ಮಗಳ ಇನ್ಸುಲಿನ್‌ಗಾಗಿ ಹಣ ಇಲ್ಲ, ಸಹಾಯ ಮಾಡಿ; ಫೇಸ್‌ಬುಕ್‌ ಲೈವ್‌ನಲ್ಲಿ ಸಹಾಯ ಕೋರಿದ ಉದ್ಯಮಿ ಆತ್ಮಹತ್ಯೆ

0
928

ಸನ್ಮಾರ್ಗ ವಾರ್ತೆ

ಲಕ್ನೋ: ಉತ್ತರ ಪ್ರದೇಶದ ಲಕ್ನೋ ನಗರದ ಉದ್ಯಮಿಯೊಬ್ಬರು ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಫೇಸ್‌ಬುಕ್‌ನಲ್ಲಿ ಲೈವ್ ವಿಡಿಯೋ ಹಾಕಿ ನಂತರ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ನಡೆದಿದೆ.

ತೀವ್ರ ಸಾಲದ ಒತ್ತಡದಲ್ಲಿದ್ದ ರಿಯಲ್ ಎಸ್ಟೇಟ್ ಉದ್ಯಮಿ, ಮಗಳಿಗೆ ಅಗತ್ಯವಿದ್ದ ಇನ್ಸುಲಿನ್ ಖರೀದಿಸಲು ಹಣವೂ ಇಲ್ಲದ ದುಸ್ಥಿತಿಯನ್ನು ವಿಡಿಯೋದಲ್ಲಿ ಭಾವನಾತ್ಮಕವಾಗಿ ವಿವರಿಸಿದ್ದಾರೆ. ಕಣ್ಣೀರು ಹಾಕುತ್ತಾ ಅವರು ದೇಶದ ಸೆಲೆಬ್ರಿಟಿಗಳು ಹಾಗೂ ಶ್ರೀಮಂತರಿಂದ ಸಹಾಯ ಕೋರಿದ್ದಾರೆ. “ಮಗಳು ಬದುಕಿದ್ದಾಳೆ, ಆದರೆ ಇನ್ಸುಲಿನ್ ಖರೀದಿಸಲು ನನ್ನಲ್ಲಿ ಹಣವಿಲ್ಲ” ಎಂದು ಮನವಿ ಮಾಡಿದ್ದಾರೆ.

ವೀಡಿಯೋ ಚಿತ್ರೀಕರಣದ ನಂತರ ಅವರು ಭದ್ರತಾ ಸಿಬ್ಬಂದಿಯ ಗನ್‌ ಬಳಸಿ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲವಾದರೂ, ಭಾರೀ ಸಾಲ ಹಾಗೂ ಆರ್ಥಿಕ ಬಿಕ್ಕಟ್ಟೇ ಈ ಆತ್ಮಹತ್ಯೆಗೆ ಹಿನ್ನೆಲೆ ಎನ್ನಲಾಗಿದೆ.

ವೀಡಿಯೋ ನೋಡಿ ಆತಂಕಗೊಂಡ ಕುಟುಂಬಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರೂ ಅವರು ಸ್ಥಳಕ್ಕೆ ತಲುಪುವ ಹೊತ್ತಿಗೆ ಆತ್ಮಹತ್ಯೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಉದ್ಯಮಿಯ ಗುರುತು ಹಾಗೂ ಇನ್ನಷ್ಟು ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.