ಮೂಲ ಇಂಗ್ಲಿಷ್: ಎಜಾಝ್ ಅಹ್ಮದ್ ಅಸ್ಲಮ್
ಅನು : ಮುಹಮ್ಮದ್ ಮರಕಡ
ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಪಕ್ಷವು ಇಂದು ದೇಶವನ್ನು ಹೀನ ಸ್ಥಿತಿಗೆ ಕೊಂಡೊಯ್ದಿದೆ. ಆರ್ಥಿಕ, ಸಾಮಾಜಿಕ ಹಾಗೂ ರಕ್ಷಣಾತ್ಮಕ ಅಂಶಗಳಲ್ಲಿ ದೇಶವು ಆಂತರಿಕ ಹಾಗೂ ಬಾಹ್ಯ ಭೀತಿಗಳಿಂದ ತತ್ತರಿಸುತ್ತಿದೆ. ಪ್ರಜೆಗಳ ದಿನನಿತ್ಯದ ಬದುಕು ಸವಾಲಾಗಿ, ಕೆಲವೊಮ್ಮೆ ಅಸಹನೀಯವಾಗುತ್ತಿದೆ. ಎಂಭತ್ತು ಕೋಟಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಕೆಲವು ಕಿಲೋ ಧಾನ್ಯಗಳನ್ನು ವಿತರಿಸುವುದರಿಂದ ಬಡತನದ ಸಮಸ್ಯೆಯ ಮೂಲವನ್ನೇ ಪರಿಹರಿಸಲು ಸಾಧ್ಯವೇ? ಮೋದಿಯವರು 11 ವರ್ಷಗಳ ಹಿಂದೆ ಮಾಡಿದ ಆಶ್ವಾಸನೆಯಂತೆ, 22 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿತ್ತು. ಆದರೆ ನಿಜ ಹೇಳಬೇಕಾದರೆ, ಗರಿಷ್ಠ 2 ಅಥವಾ 3 ಕೋಟಿ ಉದ್ಯೋಗಗಳು ಮಾತ್ರ ಈ ಅವಧಿಯಲ್ಲಿ ಸೃಷ್ಟಿಯಾಗಿವೆ.
ಸಣ್ಣ ರೈತರಿಗೆ ಕೃಷಿಯು ಬಹುತೇಕ ನಷ್ಟದ ವ್ಯವಹಾರವಾಗಿಬಿಟ್ಟಿದೆ. ಆತಂಕದಿಂದ ತತ್ತರಿಸುತ್ತಿರುವ ರೈತರು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಆದರೆ ನಗರಗಳಲ್ಲಿಯೂ ಕೂಲಿಗೆ ತಕ್ಕ ವೇತನ ಏರಿಕೆಯಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರು ಸಂಕಷ್ಟದ ಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ.
ಇನ್ನೊಂದೆಡೆ ಬೆಲೆ ಏರಿಕೆ ಜನರಿಗೆ ಒಂದು ದೊಡ್ಡ ಹೊರೆಯಾಗಿದೆ. ಸರ್ಕಾರದ ನಿರ್ಲಕ್ಷ್ಯ ಎಷ್ಟು ಅತಿರೇಕಕ್ಕೇರಿದೆಯೆಂದರೆ, ಕೆಲವು ವರ್ಷಗಳ ಹಿಂದೆ ದೈನಂದಿನ ಬಳಕೆಯ ಪ್ಯಾಕ್ ಮಾಡಲಾದ ವಸ್ತುಗಳ ಮೇಲೆ 5% ಜಿಎಸ್ಟಿ ವಿಧಿಸಿದೆ. ಈ ಪಟ್ಟಿಯಲ್ಲಿ ಬಿಸ್ಕೆಟ್, ಹಾಲು, ಮೊಸರು, ಉಪ್ಪು ಕೂಡ ಸೇರಿವೆ. ಜಿಎಸ್ಟಿ ಜಾಲದಿಂದ ಹೊರಗಿರುವುದು ಯಾವುದೂ ಇಲ್ಲ, ಯಾರೂ ಇಲ್ಲ.
