ಸನ್ಮಾರ್ಗ ವಾರ್ತೆ
ಹಿಸಾರ್ (ಹರಿಯಾಣ): ಶಾಲಾ ಶಿಸ್ತು ಪಾಲಿಸುವಂತೆ ಸೂಚಿಸಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿಗಳು ತಮ್ಮ ಪ್ರಾಂಶುಪಾಲರನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಭಯಾನಕ ಘಟನೆ ಗುರುವಾರ ಬೆಳಿಗ್ಗೆ ಹಿಸಾರ್ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಕರ್ತಾರ್ ಮೆಮೋರಿಯಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಜಗ್ಬೀರ್ ಸಿಂಗ್ ಪನ್ನು ಅವರನ್ನು 15 ವರ್ಷದ ಇಬ್ಬರು ವಿದ್ಯಾರ್ಥಿಗಳು ಇರಿದು ಕೊಂದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಯಶವರ್ಧನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶಾಲಾ ಶಿಸ್ತಿನ ಉಲ್ಲಂಘನೆಗಾಗಿ ಜಗ್ಬೀರ್ ಅವರು ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿ ಮಾಡಿದ್ದರು. ವಿದ್ಯಾರ್ಥಿಗಳಿಗೆ ಕೂದಲು ಕತ್ತರಿಸಲು ಸೂಚಿಸಿದ್ದರು ಮತ್ತು ಶರ್ಟ್ಗಳನ್ನು ಪಟ್ಟಿ ತಪ್ಪದಂತೆ ಒಳಗೆ ಹಾಕಿಕೊಳ್ಳುವಂತೆ ಹೇಳಿದ್ದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಚಾಕುವಿನಿಂದ ಪ್ರಾಂಶುಪಾಲರ ಮೇಲೆ ದಾಳಿ ನಡೆಸಿದ್ದಾರೆ.
ತೀವ್ರ ಗಾಯಗೊಂಡ ಜಗ್ಬೀರ್ ಅವರನ್ನು ತಕ್ಷಣ ಹಿಸಾರ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಪೊಲೀಸರು ಸ್ಥಳದಿಂದ ಕೊಲೆಗೆ ಬಳಸಲಾದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ನಂತರ ಇಬ್ಬರು ವಿದ್ಯಾರ್ಥಿಗಳು ತಲೆ ಮರೆಸಿಕೊಂಡಿದ್ದು ಹುಡುಕಾಟ ಮುಂದುವರೆದಿದೆ. ಆರೋಪಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಸಂದೇಶಗಳನ್ನು ಹಂಚಿಕೊಂಡಿದ್ದರು ಎಂಬ ಶಂಕೆಯೂ ವ್ಯಕ್ತವಾಗಿದೆ.












