✍️ ಅಮಾನ್ ಕೆ
ಜನವರಿ ಫೆಬ್ರವರಿ ಎಂಬ ಹೆಸರಲ್ಲಿರುವ 12 ತಿಂಗಳಿಗೆ ಬದಲಿಯಾಗಿ ಮುಸ್ಲಿಮರಲ್ಲಿ ಮೊಹರಂ ಸಫರ್ ಮುಂತಾದ ಹೆಸರುಗಳಲ್ಲಿ 12 ತಿಂಗಳುಗಳಿವೆ . ಇದನ್ನು ಹಿಜಿರಾ ಕ್ಯಾಲೆಂಡರ್ ಅಥವಾ ಇಸ್ಲಾಮಿ ಕ್ಯಾಲೆಂಡರ್ ಎಂದು ಕರೆಯಲಾಗುತ್ತದೆ. ಚಂದ್ರನ ವೃದ್ಧಿ ಕ್ಷಯವನ್ನು ಅನುಸರಿಸಿ ಈ ತಿಂಗಳುಗಳ ದಿನಾಂಕಗಳು ನಿರ್ಧರಿತವಾಗಿವೆ.
ಅಂದಹಾಗೆ ಇಸ್ಲಾಮಿ ಕ್ಯಾಲೆಂಡರ್ ಎಂದರೇನು? ತಿಂಗಳುಗಳ ಹೆಸರನ್ನು ಹೇಗೆ ಆಯ್ಕೆ ಮಾಡಲಾಗಿದೆ?ಯಾವಾಗ ಹಿಜರಿ ಕ್ಯಾಲೆಂಡರ್ ಜಾರಿಗೆ ಬಂತು ಎಂಬೆಲ್ಲಾ ಪ್ರಶ್ನೆಗಳು ನಿಮ್ಮಲ್ಲಿ ಇರಬಹುದು.
ಖಲೀಫಾ ಉಮರ್ ಅವರ ಆಡಳಿತ ಕಾಲದಲ್ಲಿ ಗವರ್ನರ್ ಆಗಿದ್ದ ಮಸ್ ಅಲ್ ಅಶ್ ಹರಿ ಎಂಬವರು ಒಂದು ಪತ್ರ ಬರೆಯುತ್ತಾರೆ. ನೀವು ನನಗೆ ತುಂಬಾ ಪತ್ರಗಳನ್ನ ಕಳುಹಿಸುತ್ತಿರುತ್ತೀರಿ. ಆದರೆ ಅದರಲ್ಲಿ ಯಾವುದು ಪ್ರಥಮವಾಗಿ ಬಂದ ಪತ್ರ ನಂತರ ಬಂದದ್ದು ಯಾವುದು ಎಂದು ಗೊತ್ತಾಗ್ತಾ ಇಲ್ಲ. ಆದ್ದರಿಂದ ಇನ್ನು ಮುಂದೆ ನೀವು ದಿನಾಂಕವನ್ನು ನಮೂದಿಸಿ ಪತ್ರ ಬರೆಯಬೇಕು ಎಂದು ವಿನಂತಿಸ್ತಾರೆ.
ಆ ಬಳಿಕ ಖಲೀಫಾ ಉಮರ್ ಅವರು ತನ್ನ ಅನುಯಾಯಿಗಳ ಜೊತೆ ಸಮಾಲೋಚನೆ ನಡೆಸುತ್ತಾರೆ. ಯಾವ ಹೆಸರಿನಲ್ಲಿ ಕ್ಯಾಲೆಂಡರ್ ತಯಾರಿಸಬೇಕು ಅಂತ ಚರ್ಚೆ ಮಾಡುತ್ತಾರೆ. ಕೆಲವರು ಪ್ರವಾದಿಯ ಜನನ ತಿಂಗಳ ಹೆಸರನ್ನು ಸೂಚಿಸ್ತಾರೆ. ಕೊನೆಗೆ ಪ್ರವಾದಿ ಮಕ್ಕಾದಿಂದ ಮದೀನಕ್ಕೆ ವಲಸೆ ಹೋದ ದಿನವನ್ನು ಕ್ಯಾಲೆಂಡರ್ ಗೆ ಆಧಾರವಾಗಿ ಮಾಡೋಣ ಎಂದು ತೀರ್ಮಾನಿಸ್ತಾರೆ. ಹೀಗೆ ಹಿಜರಿ ಕ್ಯಾಲೆಂಡರ್ ಎಂಬ ಹೆಸರಲ್ಲಿ ಇಸ್ಲಾಮಿ ಕ್ಯಾಲೆಂಡರ್ ಗುರುತಿಸಿಕೊಳ್ಳುತ್ತದೆ. ಇದೀಗ ಯಾವ ತಿಂಗಳನ್ನು ವರ್ಷದ ಮೊದಲ ತಿಂಗಳು ಎಂದು ಮಾಡುವುದು ಎಂಬ ಚರ್ಚೆ ನಡೆಯುತ್ತದೆ. ಸಾಮಾನ್ಯವಾಗಿ ಈದ್ ಮತ್ತು ಹಜ್ ಎಲ್ಲ ಮುಗಿದು ಆರಾಮವಾಗಿ ಕಳೆಯುವ ತಿಂಗಳೆಂದರೆ ಮೊಹರಂ. ಆದ್ದರಿಂದ ಮೊಹರಂ ತಿಂಗಳನ್ನೇ ಹಿಜರಿ ಕ್ಯಾಲೆಂಡರಿನ ಮೊದಲ ತಿಂಗಳಾಗಿ ಪರಿವರ್ತಿಸಿದರೆ ಒಳ್ಳೆಯದು ಎಂದು ಉಸ್ಮಾನ್ ಬಿನ್ ಅಫ್ಹಾನ್ ಎಂಬ ಪ್ರವಾದಿ ಅಳಿಯ ಸೂಚಿಸುತ್ತಾರೆ. ಹೀಗೆ ಹಿಜರಿ ಕ್ಯಾಲೆಂಡರ್ ತಯಾರಾಗುತ್ತದೆ.
