ಇನ್ಸ್ಟಾಗ್ರಾಮ್ ರೀಲ್ ಗಲಾಟೆ; ತಂದೆಯಿಂದಲೇ ಅಂತಾರಾಷ್ಟ್ರೀಯ ಟೆನಿಸ್ ತಾರೆ ರಾಧಿಕಾ ಯಾದವ್‌ ಕೊಲೆ

0
625

ಸನ್ಮಾರ್ಗ ವಾರ್ತೆ

ಗುರುಗ್ರಾಮ್: ಅಂತರರಾಷ್ಟ್ರೀಯ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (25) ಅವರನ್ನು ಅವರ ತಂದೆಯೇ ಗುಂಡಿಕ್ಕಿ ಕೊಂದಿದ್ದಾರೆ ಎಂಬ ಬೆಚ್ಚಿ ಬೀಳಿಸುವ ಘಟನೆ ಗುರುವಾರ ಬೆಳಿಗ್ಗೆ ಗುರುಗ್ರಾಮ್‌ನ ಸೆಕ್ಟರ್ 57ರಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ರಾಧಿಕಾ ತಂದೆ ದೀಪಕ್ ಯಾದವ್ ಅವರನ್ನು ಪೊಲೀಸರು ಕೊಲೆಯ ಪ್ರಮುಖ ಆರೋಪಿ ಎಂದು ಗುರುತಿಸಿದ್ದಾರೆ.

ಬೆಳಿಗ್ಗೆ ಸುಮಾರು 11.30ಕ್ಕೆ ಈ ಘಟನೆ ನಡೆದಿದ್ದು, ಮನೆಯೊಳಗಿಂದಲೇ ಗುಂಡು ಹಾರಿಸಲಾಗಿದೆ. ಪ್ರಾಥಮಿಕ ಮಾಹಿತಿಯಂತೆ, ಇನ್‌ಸ್ಟಾಗ್ರಾಂನಲ್ಲಿ ರೀಲ್‌ ಪೋಸ್ಟ್‌ ಮಾಡುವ ವಿಚಾರವಾಗಿ ತಂದೆ–ಮಗಳ ನಡುವೆ ಜಗಳವಾಗಿದೆ. ನಂತರ ಆಕ್ರೋಶಗೊಂಡ ತಂದೆ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ ಆಕೆಯ ಮೇಲೆ ಗುಂಡು ಹಾರಿಸಿದ್ದು, ಗಾಯಗೊಂಡ ರಾಧಿಕಾಳನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾದರೂ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ರಾಧಿಕಾಳ ದೇಹದಲ್ಲಿ ಮೂರು ಗುಂಡುಗಳು ಪತ್ತೆಯಾಗಿದೆ. ಆಸ್ಪತ್ರೆಯ ಸಿಬ್ಬಂದಿಯೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರಿದಿದೆ.

ರಾಧಿಕಾ ಯಾದವ್ ಅಂತರರಾಷ್ಟ್ರೀಯ ಟೆನಿಸ್ ಫೆಡರೇಶನ್‌ನ ಡಬಲ್ಸ್ ಶ್ರೇಯಾಂಕದಲ್ಲಿ 113ನೇ ಸ್ಥಾನದಲ್ಲಿದ್ದರು. 2000ರ ಮಾರ್ಚ್ 23 ರಂದು ಜನಿಸಿದ ಅವರು ಹರಿಯಾಣ ರಾಜ್ಯವನ್ನು ಪ್ರತಿನಿಧಿಸಿ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿದ್ದರು.

ಈ ದಾರುಣ ಘಟನೆಯು ಕ್ರೀಡಾ ಪ್ರಪಂಚದಲ್ಲಿ ಆಘಾತ ಉಂಟುಮಾಡಿದ್ದು, ಕುಟುಂಬದ ಆಂತರಿಕ ಕಲಹ ಎಷ್ಟು ಗಂಭೀರ ಪರಿಣಾಮ ಉಂಟುಮಾಡಬಹುದು ಎಂಬುದನ್ನು ತೋರಿಸಿದೆ. ಪೊಲೀಸರು ಪ್ರಕರಣದ ಹಿನ್ನೆಲೆ ಕುರಿತು ತನಿಖೆ ಮುಂದುವರಿಸಿದ್ದಾರೆ.