ಸನ್ಮಾರ್ಗ ವಾರ್ತೆ
ವಡೋದರಾ: ಗುಜರಾತ್ನ ವಡೋದರಾ ಜಿಲ್ಲೆಯ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿದು 13 ಮಂದಿ ದುರ್ಮರಣಕ್ಕೀಡಾದ ದುರಂತದ ನಂತರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ, “ಗುಜರಾತ್ನಲ್ಲಿ ಮುಗ್ಧ ನಾಗರಿಕರು ಸೇತುವೆ ಕುಸಿತದಿಂದ ಸಾವಿಗೀಡಾಗುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ವಿದೇಶದಲ್ಲಿ ಡ್ರಮ್ ಬಾರಿಸುತ್ತಾ ಸಂಭ್ರಮಿಸುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ನೈಮಿಬಿಯಾದ ಹೊಸಿಯಾ ಕುಟಾಕೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಡ್ರಮ್ ನುಡಿಸುತ್ತಿದ್ದ ವೇಳೆಯಲ್ಲಿಯೇ, ಮೇವಾನಿಯ ಹೇಳಿಕೆ ಬಂದಿದೆ.
“ಗುಜರಾತ್ನಲ್ಲಿ ಹಿಂದೆ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟ ಕೆಲವು ಕಂಪನಿಗಳಿಗೆ ಚುನಾವಣೆಯ ಸಮಯದಲ್ಲಿ ಬಿಜೆಪಿ ಯೋಜನೆಗಳನ್ನು ನೀಡುತ್ತದೆ. ಇದೇ ಕಂಪನಿಗಳ ಲೋಪದಿಂದ ಸೇತುವೆಗಳು ಕುಸಿಯುತ್ತಿವೆ,” ಎಂಬ ಆರೋಪವನ್ನು ಅವರು ಮುಂದಿಟ್ಟಿದ್ದಾರೆ.
“ಇದು ಕೇವಲ ಭ್ರಷ್ಟಾಚಾರವಲ್ಲ, ಇದು ‘ನಾಯಕತ್ವದ ಬಿಕ್ಕಟ್ಟು’ ಆಗಿದೆ. ನೀವು ಸಾಯುತ್ತಾ ಇರಿ, ಆದರೆ ಅವರ ಹೊಟ್ಟೆಗೆ ಏನು ಆಗುವುದಿಲ್ಲ ಎಂಬ ಧೋರಣೆ ಸರ್ಕಾರದ್ದು,” ಎಂದು ಮೇವಾನಿ ಟೀಕಿಸಿದರು.
ಮೇವಾನಿಯ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಗುಜರಾತ್ನಲ್ಲಿ ಕನಿಷ್ಠ 16 ಸೇತುವೆಗಳು ಕುಸಿದಿದ್ದು, ಇದರ ವಿರುದ್ಧ ಯಾವುದೇ ಸ್ಪಷ್ಟ ತನಿಖೆ ನಡೆಸಲಾಗಿಲ್ಲ ಅಥವಾ ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗಿಲ್ಲ. ಇತ್ತೀಚಿನ ದುರಂತವನ್ನು ಒಳಗೊಂಡಂತೆ, ಎಲ್ಲ 16 ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಮಧ್ಯೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಪೂರೈಕೆದಾರರ ಲೋಪದಿಂದಲೇ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎಂಬ ಸಾರ್ವಜನಿಕರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.