ಪ್ರವಾದಿ ಮೊಹಮ್ಮದರು 13 ವರ್ಷಗಳ ಕಾಲ ಮಕ್ಕಾದಲ್ಲಿ ತನ್ನ ವಿಚಾರಧಾರೆಯನ್ನು ಪ್ರತಿಪಾದಿಸಿ ಆ ಬಳಿಕ ಮದೀನಕೆ ಹೊರಟು ಹೋಗುತ್ತಾರೆ. ಮದೀನಾ ತಲುಪಿದಾಗ ಅಲ್ಲಿನ ಯಹೂದಿಯರು ಮೊಹರಂ ಹತ್ತರಂದು ಉಪವಾಸ ಆಚರಿಸುವುದನ್ನು ಅವರು ಗಮನಿಸುತ್ತಾರೆ. ಇದೇಕೆ ಅವರು ಉಪವಾಸ ಆಚರಿಸುತ್ತಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಆಗ ತಮ್ಮನ್ನು ಪ್ರವಾದಿ ಮೂಸ ಅವರು ಕ್ರೂರಿ ದೊರೆ ಫಿರ್ ಔ ನನಿಂದ ಪಾರುಗೊಳಿಸಿದ ದಿನ ಮೊಹರಂ ಹತ್ತು ಆಗಿದೆ. ಆದ್ದರಿಂದ ನಾವು ಈ ದಿನದಂದು ಉಪವಾಸ ಆಚರಿಸುತ್ತಿದ್ದೇವೆ ಎಂದು ಅವರಿಗೆ ತಿಳಿಸಲಾಗುತ್ತದೆ ಆಗ ಪ್ರವಾದಿ ಹೇಳುತ್ತಾರೆ, ಮೂಸ ಅವರು ಯಹೂದಿಯರಿಗಿಂತಲೂ ಹೆಚ್ಚು ನಮಗೆ ಆಪ್ತರಾಗಿದ್ದಾರೆ. ಅವರು ನಮ್ಮ ಪ್ರವಾದಿ. ಆದ್ದರಿಂದ ಮುಂದಿನ ವರ್ಷ ನಾನು ಜೀವಂತ ಇದ್ದರೆ ಮೊಹರಂ 9ರಂದು ಕೂಡ ಉಪವಾಸ ಆಚರಿಸುತ್ತೇನೆ ಎಂದು ಹೇಳುತ್ತಾರೆ.
ಮೊಹರಂ ಹತ್ತರಂದು ಕರ್ಬಲ ದಿನ ಕೂಡ ಆಗಿರುತ್ತದೆ. ಪ್ರವಾದಿ ಮೊಮ್ಮಗ ಹುಸೇನ್ ಅವರನ್ನು ರಾಜ ಯಜೀದ್ ಎಂಬವನ ಸೇನಾ ದಂಡ ನಾಯಕ ಹತ್ಯೆ ಮಾಡಿದ ದಿನ ಕೂಡ ಮೊಹರಂ ಹತ್ತು ಆಗಿದೆ. ಇನ್ನಿತರ ಐತಿಹಾಸಿಕ ಘಟನೆಗಳು ಕೂಡ ಮೊಹರಂ ಹತ್ತರಂದು ನಡೆದಿದೆ ಎಂದು ಹೇಳಲಾಗುತ್ತದೆ.
ಹೀಗೆ ಹಿಜರಿ ಕ್ಯಾಲೆಂಡರ್ ಮತ್ತು ಮೊಹರಂ ತಿಂಗಳು ಇಸ್ಲಾಮಿ ಇತಿಹಾಸದ ಭಾಗವಾಗಿ ಹೋಗಿದೆ.