ಇಂಜಿನಿಯರಿಂಗ್ ಕಾಲೇಜುಗಳು ‘ಅಸಾಧಾರಣವಾಗಿ ನಿರುದ್ಯೋಗಿಯೆನಿಸಬಹುದಾದ’ ಸಾವಿರಾರು ಇಂಜಿನಿಯರ್ಗಳನ್ನು ಉಂಟುಮಾಡಿವೆ. ಇವರು ಡೆಲಿವರಿ ಬಾಯ್ಸ್ ಆಗಿ, ಆಟೋ ಚಾಲಕರಾಗಿ ಕೆಲಸಮಾಡುತ್ತಿದ್ದಾರೆ. ಇಸ್ರೇಲ್ನ ಯುದ್ಧಭರಿತ ಪ್ರದೇಶಗಳಲ್ಲಿ ನೂರಾರು ಯುವಕರು ಕಾರ್ಮಿಕರಾಗಿ ಸೇರಿಕೊಂಡಿದ್ದಾರೆ. ಪ್ರತಿ ವರ್ಷ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ 1.2 ಕೋಟಿ ಯುವಕರಿಗೆ ಸರ್ಕಾರ ಉದ್ಯೋಗ ನೀಡಲಾಗದೆ ತತ್ತರಿಸುತ್ತಿದೆ. ಇದರ ಪರಿಣಾಮವಾಗಿ ಯುವಜನತೆಯೊಳಗೆ ನಿರಾಸೆ, ವೈರತ್ವ ಮತ್ತು ಕ್ರೌರ್ಯ ಪ್ರವೃತ್ತಿಗಳು ಹೆಚ್ಚಾಗುತ್ತಿವೆ. ಇದು ದೇಶದ ಭವಿಷ್ಯಕ್ಕೆ ತುಂಬಾ ಅಪಾಯಕಾರಿಯಾಗಿದೆ.
ಪ್ರಜಾಪ್ರಭುತ್ವದ ‘ತಾಯಿನಾಡು’ ಎಂಬ ಹೆಸರಿರುವ ರಾಷ್ಟ್ರದ ಉನ್ನತ ಹಿರಿಯ ಅಧಿಕಾರಿಗಳೇ ‘ನಾವು – ಅವರು’, ‘ಅಕ್ರಮ ಪೌರರು’, ‘ಹೆಚ್ಚು ಸಂತಾನೋತ್ಪಾದನೆಗಾರರು’, ‘ಮಂಗಳಸೂತ್ರ ಕದಿಯುವವರು’, ‘ನಿಮ್ಮ ಊಟ ಕಸಿಯುವವರು’, ‘ನಿಮ್ಮ ಮಗಳನ್ನು ಅಪಹರಿಸುವವರು’ ನಿಮ್ಮ ಭೂಮಿಯನ್ನು ಅಗ್ರಮಿಸುವವರು ಎಂಬುವಾಗಿ ಬಹುಸಂಖ್ಯೆಯ ಜನರ ಮನಸ್ಸನ್ನು ವಿಷಗೊಳಿಸುತ್ತಿದ್ದಾರೆ.
ಅಡಾನಿ-ಅಂಬಾನಿಗಳಂತಹ ಅನೇಕ ಉದ್ಯಮಿಗಳು ಈ ರಾಜಕೀಯ ಕಾಲಘಟ್ಟದಲ್ಲಿ ಹುಟ್ಟಿಕೊಂಡಿದ್ದಾರೆ. ಅವರು ಇದೀಗ ಅಮೇರಿಕದ ಹೂಡಿಕೆ ಒತ್ತಡಗಳು ಮತ್ತು ರಾಜತಾಂತ್ರಿಕ ರೀತಿ-ನೀತಿ ಮೇಲಿನ ಬಲವಾದ ಪ್ರಭಾವದ ಮೂಲವಾಗಿದ್ದಾರೆ.
