೀಸ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಜೀವನದ ಅತ್ಯಂತ ಸಂತೋಷದ ಕ್ಷಣ ಇದೆಂದು ಅವರು ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ. ಮೂರು ಹೆಣ್ಣುಮಕ್ಕಳ ತಾಯಿ ನಾನು. ನನಗೀಗ ಈ ಮಗು ಸೇರಿ ನಾಲ್ಕು ಮಕ್ಕಳಿವೆ ಎಂದು ಹನಾನ್ ಸಂತೋಷಪಟ್ಟು ಹೇಳಿದರು.












