ಗಣೇಶ ಹಬ್ಬಕ್ಕಾಗಿ ಮಿಲಾದ್ ಕಾರ್ಯಕ್ರಮವನ್ನು ಮುಂದೂಡಿದ ಧುಲೆ ಪಟ್ಟಣದ ಮುಸ್ಲಿಮರು: ವ್ಯಾಪಕ ಶ್ಲಾಘನೆ

0
608

ಸನ್ಮಾರ್ಗ ವಾರ್ತೆ

ಮಹಾರಾಷ್ಟ್ರದ ಧುಲೆ ಪಟ್ಟಣದ ಮುಸ್ಲಿಮರು ವಿಶೇಷ ಘೋಷಣೆ ಮಾಡಿದ್ದಾರೆ. ಈ ನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರಿದ್ದು ಗಣೇಶ ಹಬ್ಬವನ್ನು ಪರಿಗಣಿಸಿ ಮೀಲಾದ್ ಕಾರ್ಯಕ್ರಮವನ್ನು ಮುಂದೂಡುವುದಾಗಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಆಗಸ್ಟ್ 27ರಿಂದ 10 ದಿನಗಳ ಕಾಲ ಗಣೇಶ ಹಬ್ಬ ನಡೆಯಲಿದೆ. ಸೆಪ್ಟೆಂಬರ್ 5 ಮೀಲಾದ್ ದಿನವಾಗಿದ್ದು ಇದೀಗ ಮಿಲಾದ್ ಕಾರ್ಯಕ್ರಮವನ್ನು ಗಣೇಶ ಹಬ್ಬದ ಬಳಿಕ ಆಚರಿಸಲು ಮುಸ್ಲಿಮರು ನಿರ್ಧರಿಸಿದ್ದಾರೆ.

ಎರಡೂ ಸಂಭ್ರಮಗಳು ಜೊತೆಯಾಗಿ ಬಂದಿರುವುದರಿಂದ ಪಟ್ಟಣದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಸಭೆ ಕರೆದಿದ್ದರು . ಇದರಲ್ಲಿ ಎರಡೂ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು. ಬಳಿಕ ಜಿಲ್ಲಾಧಿಕಾರಿಯವರು ಮಿಲಾದ್ ಸಂಭ್ರಮದ ದಿನಾಂಕವನ್ನು ಬದಲಿಸುವಂತೆ ವಿನಂತಿಸಿದ್ದರು.

ಸಭೆಯಲ್ಲಿ ಮುಸ್ಲಿಂ ನಾಯಕರು ಪರಸ್ಪರ ಚರ್ಚಿಸಿ ಅಂತಿಮವಾಗಿ ಜಿಲ್ಲಾಧಿಕಾರಿ ಅವರ ವಿನಂತಿಯನ್ನು ಸ್ವೀಕರಿಸಿದರು. ಸೆಪ್ಟೆಂಬರ್ 8ರಂದು ಮಿಲಾದ್ ಕಾರ್ಯಕ್ರಮ ನಡೆಸುವುದಾಗಿ ಹೇಳಿದರು.

ಈ ನಿರ್ಧಾರಕ್ಕಾಗಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್ ಶ್ಲಾಘಿಸಿದರು. ಮಾತ್ರ ಅಲ್ಲ ಮುಸ್ಲಿಂ ಮುಖಂಡರನ್ನು ಸ್ಥಳದಲ್ಲೇ ಸನ್ಮಾನಿಸಿ ಗೌರವಿಸಿದರು.

ಮುಂಬೈಯಲ್ಲಿ ಗಣೇಶ ಹಬ್ಬ ಅನ್ನುವುದು ಬಹಳ ದೊಡ್ಡ ಸಂಭ್ರಮವಾಗಿದೆ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಹೇಗೆ ಪ್ರಸಿದ್ಧವೋ ಹಾಗೆಯೇ ಮಹಾರಾಷ್ಟ್ರಕ್ಕೆ ಗಣೇಶ ಹಬ್ಬ ಪ್ರಸಿದ್ಧ. 10 ದಿನಗಳ ಕಾಲ ಈ ಹಬ್ಬವನ್ನು ಮಹಾರಾಷ್ಟ್ರದಲ್ಲಿ ಆಚರಿಸಲಾಗುತ್ತದೆ.