ಪಶ್ಚಿಮ ಗಾಝಾ ಮತ್ತು ವೆಸ್ಟ್ ಬ್ಯಾಂಕ್ನಲ್ಲಿ ಹತ್ಯೆಗೊಳಗಾದ ಪ್ಯಾಲೆಸ್ಟೀನಿ ಜನರ ಹಿಂಸೆಯ ಬಗ್ಗೆ ಭಾರತವು ತೋರಿಸಿದ ನೀಚ ಮೌನವು 57 OIC ರಾಷ್ಟ್ರಗಳ ಕೋಪಕ್ಕೆ ಕಾರಣವಾಗಿದೆ. ಕಾಶ್ಮೀರ ವಿಚಾರದಲ್ಲೂ ನಮ್ಮ ಬೆಂಬಲದಲ್ಲಿದ್ದ ಇರಾನ್ ಕೂಡ ಇದೀಗ ದೂರವಾಗಿದೆ. ಇಂತಹ ನಿರ್ಲಕ್ಷ್ಯವು ಭಾರತದ ಬಹು ವರ್ಷಗಳ ಮಿತ್ರತೆಯ ನಂಟು ಕೂಡ ಕಡಿದು ಹೋಗಲು ಕಾರಣವಾಗಿದೆ.
ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಅಧಿಕಾರದಿಂದ ತೆಗೆದುಹಾಕಲಾಗುತ್ತಿದೆ ಎಂಬ ಅಂದಾಜು ಕೇಳಿಬರುತ್ತಿದೆ, ಮತ್ತು ಈ ಬೃಹತ್ ಹೊಣೆಗಾರಿಕೆಗೆ ಶಶಿ ತರೂರ್ ಅವರನ್ನು ನೇಮಿಸಲಾಗುವ ನಿರೀಕ್ಷೆಯಿದೆ.
ಜೈಶಂಕರ್ ಅವರನ್ನು ಬಲಿಯ ಆಡನ್ನಾಗಿ ಮಾಡಲಾಗಿದೆ. ವಿದೇಶಾಂಗ ನೀತಿಯ ವೈಫಲ್ಯಕ್ಕೆ ನಿಜವಾದ ಹೊಣೆಗಾರರು ಪ್ರಧಾನಿ ಮತ್ತು ಪ್ರಧಾನಮಂತ್ರಿ ಕಚೇರಿಯೇ ಆಗಬೇಕಿತ್ತು.
ಈ ಸರ್ಕಾರದ ಆಡಳಿತದಿಂದ ಕೇಂದ್ರ ಹಾಗೂ ರಾಜ್ಯಗಳ ನಡುವೆ ಇರುವ ಸಂಬಂಧ ಕೂಡ ತೀವ್ರವಾಗಿ ಹದಗೆಟ್ಟಿದೆ. ಇದು ದೇಶದ ಏಕತೆ ಮತ್ತು ಅಖಂಡತೆಗೆ ಬಹಳ ಅಪಾಯಕಾರಿಯಾದ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಇದೆ ಜನಸಾಮಾನ್ಯರಲ್ಲಿ ಅಪನಂಬಿಕೆ, ರಾಜಕೀಯ ಕ್ಷೇತ್ರದಲ್ಲಿ ನೈತಿಕತೆಯು ಕುಸಿಯುತ್ತಿದೆ, ಕಾನೂನು ಆಡಳಿತವನ್ನು ಕಾಪಾಡುವಲ್ಲಿ ನಮ್ಮ ನ್ಯಾಯಾಂಗದ ಅಸಮರ್ಥತೆ ಎದ್ದು ತೋರುತ್ತಿದೆ– ಇವೆಲ್ಲವೂ ಇಂದು ನಮ್ಮೆದುರು ನಿಂತಿರುವ ಅತ್ಯಂತ ಭಯಾನಕ ವಿಷಯಗಳಾಗಿವೆ.
ಜನ ಸಮೂಹದ ನೈತಿಕ ಕುಸಿತದ ಕಗ್ಗತ್ತಲೆಯ ಬಿರುಸಿನಿಂದ ಭಾರತ ತನ್ನನ್ನು ಕಾಪಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಇದರ ಸಂಪೂರ್ಣ ಹೊಣೆಗಾರಿಕೆ ಇಂದಿನ ಸರ್ಕಾರ ಹಾಗೂ ರಾಜಕೀಯ ವರ್ಗದ ಮೇಲಿದೆ.
ಕೃಪೆ : ರೇಡಿಯನ್ಸ್












