ಸನ್ಮಾರ್ಗ ವಾರ್ತೆ
ಕದನ ವಿರಾಮ ಚರ್ಚೆಯಲ್ಲಿ ಹಮಾಸನ್ನು ಇಝ್ವುದ್ದೀನ್ ಅಲ್ ಹದಾದ್ ಪ್ರತಿನಿಧಿಸುತ್ತಾರೆ ಎಂದು ತಿಳಿಸಲಾಗಿದೆ. 2023 ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ನೇತೃತ್ವವನ್ನು ಇವರು ವಹಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಹಮಾಸ್ ನ ನಾಯಕರಾಗಿದ್ದ ಮೊಹಮ್ಮದ್ ಸಿನ್ವಾರ್ ಅವರ ಹತ್ಯೆಯ ಬಳಿಕ ಹಮಾಸ್ ನ ಸೈನಿಕ ನೇತೃತ್ವವನ್ನು ಇವರು ವಹಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಝಾದಿಂದ ಹಮಾಸನ್ನು ಅಧಿಕಾರದಿಂದ ಹೊರಗಿಡುವುದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿರುವ ಇಝ್ವುದ್ದೀನ್ ಅವರು ಕದನ ಸಂಪೂರ್ಣವಾಗಿ ಕೊನೆಗೊಳ್ಳಬೇಕು ಮತ್ತು ಇಸ್ರೇಲ್ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದು ಕೊಂಡರೆ ಮಾತ್ರ ಇಸ್ರೇಲ್ ನ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗುವುದು ಎಂಬ ನಿಲುವಿಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ. ಗಾಝಾದ ವ್ಯಕ್ತಿಯಾಗಿರುವ ಇಝ್ವು ದ್ದೀನ್ ಅವರು ಗಾಝಾ ಸಿಟಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಸ್ರೇಲ್ ನೊಂದಿಗೆ ಒಂದು ಗೌರವಯುತವಾದ ಸಂಧಾನವನ್ನು ಮಾಡಿಕೊಳ್ಳುವುದು ಅಥವಾ ಈ ಯುದ್ಧವನ್ನು ಒಂದು ವಿಮೋಚನಾ ಹೋರಾಟವಾಗಿ ಮತ್ತು ಅದಕ್ಕೆ ನೀಡಲಾಗುವ ರಕ್ತ ಸಾಕ್ಷಿಯಾಗಿ ಪರಿಗಣಿಸುವುದು ತನ್ನ ಗುರಿ ಎಂಬುದಾಗಿ ಅವರು ಇತ್ತೀಚಿಗೆ ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿದ್ದುವು.












